ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | 'ಡೆಂಗಿ ತಡೆಗೆ ತುರ್ತು ಕ್ರಮ ಕೈಗೊಳ್ಳಿ'

ಕಿಮ್ಸ್ ಆಸ್ಪತ್ರೆಗೆ ಶಾಸಕರಾದ ಬೆಲ್ಲದ, ಟೆಂಗಿನಕಾಯಿ ಭೇಟಿ, ಪರಿಶೀಲನೆ
Published 7 ಜುಲೈ 2024, 16:18 IST
Last Updated 7 ಜುಲೈ 2024, 16:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಅವರು ಇಲ್ಲಿನ ಕಿಮ್ಸ್ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿ ‍ಪರಿಶೀಲಿಸಿದರು.

ಚಿಕ್ಕಮಕ್ಕಳ ತೀವ್ರ ನಿಗಾ ಘಟಕ, ಮಕ್ಕಳ ಸಾಮಾನ್ಯ ವಾರ್ಡ್‌ಗಳಿಗೆ ಭೇಟಿ ನೀಡಿದ ಅವರು, ಮಕ್ಕಳ ಆರೋಗ್ಯ ವಿಚಾರಿಸಿದರು. ಪೋಷಕರಿಂದ ಆಸ್ಪತ್ರೆಯಲ್ಲಿ ಸಿಗುತ್ತಿರುವ ಚಿಕಿತ್ಸೆ, ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ‘ರಾಜ್ಯದಲ್ಲಿ ಡೆಂಗಿ ಹಾವಳಿ ಹೆಚ್ಚಾಗಿದೆ. ಚಿಕ್ಕ ಮಕ್ಕಳಲ್ಲಿ ಹೆಚ್ಚು ಡೆಂಗಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ. ಸೊಳ್ಳೆಗಳು ಉತ್ಪತ್ತಿಯಾಗದಂತೆ ಪಟ್ಟಣ ಪಂಚಾಯಿತಿ, ಮಹಾನಗರ ಪಾಲಿಕೆಯಿಂದ ಫಾಗಿಂಗ್ ಮಾಡುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಮತ್ತು ತುರ್ತು ಕ್ರಮ ಕೈಗೊಳ್ಳಬೇಕು’ ಎಂದರು.

‘ಕಿಮ್ಸ್‌ನಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳು, ಪಾಲಕರಿಂದ ಈ ಬಗ್ಗೆ ಮಾಹಿತಿ ಪಡೆಯಲಾಗಿದೆ. ಇತರ ಆಸ್ಪತ್ರೆಗಳಲ್ಲೂ ಅಗತ್ಯ ಚಿಕಿತ್ಸೆ ಸಿಗುವಂತೆ ಮಾಡಬೇಕು’ ಎಂದು ಹೇಳಿದರು.

‘ಏಪ್ರಿಲ್‌ನಿಂದ ಈವರೆಗೆ ಡೆಂಗಿಯಿಂದ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ. ವಯಸ್ಕರ ವಾರ್ಡ್‌ನಲ್ಲಿ 48, ಮಕ್ಕಳ ವಾರ್ಡ್‌ನಲ್ಲಿ 33 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾವೇರಿ, ಬಳ್ಳಾರಿ, ಗದಗ, ಉತ್ತರ ಕನ್ನಡದ ರೋಗಿಗಳು ಇಲ್ಲಿ ದಾಖಲಾಗಿದ್ದಾರೆ’ ಎಂದು ವೈದ್ಯರು ತಿಳಿಸಿರುವುದಾಗಿ ಮಾಹಿತಿ ನೀಡಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ‘ಕೋವಿಡ್ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿದ್ದರಿಂದ ಕಿಮ್ಸ್‌ಗೆ ಉತ್ತಮ ಹೆಸರು ಬಂದಿದೆ. ಈಗ ಡೆಂಗಿ ಹಾವಳಿ ಹೆಚ್ಚಾಗಿದ್ದು, ಧಾರವಾಡದ ಸುತ್ತಮುತ್ತಲಿನ ಜಿಲ್ಲೆಗಳ ರೋಗಿಗಳು ಚಿಕಿತ್ಸೆಗಾಗಿ ಕಿಮ್ಸ್‌ಗೆ ಬರುತ್ತಿದ್ದಾರೆ’ ಎಂದರು.

‘ಕೊನೆಯ ಹಂತದಲ್ಲಿ ರೋಗಿಗಳನ್ನು ಇಲ್ಲಿಗೆ ಕರೆತರಲಾಗುತ್ತದೆ. ಇಲ್ಲಿ ಮೃತಪಟ್ಟರೆ ಕಿಮ್ಸ್‌ಗೆ ಕೆಟ್ಟ ಹೆಸರು ಬರುತ್ತದೆ. ಅಂತಿಮ ಹಂತದಲ್ಲಿ ಕರೆತರುವ ಬದಲು ಆರಂಭಿಕ ಹಂತದಲ್ಲಿ ಬಂದು ದಾಖಲಾದರೆ ಗುಣಮುಖರಾಗಬಹುದು. ವೈದ್ಯರಿಗೂ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಡೆಂಗಿ ಬಾರದಂತೆ ತಡೆಯಲು ಸ್ವಚ್ಛತೆ ಕಾಪಾಡುವುದು, ಸೊಳ್ಳೆ ಕಚ್ಚದಂತೆ ನೋಡಿಕೊಳ್ಳುವುದೊಂದೆ ಮದ್ದು.  ಮಹಾನಗರ ಪಾಲಿಕೆಯಲ್ಲಿ 82 ವಾರ್ಡ್‌ಗಳಿದ್ದು, ನಾಲ್ಕೈದು ವಾರ್ಡ್‌ಗಳಿಗೆ ಸೇರಿ ಒಂದು ಫಾಗಿಂಗ್ ಯಂತ್ರ ಇದೆ. ಯಂತ್ರಗಳ ಖರೀದಿಗೆ ಹಣದ ಕೊರತೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಸರ್ಕಾರ ಈ ಕೊರತೆ ನೀಗಿಸಬೇಕು.  ಕೋವಿಡ್‌ ಸಂದರ್ಭದಲ್ಲಿ ಸರ್ಕಾರ ತುರ್ತು ಕ್ರಮ ಕೈಗೊಂಡ ರೀತಿ ಈಗಲೂ ಕಾರ್ಯನಿರ್ವಹಿಸಬೇಕು’ ಎಂದು ಆಗ್ರಹಿಸಿದರು.

ಕಿಮ್ಸ್ ನಿರ್ದೇಶಕ ಡಾ.ಎಸ್.ಎಫ್‌.ಕಮ್ಮಾರ ಮಾತನಾಡಿ, ‘ಡೆಂಗಿಗೆ ಸಂಬಂಧಿಸಿದಂತೆ ಏಪ್ರಿಲ್‌ನಿಂದ ಜುಲೈವರೆಗೆ 1,200 ಜನರ ತಪಾಸಣೆ ಮಾಡಲಾಗದೆ. ಡೆಂಗಿಯಿಂದ ನಾಲ್ಕು ಮಕ್ಕಳು ಮೃತಪಟ್ಟಿದ್ದು, ಅವರೆಲ್ಲರೂ ಬೇರೆ ಬೇರೆ ಜಿಲ್ಲೆಯವರು’ ಎಂದರು.

‘ಡೆಂಗಿ ನಿರ್ವಹಣೆಗೆ ಕಿಮ್ಸ್ ವೈದ್ಯರ ತಂಡ ಸನ್ನದ್ಧವಾಗಿದೆ. ಮಕ್ಕಳ ವಾರ್ಡ್‌ನಲ್ಲಿ 18 ಮಕ್ಕಳು ಐಸಿಯು ಮತ್ತು ಇತರ ವಾರ್ಡ್‌ನಲ್ಲಿ 2 ರೋಗಿಗಳು ಐಸಿಯುನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯ ಇಲ್ಲ’ ಎಂದು ಹೇಳಿದರು.

ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿದರೆ ಡೆಂಗಿ ನಿಯಂತ್ರಿಸಲು ಸಾಧ್ಯ.  ಡೆಂಗಿ ಬಂದರೂ ಜನ ಹೆದರುವ ಅಗತ್ಯ ಇಲ್ಲ. ಅಗತ್ಯ ಚಿಕಿತ್ಸೆ ಪಡೆದರೆ ಗುಣಪಡಿಸಲು ಸಾಧ್ಯ ಎಂದರು.

ಡಾ.ಈಶ್ವರ ಹೊಸಮನಿ, ಡಾ.ರಾಜಶೇಖರ ದ್ಯಾಬೇರಿ, ವಿನೋದ ರಟಗೇರಿ ಇತರರು ಇದ್ದರು.

Highlights - ರೋಗಿಗಳ ಆರೋಗ್ಯ ವಿಚಾರಿಸಿದ ಶಾಸಕರು ಡೆಂಗಿಯಿಂದ ನಾಲ್ಕು ಮಕ್ಕಳು ಸಾವು ಏಪ್ರಿಲ್‌ನಿಂದ ಜುಲೈವರೆಗೆ 1,200 ಜನರ ತಪಾಸಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT