ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವ ಪ್ರತಿಷ್ಠೆ ಬಿಟ್ಟು, ಸಂಘಟಿತರಾಗಿ’

ಜಂಗಮ ಯುವ ವೇದಿಕೆ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ, ಅಭಿನಂದನಾ ಸಮಾರಂಭ
Last Updated 5 ಫೆಬ್ರುವರಿ 2021, 14:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಂಗಮರ ಸಮಗ್ರ ಅಭಿವೃದ್ಧಿಗಾಗಿ ಸ್ವಪ್ರತಿಷ್ಠೆ ಬಿಟ್ಟು ಸಮಾಜದ ಜನರೆಲ್ಲ ಒಂದಾಗಬೇಕು. ಆಗ ಮಾತ್ರ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ ಎಂದು ಹುಕ್ಕೇರಿಯ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗಾಂಧಿ ‌ನಗರದ ಈಶ್ವರ ದೇವಸ್ಥಾನ ಆವರಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ಜಂಗಮ ಯುವವೇದಿಕೆಯ ಜಿಲ್ಲಾ ಸಮಿತಿ ಉದ್ಘಾಟನೆ ಮತ್ತು ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ‘ಜಂಗಮ ಸಮುದಾಯದವರು ಯಾವಾಗಲೂ ಸಮಾಜ ಕಟ್ಟುವ ಕೆಲಸ ಮಾಡುತ್ತ ಬಂದಿದ್ದಾರೆ. ಆದ್ದರಿಂದ ನಾನೇ ಮುಂದೆ ಎನ್ನುವ ಮನೋಭಾವ ಬಿಟ್ಟು, ನೀವು ಮುಂದೆ ಹೋಗಿ, ನಿಮ್ಮ ಹಿಂದೆ ನಾವಿರುತ್ತೇವೆ ಎನ್ನುವ ಭರವಸೆ ತುಂಬುವ ಕೆಲಸ ತುರ್ತಾಗಿ ಮಾಡಬೇಕಿದೆ’ ಎಂದರು.

‘ಹೇಗೆ ಹೋರಾಡಬೇಕು, ಬೇಕಿದ್ದನ್ನು ಪಡೆದುಕೊಳ್ಳಲು ಏನು ಮಾಡಬೇಕು ಎನ್ನುವುದರ ಬಗ್ಗೆ ಇದುವರೆಗೆ ಕೇವಲ ವಾಟ್ಸ್‌ ಆ್ಯಪ್‌ಗಳಲ್ಲಿ ಮಾತ್ರ ಚರ್ಚೆ ನಡೆದಿದೆ. ಇನ್ನು ಮುಂದೆ ಆ ಚರ್ಚೆ ಕೈ ಬಿಟ್ಟು ಕೆಲಸ ಮಾಡಲು ಮುಂದಾಗಬೇಕು. ಸಂಘಟನೆಯ ಬಲ ಇಟ್ಟುಕೊಂಡು ಒಂದಾದರೆ ಮಾತ್ರ ಸಮಾಜದ ಉಳಿವು ಸಾಧ್ಯ. ‌‌ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹಲವು ಸಮುದಾಯಗಳು ಹೋರಾಟ ಮಾಡುತ್ತಿವೆ. ರಾಜ್ಯ ಸರ್ಕಾರ ಎಲ್ಲರ ಬೇಡಿಕೆಗಳಿಗೆ ಮನ್ನಣೆ ನೀಡಬೇಕು’ ಎಂದು ಆಗ್ರಹಿಸಿದರು.

ಅಖಿಲ ಕರ್ನಾಟಕ ಬೇಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಡಿ. ಹಿರೇಮಠ ಮಾತನಾಡಿ ‘ಫೆ. 7ರಂದು ಬಸವ ಕಲ್ಯಾಣದಲ್ಲಿ ನಡೆಯಲಿರುವ ಜಂಗಮರ ಸಮಾವೇಶದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ನಮ್ಮ ಹೋರಾಟ ಯಾವುದೇ ಜಾತಿ ಹಾಗೂ ಸಮುದಾಯದ ವಿರುದ್ಧವಲ್ಲ. ನಮ್ಮ ಹಕ್ಕಿಗಾಗಿ ಮಾತ್ರ ಹೋರಾಟ’ ಎಂದರು.

ರಾಷ್ಟ್ರೀಯ ವೈದಿಕ ಶಿರೋಮಣಿ ಪ್ರಶಸ್ತಿ ಪಡೆದಿರುವ ಋಗ್ವೇದ ಪುರೋಹಿತ ಸೇವಾ ಸಮಿತಿ ಉಪಾಧ್ಯಕ್ಷ ಮುರಗಯ್ಯ ಸ್ವಾಮಿ ಮಾದಾಪುರಮಠ ಅವರನ್ನು ಸನ್ಮಾನಿಸಲಾಯಿತು.

ನವನಗರದ ಕಾಶಿ ಖಾಸಾ ಶಾಖಾಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಕುಂದಗೋಳದ ಕಲ್ಯಾಣಪುರಮಠದ ಬಸವಣ್ಣಜ್ಜನವರು, ಬೆಂಗಳೂರಿನ ಮಹಾಲಕ್ಷ್ಮಿ ಗುರುಕುಲದ ವೈದಿಕ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ರಾಜಕುಮಾರ ಶಾಸ್ತ್ರಿ, ರಾಜ್ಯ ವೀರಶೈವ ಜಂಗಮ ಅರ್ಚಕ ಹಾಗೂ ಪುರೋಹಿತರ ಸಂಘದ ಪ್ರಮುಖ ಚಂದ್ರಶೇಖರ ಶಾಸ್ತ್ರಿ ಹಿರೇಮಠ, ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ, ವೀರಶೈವ ಸದ್ದಬೋಧನಾ ಸಂಸ್ಥೆ ಪ್ರಕಾಶ ಬೆಂಡಿಗೇರಿ, ಜಿಲ್ಲಾ ಯುವ ವೇದಿಕೆಯ ಖಜಾಂಚಿ ವೀರೇಶ ಎಂ. ಪ್ರಳಯಕಲ್ಮಠ, ಮಹಿಳಾ ವಿಭಾಗದ ರಾಜ್ಯ ಘಟಕದ ಅಧ್ಯಕ್ಷೆ ವಾರಿಜಾಕ್ಷಿ ಮಠದ ಮತ್ತು ಜಿಲ್ಲಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹಿರೇಮಠ ಪಾಲ್ಗೊಂಡಿದ್ದರು.

***

ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಪರ್ಕ, ಸಂಘಟನೆ, ಸಂಕಲ್ಪ ಮತ್ತು ಸಂಘರ್ಷ ಸೂತ್ರಗಳನ್ನು ಅಳವಡಿಸಿಕೊಂಡು ಜಂಗಮ ಸಮಾಜ ಕಟ್ಟಬೇಕು.

- ಬಂಗಾರೇಶ ಹಿರೇಮಠ, ಯುವ ಘಟಕದ ಅಧ್ಯಕ್ಷ, ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT