ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಗೋಳ ಕ್ಷೇತ್ರ : ಪಕ್ಷಕ್ಕಿಂತ, ವ್ಯಕ್ತಿ ಪ್ರತಿಷ್ಠೆಗೆ ಮಣೆ

ಕ್ಷೇತ್ರದಿಂದ ಗೆದ್ದು ಸಚಿವ ಸ್ಥಾನ ಅಲಂಕರಿಸಿದ್ದ ಕಟಗಿ, ಶಿವಳ್ಳಿ
Last Updated 13 ಏಪ್ರಿಲ್ 2023, 2:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಸೀಮೆಯ ಅತ್ಯಂತ ಬರಪೀಡಿತ ಕ್ಷೇತ್ರ ಕುಂದಗೋಳ. ಕೃಷಿಯೇ ಪ್ರಧಾನವಾಗಿರುವ ಕ್ಷೇತ್ರವು ಪಕ್ಷ ಮತ್ತು ವ್ಯಕ್ತಿ ಪ್ರತಿಷ್ಠೆಯ ರಾಜಕಾರಣಕ್ಕೆ ಹೆಸರಾಗಿದೆ. ಆರಂಭದಲ್ಲಿ ಕಾಂಗ್ರೆಸ್‌ ನೆಲೆಯಾಗಿ ದ್ದರೂ, ಮೂರನೇ ಚುನಾವಣೆಯಲ್ಲೇ (1967) ಸ್ವತಂತ್ರ ಅಭ್ಯರ್ಥಿ ಬಿ.ಎಸ್. ರಾಯಪ್ಪ (ಎಸ್.ಆರ್. ಬೊಮ್ಮಾಯಿ) ಅವರನ್ನು ಗೆಲ್ಲಿಸಿದ ಕ್ಷೇತ್ರವಿದು.

ಸಿ.ಎಸ್. ಶಿವಳ್ಳಿ ಕೂಡ 1999ರಲ್ಲಿ ಸ್ವತಂತ್ರವಾಗಿ ಗೆದ್ದು ವಿಧಾನಸೌಧ ಪ್ರವೇಶಿಸಿದ್ದರು. ಇಬ್ಬರನ್ನು ಪಕ್ಷದ ಹಂಗಿಲ್ಲದೆ ಗೆಲ್ಲಿಸಿರುವ ಇಲ್ಲಿನ ಮತದಾರರು ಪಕ್ಷಕ್ಕಿಂತ ವ್ಯಕ್ತಿಗೂ ಮಣೆ ಹಾಕುತ್ತಾ ಬಂದಿರುವುದನ್ನು ಇತ್ತೀಚಿನ ವರ್ಷಗಳ ಚುನಾವಣೆಗಳು ಸಾಬೀತು ಮಾಡಿವೆ.

ಕಾಂಗ್ರೆಸ್‌ಗೆ 9 ಗೆಲುವು: 1957ರಿಂದ ಇದುವರೆಗೆ ನಡೆದಿರುವ ಒಟ್ಟು 15 ಚುನಾವಣೆಗಳಲ್ಲಿ (2019ರ ಉಪ ಚುನಾವಣೆ ಸೇರಿ) ಕಾಂಗ್ರೆಸ್ 9 ಸಲ ಗೆದ್ದಿದ್ದರೆ, ಇಬ್ಬರು ಪಕ್ಷೇತರರಾಗಿ ಜಯ ಗಳಿಸಿದ್ದಾರೆ. ಉಳಿದಂತೆ ಜೆಡಿ, ಜೆಡಿ(ಯು), ಜೆಎನ್‌ಪಿ ಹಾಗೂ ಬಿಜೆಪಿ ತಲಾ ಒಂದೊಂದು ಸಲ ಗೆಲುವು ದಾಖಲಿಸಿವೆ.

ಸಿ.ಎಸ್. ಶಿವಳ್ಳಿ ಮೂರು ಸಲ (1999, 2013, 2018) ಗೆದ್ದಿದ್ದರೆ, ತಿಮ್ಮಣ್ಣ ಕೆಂಚಪ್ಪ ಕಾಂಬಳೆ (1957, 1962) ಹಾಗೂ ಎಂ.ಎಸ್. ಅಕ್ಕಿ ಎರಡು ಸಲ (1994, 2004) ಗೆದ್ದಿದ್ದಾರೆ. 2008ರಲ್ಲಿ ಎಸ್‌.ಐ. ಚಿಕ್ಕನಗೌಡರ (ಬಿ.ಎಸ್. ಯಡಿಯೂರಪ್ಪ) ಅವರು ಕ್ಷೇತ್ರದಲ್ಲಿ ಬಿಜೆಪಿಯ ಖಾತೆ ತೆಗೆದರು. ಅಂದಿನಿಂದ ಕ್ಷೇತ್ರವು ಕಾಂಗ್ರೆಸ್–ಬಿಜೆಪಿ ಹಾಗೂ ಶಿವಳ್ಳಿ–ಚಿಕ್ಕನಗೌಡರ ಅವರ ನಡುವಣ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.

ಸಮಸ್ಯೆಗಳು ಗೌಣ: ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಂಬಂಧಿಸಿದ ಡಾ. ಡಿ.ಎಂ. ನಂಜುಂಡಪ್ಪ ವರದಿಯಲ್ಲಿ ಹಿಂದುಳಿದ ಹಣೆಪಟ್ಟಿ ಹೊಂದಿರುವ ತಾಲ್ಲೂಕುಗಳಲ್ಲಿ ಕುಂದಗೋಳವೂ ಒಂದು.

ಮಳೆಯಾಧಾರಿತ ಕೃಷಿಯೇ ಪ್ರಧಾನವಾಗಿರುವ ಕ್ಷೇತ್ರದಲ್ಲಿ ಸಮಸ್ಯೆಗಳು ಗೌಣವಾಗಿವೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಕ್ಷೇತ್ರವಿದು. ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಉಳಿದೆಲ್ಲಾ ಕಡೆಗಳಿಗಿಂತ ಇಲ್ಲಿಯೇ ಹೆಚ್ಚು. ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಸಿಗಬೇಕಾದ ಒತ್ತು ಸಿಕ್ಕಿಲ್ಲ.

ನೀರಿಗಾಗಿ ವಾರಗಟ್ಟಲೆ ಕಾಯುವ ಸ್ಥಿತಿ ಹಲವು ಗ್ರಾಮಗಳಲ್ಲಿದೆ. ಶುದ್ಧ ಕುಡಿಯುವ ನೀರಿನ ಕೇಂದ್ರಗಳೇ ನೀರಿಗೆ ಆಧಾರವಾಗಿದ್ದರೂ, ಹಲವೆಡೆ ಕೆಟ್ಟು ನಿಂತಿವೆ. ಕೆರೆಗಳ ನೀರನ್ನೇ ಹಲವು ಹಳ್ಳಿಗಳು ನೆಚ್ಚಿಕೊಂಡಿವೆ. ಮೆಣಸಿನಕಾಯಿಯ ತವರು ಕುಂದಗೋಳವಾದರೂ, ಆ ಬೆಳೆಯ ಸಂಸ್ಕರಣಾ ಘಟವನ್ನು ಸ್ಥಳೀಯವಾಗಿ ಸ್ಥಾಪಿಸುವ ಭರವಸೆಯನ್ನು ಬಹುತೇಕ ರಾಜಕಾರಣಿಗಳು ನೀಡುತ್ತಾ ಬಂದಿದ್ದಾರೆ. ಆದರೆ, ಯಾವೂ ಈಡೇರಿಲ್ಲ.

ಇಬ್ಬರು ಸಚಿವರ ಕೊಟ್ಟ ಕ್ಷೇತ್ರ
ಕುಂದಗೋಳ ಕ್ಷೇತ್ರವು ಇಬ್ಬರು ಸಚಿವರನ್ನು ಕೊಟ್ಟಿದೆ. 1978ರಲ್ಲಿ ಕಾಂಗ್ರೆಸ್‌(ಐ)ನಿಂದ ಗೆಲುವು ಸಾಧಿಸಿದ್ದ ಮಹದೇವಪ್ಪ ಶಿವಪ್ಪ ಕಟಗಿ ಅವರು, ದೇವರಾಜು ಅರಸು ಅವರ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದರು. ನಂತರ ವಿಧಾನ ಪರಿಷತ್ ಸದಸ್ಯರಾಗಿದ್ದರು.

ಕ್ಷೇತ್ರವನ್ನು ಮೂರು ಸಲ ಪ್ರತಿನಿಧಿಸಿದ್ದ ಶಿವಳ್ಳಿ ಅವರು 2018ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದರು. 2019ರ ಮಾರ್ಚ್‌ನಲ್ಲಿ ಅವರು ಅಕಾಲಿಕವಾಗಿ ನಿಧನರಾದರು. ನಂತರ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಅವರು ಬಿಜೆಪಿಯ ಚಿಕ್ಕನಗೌಡರ ವಿರುದ್ಧ ಜಯ ಸಾಧಿಸಿದ್ದರು. ಕ್ಷೇತ್ರದಲ್ಲಿ ಮೊದಲು ಆಯ್ಕೆಯಾದ ಮಹಿಳೆ ಇವರು.

ಕಳೆದ ಮೂರು ಚುನಾವಣೆಯಲ್ಲಿ ಕಾಂಗ್ರೆಸ್‌ ಸತತ ಗೆಲುವು ಕಂಡಿದೆ. ಇದೀಗ ಎದುರಾಗಿರುವ ಮತ್ತೊಂದು ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಪಕ್ಷ ಅಥವಾ ವ್ಯಕ್ತಿ ಪ್ರತಿಷ್ಠೆಗೆ ಮಣೆ ಹಾಕುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT