ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರ ಕುತುಬುದ್ದೀನ್ ಖಾಜಿ ಬಂಧನ; ಪ್ರತಿಭಟನೆ

Published 22 ಮಾರ್ಚ್ 2024, 9:59 IST
Last Updated 22 ಮಾರ್ಚ್ 2024, 9:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರ ಹಾಗೂ ರೈಲ್ವೆ ಹೋರಾಟ ಸಮಿತಿ‌ ಅಧ್ಯಕ್ಷ‌ ಬಾಗಲಕೋಟೆಯ ಕುತುಬುದ್ದೀನ್ ಖಾಜಿ ಅವರನ್ನು ಸುಳ್ಳು ಆರೋಪದ ಮೇಲೆ ಬಂಧಿಸಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿ ಮಹದಾಯಿ ಹೋರಾಟ ಸಮಿತಿ‌ ಸದಸ್ಯರು ಶುಕ್ರವಾರ ನಗರದ ರಾಣಿ‌ ಚನ್ನಮ್ಮ‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

'ಮಹದಾಯಿ ಯೋಜನೆ ಅನುಷ್ಠಾನಕ್ಕಿರುವ ಕಾನೂನು ತೊಡಕು ಬಗೆಹರಿಸಲಾಗದ‌ ರಾಜ್ಯ ಮತ್ತು ಕೇಂದ್ರ ಸರ್ಕಾರ, ಪ್ರತಿಭಟನೆಯನ್ನು ಹತ್ತಿಕ್ಕಲು ಹೋರಾಟಗಾರರನ್ನು ಬಂಧಿಸುವ ಕೆಲಸ ಮಾಡುತ್ತಿದೆ' ಎಂದು ಆರೋಪಿಸಿದರು.

ಈ ವೇಳೆ ಮಾತನಾಡಿದ ಸಿದ್ದು ತೇಜಿ, 'ಮಹದಾಯಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ 2016ರಲ್ಲಿ ಸಾಂಕೇತಿಕವಾಗಿ ಹುಬ್ಬಳ್ಳಿಯಲ್ಲಿ ರೈಲು ರೋಖೋ ಚಳವಳಿ ಮಾಡಲಾಗಿತ್ತು. ಆದರೆ, ರೈಲ್ವೆ ಪೊಲೀಸರು ಏಳು, ಎಂಟು ತಾಸು ರೈಲು‌ ಸಂಚಾರ ತಡೆದಿದ್ದಾರೆ ಎಂದು ಸುಳ್ಳು‌ ಪ್ರಕರಣ ದಾಖಲಿಸಿದ್ದರು. ಅದಕ್ಕೆ ಪೂರಕವಾಗಿ ಯಾವ ನೋಟಿಸ್, ವಾರಂಟ್ ಸಹ ನೀಡಿರಲಿಲ್ಲ. ಗುರುವಾರ ಏಕಾಏಕಿ ಕುತುಬುದ್ದೀನ್ ಖಾಜಿ ಅವರನ್ನು ಆರ್.ಪಿ.ಎಫ್. ಪೊಲೀಸರು ಬಾಗಲಕೋಟೆಯಲ್ಲಿ ಬಂಧಿಸಿ, ಹುಬ್ಬಳ್ಳಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಪೊಲೀಸರ ಈ ನಡೆ ಖಂಡನೀಯವಾಗಿದೆ' ಎಂದರು.

'ಅಮ್ಮಿನಬಾವಿಯಲ್ಲಿರುವ ಮಲಪ್ರಭಾ ಕುಡಿಯುವ ನೀರಿನ ಜಾಕ್ವೆಲ್ ಬಂದ್ ಮಾಡಿದ್ದಾರೆ ಎಂದು ಧಾರವಾಡ ಗ್ರಾಮೀಣ ಠಾಣೆಯಲ್ಲಿ, ಹಾಗೂ ನವಲಗುಂದ ದೂರವಾಣಿ ಕೇಂದ್ರದಲ್ಲಿ ಗದ್ದಲ ಮಾಡಿದ್ದಾರೆಂದು ನವಲಗುಂದದಲ್ಲಿ ರೈತರ ಮೇಲೆ‌ ಸುಳ್ಳು ಕೇಸ್ ಹಾಕಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸುಳ್ಳು ಪ್ರಕರಣಗಳನ್ನು ವಾಪಸ್ ಪಡೆದು, ಬಂಧನವಾಗಿರುವ ಅಮಾಯಕ ರೈತರನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತ ಹೋರಾಟಗಾರರು ಮತ್ತು ಸಮಿತಿಗಳ ಸದಸ್ಯರು ಚುನಾವಣಾ ಪ್ರಚಾರಕ್ಕೆ ಬಂದಾಗ ಕೈಗೆ ಕಪ್ಪುಬಟ್ಟೆ ಕಟ್ಟಿಕೊಂಡು ಪ್ರತಿಭಟಿಸಲಾಗುವುದು' ಎಂದು ಎಚ್ಚರಿಸಿದರು.

ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು. ಲೋಕನಾಥ ಹೆಬಸೂರು, ರಘುನಾಥರೆಡ್ಡಿ ನಡುವಿನಮನಿ ಇದ್ದರು.

ಸೊಬರದಮಠ ಆಕ್ರೋಶ

'ರೈತ ಹೋರಾಟಗಾರ ಕುತುಬುದ್ದೀನ್ ಖಾಜಿ ಅವರನ್ನು ಬಂಧಿಸಿ ಜೈಲಿಗೆ ಕಳಹಿಸಿರುವುದು ಅತ್ಯಂತ ಖಂಡನೀಯವಾಗಿದ್ದು, ಇದಕ್ಕೆಲ್ಲ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯೇ ಕಾರಣ' ಎಂದು ರೈತ ಸೇನಾ ಕರ್ನಾಟಕ‌ ಸಮಿತಿ ಅಧ್ಯಕ್ಷ ವೀರೇಶ ಸೊಬರದಮಠ ಆರೋಪಿಸಿದ್ದಾರೆ.

'ಕೇಂದ್ರ ಸಚಿವರಿಗೆ ಮಹದಾಯಿ ಯೋಜನೆ ಅನುಷ್ಠಾನ ಮಾಡುವ ಆಸಕ್ತಿಗಿಂತ ಹೆಚ್ಚಾಗಿ, ರೈತರನ್ನು ಜೈಲಿಗೆ ಕಳುಹಿಸುವುದರಲ್ಲಿ ಹೆಚ್ಚು ಆಸಕ್ತಿ ಇದ್ದಂತಿದೆ' ಎಂದು ಪ್ರಕಟಣೆಯಲ್ಲಿ ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.

'ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ನೀಡಲಾಗಿತ್ತು.‌ ಅವುಗಳನ್ನು ನಿರ್ಲಕ್ಷ್ಯ ಮಾಡಿದ್ದರಿಂದ 2016ರಲ್ಲಿ ರೈಲ್ ರೋಖೋ ಚಳವಳಿ ಮಾಡಲಾಗಿತ್ತು. ಅದರಲ್ಲಿ‌ ಪಾಲ್ಗೊಂಡಿದ್ದ 60ಕ್ಕೂ ಹೆಚ್ಚು ರೈತರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ನೀರಿಗಾಗಿ ಹೋರಾಟ ಮಾಡಿದವರ ಪರವಾಗಿ ನಿಲ್ಲಬೇಕಾದ ಜನಪ್ರತಿನಿಧಿಗಳು, ಬಂಧನ ಮಾಡಿಸುವಲ್ಲಿ ಷಡ್ಯಂತ್ರ ಮಾಡುತ್ತಿದ್ದಾರೆ. ಕೂಡಲೇ ರೈತರ ಮೇಲಿರುವ ಪ್ರಕರಣಗಳನ್ನು ಹಿಂಪಡೆಯಬೇಕು‌' ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT