ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಿಯ ತರಬೇತಿ ಅಧಿಕಾರಿಗಳ ಆಯ್ಕೆ ಪ್ರಕ್ರಿಯೆ ಗೊಂದಲ: ಐಟಿಐ ಅಭ್ಯರ್ಥಿಗಳ ಆಕ್ಷೇಪ

ಐಟಿಐ ಕಿರಿಯ ತರಬೇತಿ ಅಧಿಕಾರಿಗಳ ನೇಮಕಾತಿಗೆ ಪರೀಕ್ಷೆ ನಡೆಸಿದ್ದ ಕೆಪಿಎಸ್‍ಸಿ
Last Updated 23 ಸೆಪ್ಟೆಂಬರ್ 2021, 6:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆಯ 1,520 ಕಿರಿಯ ತರಬೇತಿ ಅಧಿಕಾರಿಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ 2018ರಲ್ಲಿ ಪರೀಕ್ಷೆ ನಡೆಸಿದ್ದು, ಆಯ್ಕೆ ಪ್ರಕ್ರಿಯೆ ಬಗ್ಗೆ ಅಭ್ಯರ್ಥಿಗಳಿಂದ ಆಕ್ಷೇಪ ವ್ಯಕ್ತವಾಗಿದೆ.

ಐಟಿಐ 23 ಟ್ರೇಡ್‌(ವಿಭಾಗ)ಗಳಿಗೆ ಕಿರಿಯ ತರಬೇತಿ ಅಧಿಕಾರಿಗಳ ನೇಮಕಾತಿಗಾಗಿ 2018 ಫೆಬ್ರುವರಿ 19ರಂದು ಕೆಪಿಎಸ್‍ಸಿ ಅಧಿಸೂಚನೆ ಹೊರಡಿಸಿತ್ತು. ಅದೇ ವರ್ಷ ಡಿಸೆಂಬರ್, ಜನವರಿಯಲ್ಲಿ ತಲಾ 400 ಅಂಕಗಳಿಗೆ ಪರೀಕ್ಷೆ ನಡೆದಿತ್ತು.

2019ರಲ್ಲಿ ಉತ್ತಮ ಅಂಕ ಪಡೆದವರ ದಾಖಲೆಗಳ ಪರಿಶೀಲನೆ ನಡೆದಿತ್ತು. ಆಗ ದಾಖಲೆಗಳು ಸರಿಯಾಗಿವೆ ಎಂದು ಪ್ರಮಾಣೀಕರಿಸಿದ್ದರೂ, ಆ ಬಳಿಕ ಸೇವಾನುಭವ ಪ್ರಮಾಣಪತ್ರದಲ್ಲಿ ‘ನಿರ್ದಿಷ್ಟ ಕಾರ್ಯಕ್ಷೇತ್ರದ ಕಾರ್ಯಾನುಭವದಲ್ಲಿ ಸ್ಪಷ್ಟತೆ ಇಲ್ಲ’ ಎಂದು ಕಾರಣ ಹೇಳಿ ತಿರಸ್ಕರಿಸಲಾಗಿದೆ. ಈ ಬಗ್ಗೆ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸದೆ, ಕಾರ್ಖಾನೆಗಳು, ಬಾಯ್ಲರ್‌ಗಳು, ಕಾರ್ಖಾನೆಗಳ ಸುರಕ್ಷತೆ ಹಾಗೂ ಸ್ವಾಸ್ಥ್ಯ ಇಲಾಖೆಯ ಉಪನಿರ್ದೇಶಕರಿಂದ ಸೇವಾನುಭವ ಪತ್ರ ಸಿಂಧುತ್ವ ಪರಿಶೀಲನೆಗೆ ಸೂಚಿಸದೆ ಅನ್ಯಾಯ ಮಾಡಲಾಗುತ್ತಿದೆ ಎಂಬುದು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಅಭ್ಯರ್ಥಿಗಳ ಆರೋಪ.

‘ಭಾರತೀಯ ಕಾರ್ಖಾನೆಗಳ ಕಾಯ್ದೆ 1948ರ ಅಡಿ ನೋಂದಾಯಿತ ಕಾರ್ಖಾನೆಯಲ್ಲಿ ಎರಡು ವರ್ಷ ಸೇವಾನುಭವ ಹೊಂದಿರುವ ಪ್ರಮಾಣಪತ್ರವನ್ನು ಕೆಪಿಎಸ್‍ಸಿ ಅಧಿಸೂಚನೆಯಂತೆ ಸಲ್ಲಿಸಿದ್ದೆವು. ಪರಿಶೀಲನೆ ವೇಳೆ ಕಾರ್ಖಾನೆ ಅಧಿಕಾರಿಗಳ ಸಮ್ಮುಖದಲ್ಲಿ ದೃಢೀಕರಿಸಿದ್ದರು. ಈಚೆಗೆ ಎಲೆಕ್ಟ್ರೊಪ್ಲೇಟರ್ ಟ್ರೇಡ್‌ಗೆ ಆಯ್ಕೆ ಪಟ್ಟಿ ಪ್ರಕಟಿಸಲಾಗಿದ್ದು, ಹೆಚ್ಚು ಅಂಕ ಗಳಿಸಿದವರ ಹೊರತಾಗಿ ಕಡಿಮೆ ಅಂಕ ಗಳಿಸಿದವರನ್ನು ಆಯ್ಕೆ ಮಾಡಲಾಗಿದೆ’ ಎಂದು ಉದ್ಯೋಗಾಕಾಂಕ್ಷಿಯೊಬ್ಬರು ಆರೋಪಿಸಿದರು.

‘ಈ ಬಗ್ಗೆ ಆಕ್ಷೇಪಣೆ ಸಲ್ಲಿಸಿದರೆ ತಡವಾಗಿ ಉತ್ತರಿಸುತ್ತಾರೆ. ದಾಖಲೆ ಸರಿ ಇಲ್ಲವಾಗಿದ್ದರೂ ಸ್ಪಷ್ಟತೆ ಪಡೆಯುವ ಇಲ್ಲವೇ ಸರಿಯಾದ ದಾಖಲೆ ಸಲ್ಲಿಸಲು ಕಾಲಾವಕಾಶ ನೀಡುವ ಕೆಲಸ ಮಾಡಬಹುದಿತ್ತು’ ಎಂದರು.

ಐದಾರು ಹುದ್ದೆಗಳಿಗೆ ಅರ್ಹತೆ ಪಡೆದಿದ್ದೇನೆ. ಆದರೂ ಆಯ್ಕೆ ಮಾಡುತ್ತಿಲ್ಲ. ಮೂರು ವರ್ಷಗಳಿಂದ ಎಲ್ಲವನ್ನೂ ಗೊಂದಲದಲ್ಲೇ ಇರಿಸಿದ್ದಾರೆ ಎಂದುಹೆಸರು ಹೇಳಲಿಚ್ಛಿಸದ ಉದ್ಯೋಗಾಕಾಂಕ್ಷಿ ಒಬ್ಬರು ಅಳಲು ತೋಡಿಕೊಂಡರು.

ಕಡಿಮೆ ಅಂಕ ಪಡೆವರಿಗೂ 5-6ನೇ ಸುತ್ತಿನ ದಾಖಲೆಗಳ ಪರಿಶೀಲನೆಗೆ ಕರೆಯುತ್ತಿದ್ದಾರೆ. ನಮ್ಮದೇ ಕಂಪನಿಯ ಐವರು ಇದರಿಂದ ವಂಚಿತರಾಗಿದ್ದಾರೆ ಎಂದುಮತ್ತೊಬ್ಬ ಉದ್ಯೋಗಾಕಾಂಕ್ಷಿ ತಿಳಿಸಿದರು.

ಈ ಬಗ್ಗೆ ಸ್ಪಷ್ಟನೆ ಪಡೆಯಲು ಕೆಪಿಎಸ್‍ಸಿ ಅಧಿಕಾರಿಗಳಿಗೆ ‘ಪ್ರಜಾವಾಣಿ’ ಕರೆ ಮಾಡಿದಾಗ, ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT