ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ವಿವಿಧೆಡೆ ಕಾರ್ಮಿಕರ ದಿನಾಚರಣೆ

ಮೇ 14ರ ವರೆಗೆ ‘ಜೀವಗಳನ್ನು ಉಳಿಸಿ, ಪರಿಹಾರ ಒದಗಿಸಿ’ ಅಭಿಯಾನ
Last Updated 1 ಮೇ 2021, 13:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಶನಿವಾರ ವಿವಿಧೆಡೆ ಸರಳವಾಗಿ ಕಾರ್ಮಿಕರ ದಿನ ಆಚರಿಸಲಾಯಿತು.

ಎಪಿಎಂಸಿ ಹಮಾಲಿ ಕಾರ್ಮಿಕರ ಒಕ್ಕೂಟ ಹಾಗೂ ಸಿಐಟಿಯು ಸಂಯೋಜಿತ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್‌ ವತಿಯಿಂದ ಮನೆ ಮನಗಳಲ್ಲಿ, ಕೆಲಸದ ಸ್ಥಳಗಳಲ್ಲಿ ವಿಶ್ವ ಕಾರ್ಮಿಕ ದಿನದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಒಕ್ಕೂಟದ ಕಚೇರಿಯಲ್ಲಿ ಸಾಂಕೇತಿಕವಾಗಿ ಸಿಐಟಿಯು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ‘ಆರೋಗ್ಯಕ್ಕೆ ₹20 ಲಕ್ಷ ಕೋಟಿ ಮತ್ತು ಲಸಿಕೆಗೆ ₹35 ಸಾವಿರ ಕೋಟಿ ತೆಗೆದಿರಿಸಿರುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಈ ಹಣದಲ್ಲಿ ದೇಶದ 130 ಕೋಟಿ ಜನರಿಗೆ ಎರಡೂ ಹಂತದಲ್ಲಿ ಲಸಿಕೆ ಒದಗಿಸಬಹುದಾಗಿತ್ತು. ಹಾಗಾದರೇ ಆ ಹಣ ಏನಾಯಿತು ಎಂಬುದೇ ಗೊತ್ತಾಗಲಿಲ್ಲ’ ಎಂದರು.

‘ಶುಕ್ರವಾರದಿಂದ ಉಚಿತ ಲಸಿಕೆ ವಿತರಿಸುವುದಾಗಿ ಹೇಳಿದ್ದ ಸರ್ಕಾರ ಈಗ ಅದನ್ನು ಮುಂದೂಡಿ ಜನರ ಜೀವಗಳೊಂದಿಗೆ ಚೆಲ್ಲಾಟವಾಡುತ್ತಿದೆ. ಕೋವಿಡ್‌ನಿಂದ ಸಂಕಷ್ಟಕ್ಕೀಡಾದ ಜನತೆಗೆ ನೆಮ್ಮದಿಯ ಬದುಕು ಕಲ್ಪಿಸಲು ಸರ್ಕಾರ ಮುಂದಾಗಬೇಕಿತ್ತು. ತನ್ನ ಜವಾಬ್ದಾರಿ ಮರೆತು ಚುನಾವಣೆ, ರಾಮಮಂದಿರ, ಕುಂಭಮೇಳ ಮಾಡುವುದರಲ್ಲಿ ಮಗ್ನವಾಯಿತು. ಈ ಬೇಜವಾಬ್ದಾರಿ ನಡೆಗಳಿಂದಾಗಿ ಕೋವಿಡ್ ಎರಡನೇ ಅಲೆ ವಿಕೋಪಕ್ಕೆ ಹೋಯಿತು’ ಎಂದು ದೂರಿದರು.

ಕಾರ್ಮಿಕರಿಗೆ ಯಾವುದೇ ಪರಿಹಾರ ಒದಗಿಸದೆ ಲಾಕ್‌ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರದಿಂದ ಮೇ 14ರ ತನಕ ‘ಜೀವಗಳನ್ನು ಉಳಿಸಿ, ಪರಿಹಾರವನ್ನು ಒದಗಿಸಿ’ ಅಭಿಯಾನ ನಡೆಸಲು ನಿರ್ಧರಿಸಲಾಯಿತು.

‘ರಾಜ್ಯ ಸರ್ಕಾರ ಎಲ್ಲರಿಗೂ ಉಚಿತ ಆಮ್ಲಜನಕ, ಲಸಿಕೆ ನೀಡಬೇಕು. ಅಸಂಘಟಿತ ಕಾರ್ಮಿಕ ಕುಟುಂಬಗಳಿಗೆ ₹10 ಸಾವಿರ, ತಲಾ 10 ಕೆ.ಜಿ. ಆಹಾರ ಧಾನ್ಯ ಕೊಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಗುರುಸಿದ್ದಪ್ಪ ಅಂಬಿಗೇರ, ಮಂಜುನಾಥ ಹುಜರಾತಿ, ಬಸವಣ್ಣೆಪ್ಪ ನೀರಲಗಿ, ಕರಿಯಪ್ಪ ದಳವಾಯಿ, ಹುಸೇನಸಾಬ ನದಾಫ್ ಪಾಲ್ಗೊಂಡಿದ್ದರು.

ಕಿಟ್‌ ವಿತರಣೆ: ಕಾರ್ಮಿಕರ ದಿನದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಕಟ್ಟಡ ಕಾರ್ಮಿಕರ ಸುರಕ್ಷತೆಗಾಗಿ ಕಾರ್ಮಿಕ ಇಲಾಖೆ ವತಿಯಿಂದ ಬಾರ್ ಬೆಂಡಿಂಗ್, ಪೇಂಟರ್ ಹಾಗೂ ಕಾರ್ಮಿಕರಿಗೆ ಸುರಕ್ಷಾ ಕಿಟ್‌ಗಳನ್ನು ವಿತರಿಸಿದರು.

ಕಾರ್ಮಿಕ ಅಧಿಕಾರಿಗಳಾದ ಮಲ್ಲಿಕಾರ್ಜುನ ಜೋಗೂರ, ಮಾರಿಕಾಂಬಾ ಹುಲಕೋಟಿ, ಹಿರಿಯ ಕಾರ್ಮಿಕ ನಿರೀಕ್ಷಕ ಎ. ಅಲ್ಲಾಪುರ, ಶಮಿ ಹಿರೇಹಾಳ, ಕಾರ್ಮಿಕ ಮುಖಂಡರಾದ ದುರಗಪ್ಪ ಚಿಕ್ಕತುಂಬಳ, ಮೆಹಬೂಬ್ ಸಾಬ್ ಸುಂಕದ, ವಾಸು ಲಮಾಣಿ, ಸಿ.ವಿ. ಸ್ವಾಮಿ. ಮುಸ್ತಾಕ್ ನದಾಫ್, ಭೀಮಣ್ಣ ಮೇಲಿನಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT