ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಣಕಲ್‌: ಸೌಲಭ್ಯ ಕೊರತೆ, ರೋಗ ಭೀತಿ

ಅಭಿವೃದ್ಧಿ ಕೆಲ ಪ್ರದೇಶಗಳಿಗೆ ಸೀಮಿತ– ಸ್ಥಳೀಯರ ಆರೋಪ
Published 7 ಆಗಸ್ಟ್ 2024, 5:23 IST
Last Updated 7 ಆಗಸ್ಟ್ 2024, 5:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಾಳಾದ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ರಸ್ತೆಯಲ್ಲಿಯೇ ಹರಿಯುವ ಗಟಾರದ ಕೊಳಚೆ ನೀರು, ಜೆಜೆಎಂ ಯೋಜನೆಯಲ್ಲಿ 24X7 ನೀರಿನ ಪೈಪ್‌ ಅಳವಡಿಸಿದ್ದರೂ ಶುದ್ಧ ಕುಡಿಯುವ ನೀರು ಪೂರೈಕೆಯಾಗಿಲ್ಲ. 

– ಇಂತಹ ಸಮಸ್ಯೆಗಳ ನಡುವೆಯೇ ಪಾಲಿಕೆ ವ್ಯಾಪ್ತಿಯ ಉಣಕಲ್‌ ಗ್ರಾಮದ ಜನರು ಬದುಕು ಕಟ್ಟಿಕೊಳ್ಳುತ್ತಿದ್ಧಾರೆ. 

ಒಂದೆಡೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಹುಬ್ಬಳ್ಳಿ ನಗರ, ಇದಕ್ಕೆ ಹೊಂದಿಕೊಂಡೇ ಕೇವಲ 100 ಮೀಟರ್‌ ದೂರದಲ್ಲಿ ಉಣಕಲ್‌ ಗ್ರಾಮವಿದೆ. 

ಉಣಕಲ್‌ ಗ್ರಾಮವು 20 ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಒಳಗೊಂಡಿದೆ. ಇಲ್ಲಿನ ಕಲ್ಮೇಶ್ವರ ನಗರ, ಹಳೆಯ ಕಲ್ಮೇಶ್ವರ ಓಣಿ, ಕುರುಬರ ಓಣಿ, ಚಲವಾದಿ ಓಣಿ, ಅಚ್ಚವ್ವನ ಕಾಲೊನಿ, ಅಂಬಿಕಾ ನಗರ, ರವೀಂದ್ರ ನಗರ, ಏಕತಾ ನಗರ, ತಾಜ್‌ ನಗರ, ಕೆರೆ ಓಣಿ,  ಕೊರವಿ ಓಣಿ, ಗುಡಿ ಓಣಿ, ಹರಿಜನ ಕೆರೆ, ಮ್ಯಾಗೇರಿ, ಕುರುಬಗೇರಿ ಸೇರಿದಂತೆ 15ಕ್ಕೂ ಅಧಿಕ ಪ್ರದೇಶಗಳು ಗ್ರಾಮದ ವ್ಯಾಪ್ತಿಗೆ ಒಳಪಡುತ್ತವೆ. ಆದರೆ, ಅಭಿವೃದ್ಧಿ ಮಾತ್ರ ಕೆಲ ಪ್ರದೇಶಗಳಿಗೆ ಸೀಮಿತವಾಗಿದೆ. 

ಪಕ್ಕ ಗ್ರಾಮೀಣ ಪ್ರದೇಶದ ಸೊಗಡನ್ನು ಹೊಂದಿರುವ ಇಲ್ಲಿ ಇಂದಿಗೂ ಬಹುತೇಕ ಕೆಂಪು ಅಂಚಿನ ಮನೆಗಳಿವೆ. ಮನೆ ಮುಂದೆ ಎಮ್ಮೆ, ದನ– ಕರುಗಳು, ಅವುಗಳ ಕೊಟ್ಟಿಗೆಗಳಿವೆ. ಜೊತೆಗೆ ಟ್ರ್ಯಾಕ್ಟರ್‌ಗಳ ಸಾಲು. ಕೃಷಿ ಚಟುವಟಿಕೆಗಳಿಗೆ ಪೂರಕವಾದ ಯಂತ್ರೋ‍ಪಕರಣಗಳನ್ನು ಮನೆ ಮುಂದೆ ನಿಲ್ಲಿಸಲಾಗಿದೆ. ಇದೊಂದು ಪಕ್ಕ ಗ್ರಾಮೀಣ ಪ್ರದೇಶವಾಗಿದ್ದು, ಇದರಿಂದಾಗಿಯೇ ಕೆಲ ಪ್ರದೇಶ ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದು ಇಲ್ಲಿನ ಕೆಲ ನಿವಾಸಿಗಳು ದೂರುತ್ತಾರೆ. 

ಉಣಕಲ್‌ ಗ್ರಾಮ ಪ್ರವೇಶದ ಮುಖ್ಯ ರಸ್ತೆಯು ಗುಂಡಿಗಳಿಂದ  ಕೂಡಿದೆ. ರಸ್ತೆ ಬದಿಯಲ್ಲಿ ವ್ಯವಸ್ಥಿತವಾದ ಚರಂಡಿ, ಒಳಚರಂಡಿ ಹಾಗೂ ಗಟಾರುಗಳಿಲ್ಲ. ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತದೆ. ಕೆಲವೆಡೆ ರಸ್ತೆ ಬದಿಯಲ್ಲಿನ ಗಟಾರುಗಳು ತುಂಬಿ ರಸ್ತೆಯಲ್ಲಿಯೇ ಕೊಳಚೆ ನೀರು ಹರಿಯುತ್ತದೆ. ಸಾಂಕ್ರಾಮಿಕ ರೋಗದ ಭೀತಿಯನ್ನೂ ಇಲ್ಲಿನ ಜನರು ಎದುರಿಸುತ್ತಿದ್ಧಾರೆ. ಈ ಮಾರ್ಗದ ಜನರು, ವಾಹನ ಸವಾರರು ಚರಂಡಿ ನೀರಿನಲ್ಲಿಯೇ ಸಂಚರಿಸುತ್ತಿದ್ದಾರೆ. 

ಸಿಮೆಂಟ್ ರಸ್ತೆ ನಿರ್ಮಾಣ:

 ಗ್ರಾಮದ ಸಿದ್ದಪ್ಪಜ್ಜನ ಗುಡಿಯ ವೃತ್ತದಿಂದ ಸಾಯಿನಗರದ ಮುಖ್ಯ ರಸ್ತೆಯ ತನಕ ವಿಶಾಲವಾದ ಸಿಮೆಂಟ್‌ ರಸ್ತೆ ನಿರ್ಮಾಣದ ಕಾಮಗಾರಿ ಹಲವು ದಿನಗಳಿಂದ ನಡೆಯುತ್ತಿದೆ. ಇಂದಿಗೂ ಪೂರ್ಣವಾಗಿಲ್ಲ. ಸಾಯಿ ನಗರದ ವೃತ್ತದಿಂದ ಹೆಬ್ಬಳ್ಳಿ ರೋಡ್‌, ಉಣಕಲ್‌ ಚರ್ಚ್‌ ಮಾರ್ಗದಲ್ಲಿ ರಸ್ತೆ ವಿಸ್ತರಣೆ ಮಾಡಿ ಸಿಮೆಂಟ್‌ ರಸ್ತೆಯನ್ನು ನಿರ್ಮಿಸಲಾಗಿದೆ. ಆದರೆ, ಗ್ರಾಮದ ವ್ಯಾಪ್ತಿಯ ನಗರಗಳ ಕೆಲ ಒಳರಸ್ತೆಗಳು ಇಂದಿಗೂ ಮಣ್ಣಿನ ಹಾಗೂ ಡಾಂಬರ್‌ ರಸ್ತೆಗಳಿಂದ ಕೂಡಿವೆ. 

‘ಉಣಕಲ್‌ ಗ್ರಾಮ ವ್ಯಾಪ್ತಿಯ ಕಲ್ಮೇಶ್ವರ ನಗರದ ಕೆಲವೆಡೆ ಉತ್ತಮ ರಸ್ತೆ, ಚರಂಡಿ ವ್ಯವಸ್ಥೆಯಿಲ್ಲ. ಇಲ್ಲಿನ ಬಳಲಬಾವಿ ಸುತ್ತ ಸ್ಥಳೀಯರು ತ್ಯಾಜ್ಯ ಸುರಿಯುತ್ತಿದ್ಧಾರೆ. ಬಾವಿ ಪ್ರದೇಶವು ತ್ಯಾಜ್ಯ ಹಾಗೂ ಕೊಳಚೆ ನೀರಿನಿಂದ ತುಂಬಿದೆ. ಇದರಿಂದ ಈ ಭಾಗದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ’ ಎಂದು ಇಲ್ಲಿನ ಕಲ್ಮೇಶ್ವರ ನಗರದ ಅಭಿವೃದ್ಧಿ ಸಂಘದ ಅಧ್ಯಕ್ಷ ಶಿವಯೋಗಿ ಬೆಂಕಿ ಶೆಟ್ಟರ್‌ ಅಸಮಾಧಾನ ವ್ಯಕ್ತಪಡಿಸುತ್ತಾರೆ. 

₹21ಕೋಟಿ ವೆಚ್ಚದಲ್ಲಿ ಸಿಮೆಂಟ್‌ ರಸ್ತೆ ನಿರ್ಮಾಣ

‘ಉಣಕಲ್‌ ಕ್ರಾಸ್‌ನಿಂದ ಸಾಯಿನಗರ ವೃತ್ತ. ಹೆಬ್ಬಳ್ಳಿ ರೋಡ್‌ ರೈಲ್ವೆ ಗೇಟ್‌ ಸಾಯಿನಗರ ವೃತ್ತದಿಂದ ಉಣಕಲ್‌ ಚರ್ಚ್‌ ಹಾಗೂ ಪ್ರೆಸಿಡೆಂಟ್‌ ಹೋಟೆಲ್‌ ತನಕ ₹21 ಕೋಟಿ ವೆಚ್ಚದಲ್ಲಿ ಅಂದಾಜು 4 ಕಿಮೀ. ವ್ಯಾಪ್ತಿಯಲ್ಲಿ ಸಿಮೆಂಟ್‌ ರಸ್ತೆ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿದೆ. ಇದರೊಂದಿಗೆ ₹7ಕೋಟಿ ವೆಚ್ಚದಲ್ಲಿ ಉಣಕಲ್‌ನಿಂದ ಮಾರಡಗಿ ಮಾರ್ಗವನ್ನು ಸಿಮೆಂಟ್‌ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ’ ಎಂದು 36ನೇ ವಾರ್ಡ್‌ನ ಪಾಲಿಕೆ ಸದಸ್ಯೆ ರಾಜಣ್ಣ ಕೊರವಿ ಮಾಹಿತಿ ನೀಡಿದರು.  ‘₹ 2ಕೋಟಿ ವೆಚ್ಚದಲ್ಲಿಇಲ್ಲಿನ ಕಲ್ಮೇಶ್ವರ ನಗರದ ಒಳ ಭಾಗದ ರಸ್ತೆಗಳ ನಿರ್ಮಾಣ ಕಾಮಗಾರಿ  ಆರಂಭಿಸಲಾಗುವುದು. ವಾರ್ಡ್‌ ವ್ಯಾಪ್ತಿಯಲ್ಲಿ ಕೆಲ ನಗರಗಳ  ಒಳರಸ್ತೆ ಒಳಚರಂಡಿ ನಿರ್ಮಾಣ ಕಾಮಗಾರಿ ಮಾಡಬೇಕಿದೆ. ಅನುದಾನದ ಕೊರತೆಯಿಂದಾಗಿ ವಿಳಂಬವಾಗುತ್ತಿದೆ‘ ಎನ್ನುತ್ತಾರೆ ಅವರು. 

ಯಾರು ಏನಂದರು?

ಉಣಕಲ್‌ ಗ್ರಾಮದೊಳಗಿನ ಬಳಲಬಾವಿ ತ್ಯಾಜ್ಯ ಕೊಳಚೆ ನೀರಿನಿಂದ ತುಂಬಿದೆ. ಬಾವಿ ಪ್ರದೇಶವನ್ನು ಅಭಿವೃದ್ಧಿ ಪಡಿಸಿ ಅಥವಾ ಮುಚ್ಚಿ ಎಂದು ಪಾಲಿಕೆ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ – ಶಿವಯೋಗಿ ಬೆಂಕಿ ಶೆಟ್ಟರ್‌‌ ಕಲ್ಮೇಶ್ವರ ನಗರದ ಅಭಿವೃದ್ಧಿ ಸಂಘದ ಅಧ್ಯಕ್ಷ 

ಮುಖ್ಯ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಒಳರಸ್ತೆಗಳು ಹಾಳಾಗಿವೆ. ಬೀದಿ ದೀಪದ ವ್ಯವಸ್ಥೆ ಇಲ್ಲ. 24X7 ನೀರು ಪೂರೈಕೆಗೆ ನಳ ಹಾಕಿದ್ದಾರೆ. ಆದರೆ ನೀರು ಪೂರೈಸಿಲ್ಲ – ಕಲ್ಲವ್ವ ದೇಸಾಯಿ ಗೃಹಿಣಿ ಕಲ್ಮೇಶ್ವರ ನಗರ.

ಕಲ್ಮೇಶ್ವರ ನಗರದಲ್ಲಿ ಸಿಮೆಂಟ್‌ ರಸ್ತೆ ಚರಂಡಿ ಹಾಗೂ ಒಳಚರಂಡಿ ವ್ಯವಸ್ಥೆ ಮಾಡಬೇಕು. ಮಣ್ಣಿನ ರಸ್ತೆ ಇರುವುದರಿಂದ ಮಳೆಗಾಲದಲ್ಲಿ ಓಡಾಡುವುದು ಕಷ್ಟವಾಗುತ್ತದೆ – ರೂಪಾ ಗೃಹಿಣಿ ಕಲ್ಮೇಶ್ವರ ನಗರ. 

ಉಣಕಲ್ ಗ್ರಾಮದಲ್ಲಿನ ಬಾವಿ ಕೊಳಚೆ ನೀರಿನಿಂದ ತುಂಬಿದ್ದು ಬಾವಿ ಸುತ್ತ ತ್ಯಾಜ್ಯ ಸುರಿದಿರುವುದು
–ಪ್ರಜಾವಾಣಿ ಚಿತ್ರ: ಗುರು ಹಬೀಬ
ಉಣಕಲ್ ಗ್ರಾಮದಲ್ಲಿನ ಬಾವಿ ಕೊಳಚೆ ನೀರಿನಿಂದ ತುಂಬಿದ್ದು ಬಾವಿ ಸುತ್ತ ತ್ಯಾಜ್ಯ ಸುರಿದಿರುವುದು –ಪ್ರಜಾವಾಣಿ ಚಿತ್ರ: ಗುರು ಹಬೀಬ
ಉಣಕಲ್‌ ಗ್ರಾಮ ಮುಖ್ಯ ರಸ್ತೆಯನ್ನು ಸಿಮೆಂಟ್‌ ರಸ್ತೆಯನ್ನಾಗಿ ಮಾಡುತ್ತಿರುವುದು 
–ಪ್ರಜಾವಾಣಿ ಚಿತ್ರ: ಗುರು ಹಬೀಬ 
ಉಣಕಲ್‌ ಗ್ರಾಮ ಮುಖ್ಯ ರಸ್ತೆಯನ್ನು ಸಿಮೆಂಟ್‌ ರಸ್ತೆಯನ್ನಾಗಿ ಮಾಡುತ್ತಿರುವುದು  –ಪ್ರಜಾವಾಣಿ ಚಿತ್ರ: ಗುರು ಹಬೀಬ 
ಉಣಕಲ್‌ ಗ್ರಾಮದ ಕಲ್ಮೇಶ್ವರ ನಗರದಲ್ಲಿ ಮಣ್ಣಿನ ರಸ್ತೆ
–ಪ್ರಜಾವಾಣಿ ಚಿತ್ರ: ಗುರು ಹಬೀಬ 
ಉಣಕಲ್‌ ಗ್ರಾಮದ ಕಲ್ಮೇಶ್ವರ ನಗರದಲ್ಲಿ ಮಣ್ಣಿನ ರಸ್ತೆ –ಪ್ರಜಾವಾಣಿ ಚಿತ್ರ: ಗುರು ಹಬೀಬ 
ಉಣಕಲ್‌ ಗ್ರಾಮದ ನೋಟ 
–ಪ್ರಜಾವಾಣಿ ಚಿತ್ರ: ಗುರು ಹಬೀಬ 
ಉಣಕಲ್‌ ಗ್ರಾಮದ ನೋಟ  –ಪ್ರಜಾವಾಣಿ ಚಿತ್ರ: ಗುರು ಹಬೀಬ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT