ಶನಿವಾರ, ಜುಲೈ 2, 2022
25 °C
ಒಂದನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ

ತ್ವರಿತ ನ್ಯಾಯದಾನಕ್ಕೆ ಶ್ರಮಿಸೋಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ವಕೀಲರು ಹಾಗೂ ನ್ಯಾಯಾಧೀಶರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಬ್ಬರೂ ಪರಸ್ಪರ ಸಹಕಾರದಿಂದ ಕೆಲಸ ಮಾಡಿದರೆ, ಪ್ರಕರಣಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸಾಧ್ಯ’ ಎಂದು ಒಂದನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಹೇಳಿದರು.

ಇಲ್ಲಿನ ಹೊಸ ಕೋರ್ಟ್‌ ಸಂಕೀರ್ಣದಲ್ಲಿ ವಕೀಲರ ಸಂಘದಿಂದ ಗುರುವಾರ ಆಯೋಜಿಸಿದ್ದ ನೂತನ ನ್ಯಾಯಾಧೀಶರಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪ್ರಕರಣಗಳನ್ನು ಶೀಘ್ರ ಪರಿಹರಿಸೋಣ. ಜೂನ್ 26ಕ್ಕೆ ಲೋಕ್‌ ಅದಾಲತ್‌ ನಡೆಯಲಿದ್ದು, ಇದರಲ್ಲಿ ಹೆಚ್ಚು ಪ್ರಕರಣಗಳನ್ನು ಪರಿಹರಿಸಿ’ ಎಂದು ಸಲಹೆ ನೀಡಿದರು.

ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಸಿ.ಆರ್‌. ಪಾಟೀಲ ಮಾತನಾಡಿ, ‘ಕೋರ್ಟ್‌ ಸಂಕೀರ್ಣದಲ್ಲಿ ಹಲವು ಸಮಸ್ಯೆಗಳಿವೆ. ಲಿಫ್ಟ್‌ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಈ ಅವ್ಯವಸ್ಥೆಗೆ ಸಂಬಂಧಿಸಿದಂತೆ ಒಂದು ಪಿಐಎಲ್‌ ಹಾಕಬೇಕು ಎನ್ನುವ ಆಲೋಚನೆಯೂ ಬಂದಿತ್ತು. ಆದರೆ, ನಮ್ಮ ಮೇಲೆ ನಾವೇ ಕೇಸ್‌ ದಾಖಲಿಸಿಕೊಂಡಂತೆ ಆಗುತ್ತದೆ ಎನ್ನುವ ಉದ್ದೇಶದಿಂದ ದಾಖಲಿಸಲಿಲ್ಲ’ ಎಂದು ಹಾಸ್ಯ ಚಟಾಕಿ ಹಾರಿಸಿದರು.  

‘ಧಾರವಾಡದಲ್ಲಿ ಆಯೋಜಿಸುತ್ತಿರುವ ಲೋಕ್‌ ಅದಾಲತ್‌ನಲ್ಲಿ ಹೆಚ್ಚು ಪ್ರಕರಣಗಳು ಇತ್ಯರ್ಥವಾಗುತ್ತಿವೆ. ಅದಾಲತ್‌ಗೆ ಬರುವ ಶೇ 80ಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗುತ್ತಿವೆ. ಇದನ್ನು ಮುಂದುವರಿಸಿಕೊಂಡು ಹೋಗಲಾಗುವುದು’ ಎಂದರು.

ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಸುವರ್ಣಾ ಮಿರ್ಜಿ ಮಾತನಾಡಿದರು. ನ್ಯಾಯಾಧೀಶರಾದ ಎಸ್‌.ಬಿ. ಹಂದ್ರಾಳ, ಇಂದಿರಾ ಮೇಲಸ್ವಾಮಿ ಚೆಟ್ಟಿಯಾರ, ಮಾರುತಿ ಬಾಗಡೆ, ಜಿ.ಎ. ಮೂಲಿಮನಿ, ಆರ್‌.ಎಸ್‌. ಚೆನ್ನಣ್ಣವರ, ರಾಘವೇಂದ್ರ ಆರ್, ಗಣಪತಿ ಪ್ರಶಾಂತ ಎಂ., ಪ್ರೀತಿ, ರಾಜಶೇಖರ ತಿಳಗಂಜಿ, ನಾಗೇಶ ನಾಯ್ಕ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಅಣ್ವೇಕರ ಹಾಗೂ ವಕೀಲ ಲೋಕೇಶ ಇದ್ದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು