ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖಕರಷ್ಟೇ ಪ್ರಕಾಶಕರಿಗೂ ಗೌರವ ಸಿಗಲಿ: ಡಾ. ಗುರುರಾಜ ಕರಜಗಿ ಅಭಿಮತ

ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅಭಿಮತ
Last Updated 19 ಸೆಪ್ಟೆಂಬರ್ 2022, 5:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪುಸ್ತಕ ಬರೆಯುವುದು ಸುಲಭ, ಅದನ್ನು ಪ್ರಕಟಿಸುವುದು ಕಷ್ಟ. ಹೀಗಾಗಿ, ಲೇಖಕನಿಗೆ ನೀಡುವಷ್ಟೇ ಗೌರವವನ್ನು ಪ್ರಕಾಶಕರಿಗೂ ನೀಡಬೇಕು’ ಎಂದು ಶಿಕ್ಷಣತಜ್ಞ, ಲೇಖಕ ಡಾ. ಗುರುರಾಜ ಕರಜಗಿ ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಹಯೋಗದಲ್ಲಿ ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ ಹಾಗೂ ಸಾಹಿತ್ಯ ಪ್ರಕಾಶನ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಹಿತ್ಯ ಭಂಡಾರದ ಸ್ಥಾಪಕ ಕೀರ್ತಿಶೇಷ ಮಾ. ಅನಂತಮೂರ್ತಿ ಅವರ ಪುಣ್ಯತಿಥಿ, ಪ್ರಕಾಶಕರಿಗೆ ಸನ್ಮಾನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಂದು ನಿರ್ದಿಷ್ಟ ಕಾರ್ಯ, ಗ್ರಂಥ ಸರ್ವಕಾಲಕ್ಕೂ ಸತ್ಯವಾದರೆ ಅದು ಸದಾ ಉಳಿಯುತ್ತದೆ. ಇದಕ್ಕೆ ಭಗವದ್ಗೀತೆ ಮತ್ತು ಮಂಕುತಿಮ್ಮನ ಕಗ್ಗವೇ ಉದಾಹರಣೆ. ಮಾಸ್ತಿ, ಡಿವಿಜಿ ಹಾಗೂ ರಾಜರತ್ನಂ ಅವರಿಂದ ಪುಸ್ತಕಗಳನ್ನು ಓದುವುದನ್ನು ಕಲಿತೆ. ಮಾಸ್ತಿ ಅವರು ಸಾವಿರ ಸಾಲು ಓದಿದರೆ ಒಂದು ಸಾಲು ಬರೆಯಬಹುದು ಎಂದು ಹೇಳುತ್ತಿದ್ದರು. ಸರಳಾತಿ ಸರಳವಾಗಿ ಬರೆಯುವುದನ್ನು ಮಾಸ್ತಿ ಅವರಿಂದ ಕಲಿಯಬೇಕು’ ಎಂದರು.

‘ಓದಿ ಮರೆಯುವುದು ಸಾಹಿತ್ಯವಲ್ಲ; ಓದುವ ಹಿತ ಮತ್ತೊಂದು ಪುಸ್ತಕವನ್ನು ಓದಲು ಹಚ್ಚಬೇಕು. ಯಾವ ಓದಿನಿಂದ ಮತ್ತೊಬ್ಬರಿಗೆ ಪ್ರಯೋಜನವಾಗುತ್ತದೆಯೋ ಅದೇ ಓದಿನ ಹಿತ’ ಎಂದು ಹೇಳಿದರು.

ಹುಬ್ಬಳ್ಳಿ ಸಾಹಿತ್ಯ ಭಂಡಾರದ ಮಾಲೀಕ, ಪ್ರಕಾಶಕ ಎಂ.ಎ. ಸುಬ್ರಹ್ಮಣ್ಯ ಮಾತನಾಡಿ, ‘ಸಾಹಿತ್ಯ ಭಂಡಾರ ಪ್ರಕಾಶನವು ಪರೋಕ್ಷವಾಗಿ ಬೀಚಿ ಅವರನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದೆ. ಅನಕೃ ಅವರ ಪುಸ್ತಕವನ್ನು ಅವರು ನಮ್ಮ ಭಂಡಾರದಿಂದಲೇ ತೆಗೆದುಕೊಂಡು ಓದಿದ್ದರು. ಸುದೀರ್ಘ ಅವಧಿಯಿಂದ ಪುಸ್ತಕ ಪ್ರಕಾಶನದಲ್ಲಿ ನಾವು ತೊಡಗಿಸಿಕೊಂಡಿದ್ದೇವೆ. ಈ ಕೆಲಸದ ಬಗ್ಗೆ ಹೆಮ್ಮೆ ಇದೆ’ ಎಂದು ಹೇಳಿದರು.

ಹಿರಿಯ ಪತ್ರಕರ್ತ ಡಾ. ಈಶ್ವರ ದೈತೋಟ ಮಾತನಾಡಿ, ‘ಇಂದು ‍‍ಪತ್ರಿಕೋದ್ಯಮ ಸೀಮಿತ ವಿಷಯಗಳ ಬಗ್ಗೆ ಮಾತ್ರ ಗಮನ ಹರಿಸುತ್ತಿದೆ. ಜನರಿಗೆ ತಿಳಿವಳಿಕೆ ನೀಡುವ ಹಾಗೂ ಅವರ ಜೀವನ ಉತ್ತಮಗೊಳಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು’ ಎಂದರು.

ಪುಸ್ತಕ ಬಿಡುಗಡೆ: ‘ವೈರಸ್‌’, ‘ಪ್ರಕೃತಿ– ಸಂಸ್ಕೃತಿ–ಕೊಕಿಲು’, ‘ನಾಲ್ಕನೆಯ ತಲೆಮಾರಿನ ಸಮರ’, ‘ಯಾದವೀ ಕಲಹಗಳ ಕುದಿಯುವ ಹಂಡೆ’, ‘ಕುಮಾರವ್ಯಾಸನ ನುಡಿಮುತ್ತುಗಳು’, ‘ಆರೋಗ್ಯ: ಸುಖ– ಸಂತೋಷಕ್ಕೆ ಅಡಿಪಾಯ’, ‘ವಚನಗಳಲ್ಲಿ ದೇಹ– ಮನಸ್ಸು’ ಹಾಗೂ ‘ಬಾಳೊಂದು ವಿಸ್ಮಯ’ ಪುಸ್ತಕಗಳನ್ನು ಗಣ್ಯರು ಬಿಡುಗಡೆ ಮಾಡಿದರು.

ಡಾ. ಗುರುರಾಜ ಕರಜಗಿ ಅವರನ್ನು ಸನ್ಮಾನಿಸಲಾಯಿತು. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶಕುಮಾರ್ ಹೊಸಮನಿ, ಲೇಖಕರಾದ ಸುದರ್ಶನ ಮೊಗಸಾಲೆ, ಡಾ. ರಾಜನ್‌ ದೇಶಪಾಂಡೆ, ಮಧುಕರ ಯಕ್ಕುಂಡಿ ಮಾತನಾಡಿದರು. ನಾ. ಮೊಗಸಾಲೆ, ಡಾ. ಜಿ.ಎಂ. ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT