ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನ, ಗುಣಕ್ಕೆ ಜಗತ್ತಿನಲ್ಲಿ ಬೇಡಿಕೆ

ವಿಪ್ರ ಮಹಾ ಸಮಾವೇಶ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ
Last Updated 20 ಮಾರ್ಚ್ 2023, 5:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಜ್ಞಾನ ಮತ್ತು ಒಳ್ಳೆಯ ಗುಣಕ್ಕೆ ಜಗತ್ತಿನಲ್ಲಿ ಇಂದು ಬೇಡಿಕೆ ಹೆಚ್ಚಾಗಿದೆ. ಇವೆರಡನ್ನೂ ಹೊಂದಿದವರು ಎಲ್ಲಿ ಬೇಕಾದರೂ ಬದುಕು ಕಟ್ಟಿಕೊಳ್ಳಬಹುದು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ವಿಶ್ವ ವಿಪ್ರ ಸೇವಾ ಟ್ರಸ್ಟ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ ವಿಪ್ರ ಮಹಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಜಗತ್ತಿಗೆ ಪರಿಣತ ವೈದ್ಯರು, ಶಿಕ್ಷಕರು ಸೇರಿದಂತೆ ಅನೇಕ ವೃತ್ತಿಪರರು ಬೇಕಾಗಿದ್ದಾರೆ. ಇಂಥ ಅಗತ್ಯಗಳನ್ನು ಪೂರೈಸಲು ಸಜ್ಜಾಗಬೇಕಿದೆ. ಆ ನಿಟ್ಟಿನಲ್ಲಿ ಮಕ್ಕಳಲ್ಲಿ ಕೌಶಲ, ಧೈರ್ಯ ಬೆಳೆಯಬೇಕಿದೆ’ ಎಂದು ಹೇಳಿದರು.

‘ಬ್ರಾಹ್ಮಣ ಸಮಾಜ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಅದಕ್ಕೆಲ್ಲ ಪರಿಹಾರ ಇರುವುದು ಸಂಘಟನೆಯಲ್ಲಿ ಮಾತ್ರ’ ಎಂದು ವಿಶ್ವ ವಿಪ್ರ ಸೇವಾ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣ ಚಿದಂಬರ ಕುಲಕರ್ಣಿ ಹೇಳಿದರು.

‘ಬ್ರಾಹ್ಮಣರಿಗೆ ಸಮಾಜ ಏನೇ ಹಣೆಪಟ್ಟಿ ಕಟ್ಟಬಹುದು. ಆದರೆ ಬ್ರಾಹ್ಮಣ ವೈದ್ಯ, ವಕೀಲ, ಶಿಕ್ಷಣ ಸಂಸ್ಥೆಗಳನ್ನು ಹುಡುಕಿಕೊಂಡು ಜನರು ಬರುತ್ತಾರೆ. ನಿರಂತರವಾಗಿ ಸಮಾಜದ ಒಳಿತಿಗಾಗಿ ಯೋಚಿಸುವ ಕಾರಣ ಬ್ರಾಹ್ಮಣರಿಗೆ ಈ ಮಹತ್ವ ದೊರೆತಿದೆ’ ಎಂದು ಉದ್ಯಮಿ ಎನ್.ಎಚ್. ನಂದಕುಮಾರ ಹೇಳಿದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಡಾ. ಎಂ.ಎಂ. ಜೋಶಿ, ‘ತ್ರಿಮತಸ್ಥ ಬ್ರಾಹ್ಮಣರು ಒಂದಾಗಿ ಮುನ್ನಡೆಯಬೇಕು’ ಎಂದು ಆಶಿಸಿದರು.

ಟ್ರಸ್ಟ್ ಕಾರ್ಯದರ್ಶಿ ಪವನ ದೇಸಾಯಿ ಸ್ವಾಗತಿಸಿದರು. ವಸಂತ ನಾಡಜೋಶಿ, ಪ್ರಕಾಶ ಜೋಶಿ, ದತ್ತಮೂರ್ತಿ ಕುಲಕರ್ಣಿ ಇದ್ದರು.

ವಿವಿಧ ಗೋಷ್ಠಿ: ಮಧ್ಯಾಹ್ನದ ನಂತರ ವಿವಿಧ ಗೋಷ್ಠಿಗಳು ನಡೆದವು. ‘ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಾಹ್ಮಣರ ಪಾತ್ರ’ದ ಕುರಿತು ಕೃಷ್ಣ ಕೊಲ್ಹಾರ ಕುಲಕರ್ಣಿ, ‘ಬ್ರಾಹ್ಯಣ್ಯ ಮತ್ತು ಮಹಿಳೆ’ ಗೋಷ್ಠಿಯಲ್ಲಿ ಮೃಣಾಲಿನಿ ಜೋಶಿ ವಿಚಾರ ಮಂಡಿಸಿದರು.

‘ವಿಪ್ರರ ಸಮಸ್ಯೆ, ಸಂಘಟನೆ ಹಾಗೂ ಪರಿಹಾರ’ ಗೋಷ್ಠಿಯಲ್ಲಿ ಹರ್ಷ ಡಂಬಳ, ‘ಯುವಕರು ಮತ್ತು ಧರ್ಮ’ ಗೋಷ್ಠಿಯಲ್ಲಿ ನಿತೀಶ ಡಂಬಳ ಮತ್ತು ‘ವಿಪ್ರ ಮಹಿಳೆ ಎದುರಿಸುತ್ತಿರುವ ಸಮಸ್ಯೆ, ಸಂಘಟನೆ ಮತ್ತು ಪರಿಹಾರ’ ಗೋಷ್ಠಿಯಲ್ಲಿ ವಿದ್ಯಾ ಕುಲಕರ್ಣಿ ವಿಚಾರ ಮಂಡಿಸಿದರು.

ಹಿರಿಯ ವಕೀಲ ಅರುಣ ಜೋಶಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಾಜಿ ಮೇಯರ್ ಪೂರ್ಣಾ ‍ಪಾಟೀಲ ಇದ್ದರು. ಇದಕ್ಕೂ ಮುನ್ನ ಜ್ಯೋತಿ ಹೆಗಡೆ ರುದ್ರವೀಣೆ ವಾದನ ಪ್ರಸ್ತುತಪಡಿಸಿದರೆ ಸುಜಾತಾ ಎಂ. ಕುಲಕರ್ಣಿ ಸಿತಾರ್ ವಾದನ ಪ್ರಸ್ತುತಪಡಿಸಿದರು.

**

ಸಮಾವೇಶದ ನಿರ್ಣಯಗಳು

* ಕೇಂದ್ರ ಸರ್ಕಾರವು ಮೇಲ್ವರ್ಗದ ಬಡವರಿಗಾಗಿ ಜಾರಿಗೆ ತಂದಿರುವ ಶೇ 10ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಬೇಕು.

* ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ರಾಜ್ಯ ಸರ್ಕಾರವು ಪ್ರತಿ ಬಜೆಟ್‌ನಲ್ಲಿ ₹100 ಕೋಟಿ ನೀಡಬೇಕು.

* ಬ್ರಾಹ್ಮಣರಿಗೆ ಸಾಮಾಜಿಕ, ಧಾರ್ಮಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ರಂಗದಲ್ಲಿ ಆದ್ಯತೆ ನೀಡಬೇಕು.

* ಪ್ರತಿ ಜಿಲ್ಲೆಯಲ್ಲಿ ವಿದ್ಯಾರ್ಥಿನಿಲಯಗಳಿಗೆ ಕಟ್ಟಡ ಸಹಿತ ಸ್ಥಳ ಮಂಜೂರು ಮಾಡಬೇಕು.

* ಹಿಂದೂ ಸನಾತನ ಮಠ, ಮಂದಿರಗಳ ಆಡಳಿತದಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಬಾರದು.

* ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೀಘ್ರವೇ ‘ಆರ್ಥಿಕವಾಗಿ ಹಿಂದುಳಿದ ವರ್ಗ’ ಪ್ರಮಾಣಪತ್ರ ನೀಡಬೇಕು ಮತ್ತು ಅದರ ಅವಧಿಯನ್ನು 5 ವರ್ಷಕ್ಕೆ ಹೆಚ್ಚಿಸಬೇಕು.

* ಮಧ್ವ ನವಮಿ ಮತ್ತು ರಾಮಾನುಜಾಚಾರ್ಯರ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ಘೋಷಿಸಬೇಕು.

**

ಸಭಿಕರ ಆಕ್ರೋಶ

ಬೆಳಿಗ್ಗೆ 10 ಗಂಟೆಗೆ ಸಮಾರಂಭ ನಿಗದಿ ಆಗಿತ್ತು. ಆದರೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬರುವುದು ವಿಳಂಬವಾದ ಕಾರಣ, ವೇದಿಕೆ ಕಾರ್ಯಕ್ರಮದ ಆರಂಭ ವಿಳಂಬವಾಯಿತು. ಇದರಿಂದ ಬೇಸತ್ತ ಸಭಿಕರಲ್ಲೊಬ್ಬರು, ವೇದಿಕೆ ಏರಿ ಸಂಘಟಕರನ್ನು ತರಾಟೆಗೆ ತೆಗೆದುಕೊಂಡರು. ಅವರಿಗೆ ಇನ್ನಷ್ಟು ಸಭಿಕರು ದನಿಗೂಡಿಸಿದರು. ಇದರಿಂದ ಮುಜುಗರಕ್ಕೆ ಒಳಗಾದ ಸಂಘಟಕರು, ಮಧ್ಯಾಹ್ನ 12.35ಕ್ಕೆ ಕಾರ್ಯಕ್ರಮ ಆರಂಭಿಸಿದರು. ನಂತರ ಜೋಶಿ ಸಮಾರಂಭಕ್ಕೆ ಬಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT