ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ರೈಲು ನಿಲ್ದಾಣದಲ್ಲಿ ಭದ್ರತೆ ಕೊರತೆ, 4 ಕಡೆಯಿಂದ ಅನಧಿಕೃತ ಪ್ರವೇಶ

Published 15 ಮಾರ್ಚ್ 2024, 4:57 IST
Last Updated 15 ಮಾರ್ಚ್ 2024, 4:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಪ್ರಮುಖ ಸಂಪರ್ಕ ಕೊಂಡಿಯಾದ ನೈರುತ್ಯ ರೈಲ್ವೆಯ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣಕ್ಕೆ ಅಧಿಕೃತವಾಗಿ ಮೂರು ಪ್ರವೇಶದ್ವಾರವಿದ್ದರೆ, ಅನಧಿಕೃತವಾಗಿ ನಾಲ್ಕು ಕಡೆಯಿಂದ ಪ್ಲಾಟ್‌ಫಾರ್ಮ್‌ ಟಿಕೆಟ್‌ ಇಲ್ಲದೆಯೇ ಸುಲಭವಾಗಿ ಪ್ರವೇಶಿಸಬಹುದು!

ಈ ಮಾರ್ಗಗಳಿಂದ ನಿಲ್ದಾಣಕ್ಕೆ ಬರುವವರು ಪ್ರಯಾಣಿಕರೋ, ಆಗಂತುಕರೋ ಎಂದು ಪರಿಶೀಲಿಸಲು ಹಾಗೂ ಅವರು ತಂದಿರುವ ಲಗೇಜ್‌ಗಳನ್ನು ಪರೀಕ್ಷಿಸಲು ಅಲ್ಲಿ ಯಾವೊಬ್ಬ ಭದ್ರತಾ ಸಿಬ್ಬಂದಿಯೂ ಇಲ್ಲ.

ನಿಲ್ದಾಣದ ಮುಖ್ಯ ಪ್ರವೇಶದ್ವಾರ, ಗದಗ ರಸ್ತೆ ಬಳಿ ಎರಡನೇ ಪ್ರವೇಶದ್ವಾರ ಹಾಗೂ ಮಂಟೂರು ರಸ್ತೆ ಬಳಿ ಮೂರನೇ ಪ್ರವೇಶದ್ವಾರವಿದೆ. ಬಿಆರ್‌ಟಿಎಸ್‌ ಬಸ್‌ ನಿಲ್ದಾಣದ ಬಳಿ ಸುರಂಗ ಮಾರ್ಗವಿದ್ದು ಅಲ್ಲಿಂದಲೂ ನಿಲ್ದಾಣ ಪ್ರವೇಶಿಸಬಹುದು. ಜೊತೆಗೆ, ಅಲ್ಲಿಯೇ ಪಕ್ಕದಲ್ಲಿ ಮತ್ತೊಂದು ಮಾರ್ಗವಿದ್ದು ನೇರವಾಗಿ ಮೊದಲನೇ ಪ್ಲಾಟ್‌ಫಾರ್ಮ್‌ ತೆರಳಬಹುದು. ಮಂಟೂರು ಕಡೆ ತೆರಳುವ ಮಾರ್ಗದಲ್ಲಿ ವಿಐಪಿ ಪ್ರವೇಶದ್ವಾರವಿದ್ದು, ಅಲ್ಲಿಂದಲೂ ಯಾರು ಬೇಕಾದರೂ ನಿಲ್ದಾಣವನ್ನು ಟಿಕೆಟ್‌ ಇಲ್ಲದೆಯೇ ಅನಧಿಕೃತವಾಗಿ ಪ್ರವೇಶ ಮಾಡಬಹುದು.

ನಿಲ್ದಾಣದ ಮುಖ್ಯ ಪ್ರವೇಶದ್ವಾರದ ಬಳಿ ಮಾತ್ರ ಇಬ್ಬರು ರೈಲ್ವೆ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುವುದು ಬಿಟ್ಟರೆ, ಪ್ಲಾಟ್‌ಫಾರ್ಮ್‌ ಒಳಗೆ–ಹೊರಗೆ ಎಲ್ಲಿಯೂ ಭದ್ರತಾ ಸಿಬ್ಬಂದಿ ಕಾಣುವುದಿಲ್ಲ. ಪ್ರಯಾಣಿಕರ ಸರಕು–ಸಾಮಗ್ರಿಗಳನ್ನು ಲಗೇಜ್‌ ಸ್ಕ್ಯಾನಿಂಗ್‌ ಯಂತ್ರದಲ್ಲಿ ಪರಿಶೀಲನೆ ನಡೆಸಲು ಇಬ್ಬರು ರೈಲ್ವೆ ಪೊಲೀಸ್‌ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಉಳಿದಂತೆ ಯಾವ ಪ್ರವೇಶದ್ವಾರದಲ್ಲೂ, ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಭದ್ರತಾ ಸಿಬ್ಬಂದಿಯಿಲ್ಲ.

ಸುರಂಗ ಮಾರ್ಗ ಮತ್ತು ಮಂಟೂರು ರಸ್ತೆ ಬಳಿಯ ಮೂರನೇ ಪ್ರವೇಶದ್ವಾರದ ಬಳಿ ಮಾತ್ರ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲಾಗಿದೆ. ಗದಗ ರಸ್ತೆಯ ಎರಡನೇ ಪ್ರವೇಶದ್ವಾರದ ಬಳಿಯಂತೂ ಒಂದೇ ಒಂದು ಸಿಸಿಟಿವಿ ಕ್ಯಾಮೆರಾವಿಲ್ಲ, ಭದ್ರತಾ ಸಿಬ್ಬಂದಿಯೂ ಇಲ್ಲ.

‘ಸುರಂಗ ಮಾರ್ಗದ ಮೂಲಕ ಆಟೊ ಚಾಲಕರು ನೇರವಾಗಿ ನಿಲ್ದಾಣ ಪ್ರವೇಶಿಸಿ ಪ್ರಯಾಣಿಕರನ್ನು ಕರೆದೊಯ್ಯುತ್ತಾರೆ. ಕೆಲವು ಪಡ್ಡೆ ಹುಡುಗರು, ಮದ್ಯ ಸೇವನೆ ಮಾಡಿದವರು ಗುಂಪುಕಟ್ಟಿಕೊಂಡು ನಿಲ್ದಾಣದ ಒಳಗೆ ಹರಟೆ ಹೊಡೆಯುತ್ತಾರೆ. ನಿಲ್ದಾಣಕ್ಕೆ ಸೂಕ್ತ ಭದ್ರತೆಯಿಲ್ಲದ ಕಾರಣದಿಂದ 2019ರಲ್ಲಿ ಮೊದಲನೇ ಪ್ಲಾಟ್‌ಫಾರ್ಮ್‌ನಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಆರೋಪಿಯನ್ನು ಪತ್ತೆ ಹಚ್ಚಲಾಗಿಲ್ಲ’ ಎಂದು ಪ್ರಯಾಣಿಕರೊಬ್ಬರು ಸಮಾಧಾನ ವ್ಯಕ್ತಪಡಿಸಿದರು.

ಹುಬ್ಬಳ್ಳಿ ಗದಗ ರಸ್ತೆ ಬಳಿಯಿರುವ ರೈಲ್ವೆ ನಿಲ್ದಾಣದ ಎರಡನೇ ಪ್ರವೇಶದ್ವಾರದ ಬಳಿ ಭದ್ರತೆಯಿಲ್ಲದಿರುವುದು
ಹುಬ್ಬಳ್ಳಿ ಗದಗ ರಸ್ತೆ ಬಳಿಯಿರುವ ರೈಲ್ವೆ ನಿಲ್ದಾಣದ ಎರಡನೇ ಪ್ರವೇಶದ್ವಾರದ ಬಳಿ ಭದ್ರತೆಯಿಲ್ಲದಿರುವುದು

ನಿರ್ಗಮನ ಮಾರ್ಗದಲ್ಲಿ ಪ್ರವೇಶ

ಲಗೇಜ್‌ ತಪಾಸಣೆಯಿಲ್ಲ ನಿಲ್ದಾಣದ ಮುಖ್ಯ ಪ್ರವೇಶದ್ವಾರದಿಂದ ಪ್ಲಾಟ್‌ಫಾರ್ಮ್‌ ಪ್ರವೇಶಿಸುವಾಗ ಕಡ್ಡಾಯವಾಗಿ ಲಗೇಜ್‌ಗಳನ್ನು ಯಂತ್ರದ ಮೂಲಕ ತಪಾಸಣೆಗೆ ಒಳಪಡಿಸಲೇಬೇಕು. ಅದಕ್ಕಾಗಿ ಪ್ರವೇಶದ್ವಾರದ ಬಳಿ ಬ್ಯಾರಿಕೇಡ್‌ ಹಾಕಿ ಪ್ರವೇಶ ಹಾಗೂ ನಿರ್ಗಮನ ಮಾರ್ಗದ ವ್ಯವಸ್ಥೆ ಮಾಡಿ ಪ್ಲಾಟ್‌ಫಾರ್ಮ್‌ ಪ್ರವೇಶಿಸುವ ಮಾರ್ಗದಲ್ಲಿ ಲಗೇಜ್‌ ಸ್ಕ್ಯಾನಿಂಗ್‌ ಯಂತ್ರ ಇಡಲಾಗಿದೆ. ಆದರೆ ಬಹುತೇಕ ಪ್ರಯಾಣಿಕರು ಪ್ರವೇಶ ಮಾರ್ಗವನ್ನು ಬಿಟ್ಟು ಪ್ಲಾಟ್‌ಫಾರ್ಮ್‌ನಿಂದ ಹೊರಗೆ ಬರುವ ನಿರ್ಗಮನ ಮಾರ್ಗದಿಂದ ಪ್ಲಾಟ್‌ಫಾರ್ಮ್‌ ಪ್ರವೇಶಿಸುತ್ತಾರೆ. ಲಗೇಜ್‌ ಸ್ಕ್ಯಾನಿಂಗ್‌ ಯಂತ್ರದ ಬಳಿ ಇರುವ ಭದ್ರತಾ ಸಿಬ್ಬಂದಿ ನೋಡಿಯೂ ನೋಡದ ಹಾಗೆ ಇರುತ್ತಾರೆ. ಇದರಿಂದ ಬಹುತೇಕ ಪ್ರಯಾಣಿಕರ ಲಗೇಜ್‌ಗಳು ಯಂತ್ರದಲ್ಲಿ ಪರಿಶೀಲನೆಯಾಗದೆ ಒಳಗೆ ಪ್ರವೇಶವಾಗುತ್ತದೆ.

ನಿಲ್ದಾಣದಲ್ಲಿ ಭದ್ರತೆಗಾಗಿ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಆರ್‌ಪಿಎಫ್‌ ಅಧಿಕಾರಿಗಳ ಜೊತೆ ಚರ್ಚಿಸಿ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಲಾಗುವುದು.
-ಮಂಜುನಾಥ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT