ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಮುಕ್ತ ಭಾರತ ಅಸಾಧ್ಯ: ದಿನೇಶ್‌

ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಸಮಿತಿ ಪದಾಧಿಕಾರಿಗಳ ಪದಗ್ರಹಣ
Last Updated 25 ಅಕ್ಟೋಬರ್ 2019, 11:37 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಾಂಗ್ರೆಸ್‌ ಮುಕ್ತ ಭಾರತ ಎಂಬ ಬಿಜೆಪಿ ಯತ್ನ ಎಂದಿಗೂ ಈಡೇರದು. ಯಾರೂ ಏನೇ ಮಾಡಿದರೂ ಕಾಂಗ್ರೆಸ್‌ ನಿರ್ನಾಮ ಅಸಾಧ್ಯ. ದೇಶಕ್ಕೆ ಕಾಂಗ್ರೆಸ್‌ ಅನಿವಾರ್ಯ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ಇಲ್ಲಿನ ಆರ್‌.ಎನ್‌.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಲಾಗಿದ್ದ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಸಮಿತಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಿಜೆಪಿಯಲ್ಲಿ ಇದ್ದರೆ ಮಾತ್ರ ಹಿಂದುಗಳು, ದೇಶಪ್ರೇಮಿಗಳು. ಉಳಿದ ಪಕ್ಷಗಳಲ್ಲಿ ಇರುವವರು ಹಿಂದೂ ವಿರೋಧಿಗಳು, ದೇಶದ್ರೋಹಿಗಳು ಎಂದು ದೇಶದ ಯುವ ಸಮುದಾಯದ ಮನಸ್ಸಿನಲ್ಲಿ ಸುಳ್ಳನ್ನು ಬಿತ್ತುವಲ್ಲಿ ಆರ್‌ಎಸ್‌ಎಸ್‌, ಬಿಜೆಪಿ ನಿರತವಾಗಿವೆ ಎಂದು ಹೇಳಿದರು.

70 ವರ್ಷಗಳಿಂದ ದೇಶವನ್ನು ಕಟ್ಟುವ, ಒಗ್ಗೂಡಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡಿಕೊಂಡು ಬಂದಿದೆ. ಆದರೆ, ಬಿಜೆಪಿಯು ಸುಳ್ಳು ಹೇಳುವ ಮತ್ತು ಜನರ ಭಾವನೆಯನ್ನು ಕೆರಳಿಸುವ ಮೂಲಕ ದೇಶವನ್ನು ಒಡೆಯುವ ಕಾರ್ಯದಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.

ನಂಬಲು ಸಾಧ್ಯವಾಗುತ್ತಿಲ್ಲ:

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯು ಆಸೆ, ಆಮಿಷಗಳನ್ನು ಒಡ್ಡಿ ಕಾಂಗ್ರೆಸ್‌ನ ಪ್ರಮುಖರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಹೀಗಾಗಿ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್‌ ಸಂಪೂರ್ಣ ನೆಲಕಚ್ಚುತ್ತದೆ ಎಂದು ಮಾಧ್ಯಮಗಳಲ್ಲಿ ಬಿಂಬಿಸಲಾಯಿತು. ಇದರಿಂದ ನಮ್ಮ ಮೇಲೆ ನಮಗೇ ವಿಶ್ವಾಸ ಹೊರಟು ಹೋಗಿತ್ತು. ಆದರೆ, ಎರಡೂ ರಾಜ್ಯಗಳಲ್ಲಿ ಪಕ್ಷ ಚೇತರಿಸಿಕೊಂಡಿರುವುದು ನಂಬಲು ಸಾಧ್ಯವಾಗುತ್ತಿಲ್ಲ ಎಂದರು.

ಮಹಾರಾಷ್ಟ್ರದಲ್ಲಿ ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿಗೆ ಹೋದ ಅನೇಕರು ಚುನಾವಣೆಯಲ್ಲಿ ಸೋತುಹೋಗಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಪಕ್ಷ ತೊರೆದು ಬಿಜೆಪಿಗೆ ಹೋಗಿರುವ ಅನರ್ಹ ಶಾಸಕರು ಸೋಲು ಕಾಣಲಿದ್ದಾರೆ ಎಂದು ಹೇಳಿದರು.ಪಕ್ಷ ವಹಿಸಿದ ಜವಾಬ್ದಾರಿಯನ್ನು ನೂತನ ಪದಾಧಿಕಾರಿಗಳು ಸಮರ್ಥವಾಗಿ ನಿರ್ವಹಿಸಬೇಕು. ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು. ಬಿಜೆಪಿಯ ಸುಳ್ಳು ಮಾತಿಗೆ ಪಕ್ಷದ ಕಾರ್ಯಕರ್ತರು, ಮುಖಂಡರು ಕಿವಿಗೊಡದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ ಸೇರ್ಪಡೆ:

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಸೇರಿದಂತೆ ಬಿಜೆಪಿ, ಜೆಡಿಎಸ್‌ ತೊರೆದು ಕಾಂಗ್ರೆಸ್‌ಗೆ ಬಂದ ಅನೇಕ ಮುಖಂಡರಿಗೆ ಪಕ್ಷದ ಶಾಲು ಹೊದಿಸಿ ಕೆಪಿಸಿಸಿ ಅಧ್ಯಕ್ಷರು ಸ್ವಾಗತಿಸಿದರು.

ನೂತನ ಪದಾಧಿಕಾರಿಗಳಿಗೆ ನೇಮಕ ಪತ್ರವನ್ನು ದಿನೇಶ್‌ ಗುಂಡೂರಾವ್‌ ನೀಡುವ ಮೂಲಕ ಪ್ರತಿಜ್ಞಾ ವಿಧಿ ಬೋಧಿಸಿದರು.

ಶಾಸಕಿ ಕುಸುಮಾವತಿ ಶಿವಳ್ಳಿ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಧಾರವಾಡ ಜಿಲ್ಲಾ ಕಾಂಗ್ರೆಸ್‌ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲ್‌ಕುಮಾರ್‌ ಪಾಟೀಲ, ಹುಬ್ಬಳ್ಳಿ–ಧಾರವಾಡ ಮಹಾನಗರ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ಮುಖಂಡರಾದ ವೀರಣ್ಣ ಮತ್ತಿಗಟ್ಟಿ, ಸದಾನಂದ ಡಂಗನವರ, ಮಹೇಂದ್ರ ಸಿಂಘಿ, ವಿನೋಧ ಅಸೂಟಿ, ಇಸ್ಮಾಯಿಲ್‌ ತಮಟಗಾರ, ನಾಗರಾಜ ಛಬ್ಬಿ, ಮುತ್ತಣ್ಣ ಶಿವಳ್ಳಿ, ಸ್ವಾತಿ ಮಳಗಿ, ಶಾಂತವ್ವ ಗುಜ್ಜಳ, ತಾರಾದೇವಿ ವಾಲಿಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT