ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ’ಐಕಾನ್‌’ ಚನ್ನಮ್ಮ ಮೂರ್ತಿ

Published 31 ಆಗಸ್ಟ್ 2023, 6:04 IST
Last Updated 31 ಆಗಸ್ಟ್ 2023, 6:04 IST
ಅಕ್ಷರ ಗಾತ್ರ

ನಾಗರಾಜ್‌ ಬಿ.ಎನ್‌.

ಬೆಂಗಳೂರು ಎಂದಾಕ್ಷಣ ವಿಧಾನಸೌಧ ಹೇಗೆ ಕಣ್ಮುಂದೆ ಬರುತ್ತದೆಯೋ, ಹಾಗೆಯೇ ಹುಬ್ಬಳ್ಳಿ ಎಂದಾಗ ಕಿತ್ತೂರ ರಾಣಿ ಚನ್ನಮ್ಮ ವೃತ್ತ ಥಟ್‌ ಅತ ಕಣ್ಣೆದುರಿಗೆ ಬರುತ್ತದೆ. ಉತ್ತರ ಕರ್ನಾಟಕದ ಹೆಬ್ಬಾಗಿಲಾಗಿರುವ ಹುಬ್ಬಳ್ಳಿಗೆ ಈ ವೃತ್ತದಲ್ಲಿರುವ ಚನ್ನಮ್ಮ ಮೂರ್ತಿ ಒಂದು ಐಕಾನ್!

ನಾಲ್ಕು ರಾಷ್ಟ್ರೀಯ ಹೆದ್ದಾರಿಗಳ(ಎನ್‌ಎಚ್‌ 4 ಎರಡು ಕಡೆ, ಎನ್‌ಎಚ್‌ 63, ಎನ್‌ಎಚ್‌ 218) ಕೂಡು ಸ್ಥಳವಾದ ಈ ವೃತ್ತ, ಉತ್ತರ ಕರ್ನಾಟಕ ಭಾಗದ ಅನೇಕ‌ ಜಿಲ್ಲೆಗಳಿಗೆ ಸಂಪರ್ಕ ಸ್ಥಳವೂ ಹೌದು. ಇಷ್ಟೊಂದು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಹೊಂದಿರುವ ವೃತ್ತ ರಾಜ್ಯದಲ್ಲಿ ಮತ್ತೆಲ್ಲಿಯೂ ಇಲ್ಲ. ಇವುಗಳ ಜೊತೆ ರಾಜ್ಯ ಹೆದ್ದಾರಿಯೂ ಸೇರಿ, ಒಟ್ಟು ಎಂಟು ಮುಖ್ಯ ರಸ್ತೆಗಳು ಈ ವೃತ್ತದಲ್ಲಿ ಸಂಪರ್ಕಿಸುತ್ತವೆ. ಸದಾ ಜನಜಂಗುಳಿ, ವಾಹನಗಳ ಸಂಚಾರದಿಂದ ಕೂಡಿರುವ ಈ ವೃತ್ತದ ಮಧ್ಯದಲ್ಲಿ ಅಶ್ವಾರೂಢ ರಾಣಿ ಚನ್ನಮ್ಮ ಮೂರ್ತಿ, ಶೌರ್ಯದ ಪ್ರತೀಕವಾಗಿ ಕಂಗೊಳಿಸುತ್ತಿದೆ.

ಮೂರ್ತಿ ಪ್ರತಿಷ್ಠಾಪನೆ ಇತಿಹಾಸ

ಈ ಮೂರ್ತಿ ಪ್ರತಿಷ್ಠಾಪನೆ ಹಿಂದೆ ಎರಡು, ಮೂರು ವರ್ಷಗಳ ಹೋರಾಟವೇ ಇದೆ. 1984 ಪೂರ್ವ ಚನ್ನಮ್ಮ ಮೂರ್ತಿ ಇರುವ ಈಗಿನ ಸುತ್ತಲಿನ ಪ್ರದೇಶವನ್ನು ‘ಕಿತ್ತೂರು ರಾಣಿ ಚನ್ನಮ್ಮ ವೃತ್ತ’ ಎಂದೇ ಕರೆಯಲಾಗುತ್ತಿತ್ತು. ಆದರೆ, ಅಲ್ಲಿ ಚನ್ನಮ್ಮ ಮೂರ್ತಿ ಇರಲಿಲ್ಲ. ಆ ಸಂದರ್ಭ ನಗರದಲ್ಲೊಂದು ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆಯಾಗಬೇಕು ಎನ್ನುವ ಕೂಗು ಸಾರ್ವಜನಿಕರಿಂದ ಬಲವಾಗಿ ಕೇಳಿ ಬಂದಿತ್ತು. ಪರ ವಿರೋಧದ ಚರ್ಚೆ ಜೋರಾಗಿಯೇ ನಡೆದಿತ್ತು ಎಂದು ಡಾ. ಪಾಂಡುರಂಗ ಪಾಟೀಲ ಅಂದಿನ ದಿನಗಳನ್ನು ನೆನಪಿಸಿಕೊಂಡರು.

‘ಹು–ಧಾ ಮಹಾನಗರ ಪಾಲಿಕೆಯಲ್ಲಿ ಪಿ.ಎಚ್‌. ಪವಾರ್‌ ಮೇಯರ್‌ ಆಗಿದ್ದರು. ಮೂರ್ತಿಪ್ರತಿಷ್ಠಾಪಿಸುವ ಕುರಿತು ಪಾಲಿಕೆ ಸಭೆಯಲ್ಲಿ ಠರಾವು ಪಾಸ್‌ ಮಾಡಲಾಯಿತು. ಬಸವವನ ಬಳಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪಿಸುವುದು ಎಂದು ತೀರ್ಮಾನಿಸಿ, ಅಲ್ಲಿ ಅಡಿಪಾಯ ಹಾಕಿ ಕಟ್ಟೆ ಕಟ್ಟಲಾಯಿತು. ಮುಂಬೈನಲ್ಲಿರುವ ಕಂಪನಿಯೊಂದಕ್ಕೆ ಮೂರ್ತಿ ಸಿದ್ಧಪಡಿಸಲು ಆರ್ಡರ್‌ ನೀಡಲಾಯಿತು. ಮೂರ್ತಿ ಹುಬ್ಬಳ್ಳಿಗೆ ತರುವ ಸಂದರ್ಭ, ಬಸವವನ ಬಳಿ ಬೇಡ ಚನ್ನಮ್ಮ ವೃತ್ತದಲ್ಲಿಯೇ ಪ್ರತಿಷ್ಠಾಪಿಸಬೇಕು ಎನ್ನುವ ಒತ್ತಡ, ಗೊಂದಲ, ಹೋರಾಟ ಆರಂಭವಾಯಿತು. ಎಸ್‌.ಆರ್‌. ಬೊಮ್ಮಾಯಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಅವರ ತೀರ್ಮಾನದಂತೆ ಚನ್ನಮ್ಮ ವೃತ್ತದ ಮಧ್ಯ ಭಾಗದಲ್ಲಿಯೇ ಚನ್ನಮ್ಮ ಮೂರ್ತಿ ಪ್ರತಿಷ್ಠಾಪಿಸುವುದು ಎಂದು ತೀರ್ಮಾನಿಸಿ, 1986ರಲ್ಲಿ ಮೂರ್ತಿ ಪ್ರತಿಷ್ಠಾಪನೆಯಾಯಿತು’ ಎಂದು ಆ ದಿನಗಳನ್ನು ಮೆಲುಕು ಹಾಕಿದರು.

ಕೆಲ ಕಲಾವಿದರ ಆಕ್ಷೇಪ

‘ಮೂರ್ತಿಯ ದೇಹ ಪುರುಷನದ್ದು, ತಲೆ ಭಾಗ ಮಾತ್ರ ಚನ್ನಮ್ಮರದ್ದು, ಧರಿಸಿರುವ ಚಪ್ಪಲಿ ಉತ್ತರ ಭಾರತದ ಶೈಲಿಯದ್ದಾಗಿದೆ ಎಂದು ಕೆಲವರು ಕಲಾವಿದರು ಆಕ್ಷೇಪ ವ್ಯಕ್ತಪಡಿಸಿದ್ದರು.  ಈಗಾಗಲೇ ಮೂರು ವರ್ಷ ಹೋರಾಟ ನಡೆದಿದ್ದು, ಪ್ರತಿಷ್ಠಾಪನೆಯನ್ನು ಶಾಂತಿಯಿಂದ ಮಾಡೋಣ ಎಂದು ಎಲ್ಲರಲ್ಲಿ ವಿನಂತಿಸಿ, ಮನವೊಲಿಸಲಾಯಿತು. 15 ಅಡಿ ಎತ್ತರದ ಅಶ್ವಾರೂಢ ಚನ್ನಮ್ಮರ ಕಂಚಿನಮೂರ್ತಿ 2.50 ಕ್ವಿಂಟಲ್‌ ಭಾರವಿದೆ. ಆಗ ಅದಕ್ಕೆ ₹6 ಲಕ್ಷ ವೆಚ್ಚವಾಗಿತ್ತು‘ ಎಂದು ತಿಳಿಸಿದರು.

30ಕ್ಕೂ ಹೆಚ್ಚು ಚಿತ್ರ ಚಿತ್ರೀಕರಣ

1993ರಲ್ಲಿ ರಾಜಕುಮಾರ್ ಅಭಿನಯದ ಆಕಸ್ಮಿಕ ಚಲನ ಚಿತ್ರದಲ್ಲಿನ 'ಹುಟ್ಟಿದರೆ ಕನ್ನಡ ನಾಡಲ್ಲಿಹುಟ್ಟಬೇಕು...' ಹಾಡಿನ ಚಿತ್ರೀಕರಣದ ನಂತರ ಈ ಚನ್ನಮ್ಮ ವೃತ್ತ ಮತ್ತಷ್ಟು ಜನಪ್ರಿಯವಾಯಿತು‌. ದೇಶ ವಿದೇಶಗಳಿಗೂ ತನ್ನ ಖ್ಯಾತಿ ವ್ಯಾಪಿಸಿಕೊಂಡಿತು. ಅಂಬರೀಶ್‌ ಅಭಿನಯದ ಅಣ್ಣಾವ್ರು ಪುನೀತ್‌ ರಾಜ್‌ ಕುಮಾರ ಅಭಿನಯದ ಅಜಯ ರಾಜಕುಮಾರ ಶಿವರಾಜ್‌ ಕುಮಾರ್ ಅಭಿನಯದ ಶ್ರೀರಾಮ ಸುದೀಪ್‌ ಅಭಿನಯದ ಹುಬ್ಬಳ್ಳಿ ದರ್ಶನ್‌ ಅವರ ಅಯ್ಯ ಪ್ರಜ್ವಲ್‌ ದೇವರಾಜ್ ಅವರ ಕೋಟೆ ಸೂರ್ಯ ಐಪಿಎಸ್‌ ಸೇರಿದಂತೆ  ಕನ್ನಡದ 30ಕ್ಕೂ ಹೆಚ್ಚು ಚಿತ್ರಗಳ‌ ಹಾಡಿನ ಹಾಗೂ ವಿವಿಧ ಸನ್ನಿವೇಶಗಳ ಚಿತ್ರೀಕರಣ ನಡೆದಿದೆ.

ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ವಾಹನಗಳ ಸಂಚಾರ
ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ವಾಹನಗಳ ಸಂಚಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT