ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರದಿದ್ದರೆ KPTCL ಗುತ್ತಿಗೆ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ

Published 23 ಆಗಸ್ಟ್ 2023, 15:47 IST
Last Updated 23 ಆಗಸ್ಟ್ 2023, 15:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಿಗದಿತ ಕಾಲಾವಕಾಶದಲ್ಲಿ ಕೆಪಿಟಿಸಿಎಲ್‌ ಗುತ್ತಿಗೆ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ವಿಫಲವಾದರೆ ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ರಾಜ್ಯ ಕೆಪಿಟಿಸಿಎಲ್‌ ಗುತ್ತಿಗೆ ನೌಕರರ ಹಿತರಕ್ಷಣಾ ವೇದಿಕೆ ನಿರ್ಣಯ ತೆಗೆದುಕೊಂಡಿದೆ.

ಇಲ್ಲಿನ ದೇಶಪಾಂಡೆನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ವೇದಿಕೆ ಪದಾಧಿಕಾರಿಗಳು ಹಾಗೂ ಸದಸ್ಯರು ಗುತ್ತಿಗೆ ನೌಕರರ ವಿವಿಧ ಬೇಡಿಕೆ ಹಾಗೂ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಸಭೆ ನಡೆಸಿ ಚರ್ಚಿಸಿದರು.

‘ಗುತ್ತಿಗೆ ನೌಕರರರನ್ನು ಕಾಯಂಗೊಳಿಸುವುದು, ಕರ್ತವ್ಯದ ವೇಳೆ ಮೃತಪಟ್ಟ ನೌಕರರ ಕುಟುಂಬಕ್ಕೆ ₹50 ಲಕ್ಷ ಪರಿಹಾರ, ಕಾಯಂ ಮಾಡುವವರೆಗೂ ಸಮಾನ ಕೆಲಸಕ್ಕೆ ಸಮಾನ ವೇತನ, ಕರ್ತವ್ಯದ ಸಂದರ್ಭ ಅವಘಡ ಸಂಭವಿಸಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು. ಬೇಡಿಕೆ ಇಡೇರಿಸಲು ಸರ್ಕಾರ ಮೂರು ತಿಂಗಳು ಕಾಲಾವಕಾಶ ಪಡೆದಿದೆ. ಅಷ್ಟರಲ್ಲಿ ಬೇಡಿಕೆ ಈಡೇರದಿದ್ದರೆ ಹೋರಾಟದ ರೂಪರೇಷೆಗಳನ್ನು ಸಿದ್ಧಪಡಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು’ ಎಂದು ವೇದಿಕೆಯ ರಾಜ್ಯ ನಿರ್ದೇಶಕ ಜಿನೇಂದ್ರ ಕುಮಾರ್ ಜಿ.ಪಿ ತಿಳಿಸಿದರು.

‘ಸರ್ಕಾರದ ಮಟ್ಟದಲ್ಲಿ ಈವರೆಗೆ ಚರ್ಚೆ ನಡೆದಿಲ್ಲ. ರಾಜ್ಯದಲ್ಲಿ ಸುಮಾರು 15 ಸಾವಿರ ಕೆಪಿಟಿಸಿಎಲ್‌ ಗುತ್ತಿಗೆ ನೌಕರರಿದ್ದು, ಕೆಲಸದ ಭದ್ರತೆ ಇಲ್ಲದೆ ಆತಂಕದಲ್ಲಿದ್ದಾರೆ. ಕರ್ತವ್ಯದ ವೇಳೆ ವಿದ್ಯುತ್ ಸ್ಪರ್ಶಿಸಿ ನೌಕರರು ಸಾವಿಗೀಡಾಗುತ್ತಿದ್ದಾರೆ. ಅಂತಹ ಕುಟುಂಬಗಳಿಗೆ ಸರ್ಕಾರ ₹50 ಲಕ್ಷ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಲೀಲಾಸಾಗರ್ ಎಂ.ಎಸ್., ಉಪಾಧ್ಯಕ್ಷ ಪರಶುರಾಮ ರಾಠೋಡ್, ಕಾರ್ಯದರ್ಶಿ ನಾಗಪ್ಪ ಬಾವಿಕಟ್ಟಿ, ಜಿಲ್ಲಾಧ್ಯಕ್ಷ ಹುಚ್ಚೆಪ್ಪ ಮೇಟಿ, ಲಕ್ಷ್ಮಣ ಮಳಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT