ಶುಕ್ರವಾರ, ಮಾರ್ಚ್ 24, 2023
30 °C

ಮಹದಾಯಿ ಡಿಪಿಆರ್‌ ಸಿದ್ದ; ಶೀಘ್ರ ಅನುಷ್ಠಾನ: ಸಚಿವ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಮಹದಾಯಿ ಯೋಜನೆಯ ಸಮಗ್ರ ಯೋಜನಾ ವರದಿ(ಡಿಪಿಆರ್‌) ಸಿದ್ಧವಾಗಿದ್ದು, ಶೀಘ್ರದಲ್ಲಿಯೇ ಅದಕ್ಕೆ ಅಂತಿಮ ಸ್ವರೂಪ ನೀಡಿ ಅನುಷ್ಠಾನಕ್ಕೊಳಿಸಲಾಗುವುದು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮಹದಾಯಿ ಯೋಜನೆ ಕುರಿತು ಕಾಂಗ್ರೆಸ್‌ಗೆ ಸಮಾವೇಶ ಮತ್ತು ಪ್ರತಿಭಟನೆ ನಡೆಸಲು ಯಾವ ನೈತಿಕತೆಯೂ ಇಲ್ಲ. ಅಧಿಕಾರದಲ್ಲಿದ್ದಾಗ ಏನೂ ಮಾಡದ ಅವರು, ಇದೀಗ ಯೋಜನೆಯ ಅಂತಿಮ ಸ್ವರೂಪ ಸಿದ್ಧವಾಗುತ್ತಿದ್ದಂತೆ ಹೋರಾಟಕ್ಕೆ ಮುಂದಾಗಿದ್ದಾರೆ. ಸಿದ್ಧವಾದ ಅಡುಗೆಗೆ ಒಗ್ಗರಣೆ ನೀಡುವ ಸಂದರ್ಭದಲ್ಲಿ ಬಂದು, ತಾವೇ ಅಡುಗೆ ಮಾಡಿದ್ದು ಎಂದು ಹೇಳಲು ಅವರು ಮುಂದಾಗುತ್ತಿದ್ದಾರೆ. ಅವರಿಗೆ ರಾಜಕೀಯ ಮಾಡಿ ಗೊತ್ತೇ ವಿನಃ, ಕೆಲಸ ಮಾಡಿ ಗೊತ್ತಿಲ್ಲ’ ಎಂದು ಟೀಕಿಸಿದರು.

‘ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಹುಬ್ಬಳ್ಳಿ–ಧಾರವಾಡದಲ್ಲಿ ಜ. 12ರಿಂದ ಜ. 15ರವರೆಗೆ ಯುವಜನ ಮಹೋತ್ಸವ ಆಯೋಜಿಸಲಾಗಿದೆ. ಜ. 12ರಂದು ಮಧ್ಯಾಹ್ನ 3ಕ್ಕೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ನೆರವೇರಿಸಲಿದ್ದಾರೆ. ದೇಶದಾದ್ಯಂತ ಎಂಟು ಸಾವಿರಕ್ಕೂ ಹೆಚ್ಚು ಯುವಕರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದು, ನಾಲ್ಕು ದಿನ ಬೆಳಿಗ್ಗೆಯಿಂದ ಸಂಜೆವರೆಗೂ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.

‘ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಯಾತ್ರೆ ಮಾಡಿದಲ್ಲೆಲ್ಲ ಕಾಂಗ್ರೆಸ್‌ ಸೋಲುತ್ತಿದೆ. ಅದಕ್ಕಾಗಿ ಅವರ ಯಾತ್ರೆ ಯಶಸ್ವಿಯಾಗೆಂದು ನಾವೆಲ್ಲ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ವ್ಯಂಗ್ಯವಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು