ಸೋಮವಾರ, ಮೇ 10, 2021
25 °C

ಧಾರವಾಡ: ವಾರದೊಳಗೆ 66 ಹಾಸಿಗೆಗಳ ‘ಮೇಕ್‌ ಶಿಫ್ಟ್‌’ ಸಿದ್ಧ!

ಇ.ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸೋಂಕಿತರು ಹಾಗೂ ಶಂಕಿತರನ್ನು ಪ್ರತ್ಯೇಕಿಸುವ ನಿಟ್ಟಿನಲ್ಲಿ 66 ಹಾಸಿಗೆ ‘ಮೇಕ್ ಶಿಫ್ಟ್ ವಾರ್ಡ್‌’ ಎಂಬ ಕೇಂದ್ರದ ಕಾಮಗಾರಿಯನ್ನು ಜಿಲ್ಲಾಡಳಿತ ಆರಂಭಿಸಿದೆ.

ಕೇವಲ ಏಳು ದಿನಗಳಲ್ಲಿ ಈ ಕೇಂದ್ರ ಸಿದ್ಧಗೊಳ್ಳಲಿದೆ ಎಂಬುದು ಇದರ ವಿಶೇಷ. ಈ ಕೇಂದ್ರದಲ್ಲಿ 22 ಹಾಸಿಗೆಗಳ ಮೂರು ಘಟಕಗಳಿಗೆ ಅಡಿಪಾಯ ಕೆಲಸ ಆರಂಭಗೊಂಡಿದೆ. ಪ್ರಿಫ್ಯಾಬ್ರಿಕೇಟೆಡ್‌ ಕಟ್ಟಡ ಇದಾಗಿದ್ದು, ಸದ್ಯ ಕಾರ್ಖಾನೆಯಲ್ಲಿ ಸಿದ್ಧಗೊಳ್ಳುತ್ತಿದೆ. ಇನ್‌ಬಾಕ್ಸ್‌ಸ್ಪೇಸಸ್ ಕಂಪೆನಿ ಇದರ ವಿನ್ಯಾಸ ಮಾಡಿದೆ.

ಕಿಮ್ಸ್ ಆವರಣದಲ್ಲಿ 4500 ಚದರಡಿ ಪ್ರದೇಶದಲ್ಲಿ ಈ ಕೇಂದ್ರ ಸಿದ್ಧಗೊಳ್ಳುತ್ತಿದೆ. ನೆಲಹಮಡಿಯೊಂದನ್ನೇ ಹೊಂದಿರುವ ಇಲ್ಲಿ ಸುಸಜ್ಜಿತ ಆಸ್ಪತ್ರೆಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳು ಇರಲಿವೆ. ಹಾಸಿಗೆ, ವಿದ್ಯುತ್, ಆಮ್ಲಜನಕ ವ್ಯವಸ್ಥೆ, ಶೌಚಾಲಯ ಒಳಗೊಂಡಿರಲಿದೆ.

ಮೇಕ್ ಶಿಫ್ಟ್ ವಾರ್ಡ್‌ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ, ‘ಜಿಲ್ಲೆಯವರೇ ಅಲ್ಲದೆ, ನೆರೆಯ ಜಿಲ್ಲೆಯ ಸೋಂಕಿತರಿಗೂ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಸೋಂಕಿತರ ಸಂಖ್ಯೆ ಏರುತ್ತಿರುವುದರ ಜತೆಗೆ, ಸೋಂಕಿತರು ಮತ್ತು ಸೋಂಕಿನ ಗುಣಲಕ್ಷಣವುಳ್ಳವರನ್ನು ಪ್ರತ್ಯೇಕಿಸಿ ಕೋವಿಡ್ ವಾರ್ಡ್‌ಗೆ ಕಳುಹಿಸುವ ಕೆಲಸ ತಕ್ಷಣಕ್ಕೆ ಆಗಬೇಕಿದೆ. ಇದರಿಂದಲೂ ಸೋಂಕಿತರ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಈ ಮೇಕ್‌ಶಿಫ್ಟ್ ವಾರ್ಡ್ ನೆರವಾಗಲಿದೆ’ ಎಂದರು.

‘ತಲಾ ವಾರ್ಡ್‌ಗೆ ₹1ಲಕ್ಷದಂತೆ ₹66ಲಕ್ಷ ವೆಚ್ಚದಲ್ಲಿ ಈ ಆಸ್ಪತ್ರೆ ಸಿದ್ಧವಾಗುತ್ತಿದೆ. ವಿದ್ಯುತ್, ನೀರು, ಒಳಾಂಗಣ ವಿನ್ಯಾಸ, ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕವಾದ 12 ಶೌಚಾಲಯ, ಶವರ್, ಬಕೆಟ್ ಒಳಗೊಂಡಂತೆ ಸಂಪೂರ್ಣ ಸುಸಜ್ಜಿತ ಕೇಂದ್ರವನ್ನು ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಗುತ್ತಿಗೆ ಪಡೆದ ಕಂಪೆನಿ ನೀಡಲಿದೆ. ಮೇ 8ರೊಳಗಾಗಿ ಸಂಪೂರ್ಣ ಸಿದ್ಧಗೊಳ್ಳುವ ಈ ಕೇಂದ್ರ ಶೀಘ್ರದಲ್ಲಿ ಕಾರ್ಯನಿರ್ವಹಿಸಲಿದೆ’ ಎಂದು ಮಾಹಿತಿ ನೀಡಿದರು.

‘ಹತ್ತು ವರ್ಷಗಳ ವಾರೆಂಟಿ ಇರುವ ಈ ಕೇಂದ್ರವನ್ನು ಸದ್ಯ ಕೋವಿಡ್‌ ಆರೈಕೆಗೆ ಪೂರಕವಾಗಿ ಬಳಸಲಾಗುವುದು. ಮುಂಬರುವ ದಿನಗಳಲ್ಲಿ ಇದನ್ನು ಲಸಿಕೆ ಕೇಂದ್ರವನ್ನಾಗಿಯೂ ಪರಿವರ್ತಿಸಲು ಅಥವಾ ತರಗತಿಗಳನ್ನಾಗಿಯೂ ಮಾರ್ಪಡಿಸಲು ಅವಕಾಶವಿದೆ. ಈ ಕೇಂದ್ರವನ್ನು ಆರಂಭದಲ್ಲಿ ವಿಮಾನ ನಿಲ್ದಾಣ ಬಳಿಯೇ ಸ್ಥಾಪಿಸುವ ಯೋಜನೆ ಇತ್ತು. ನಂತರ ಕಿಮ್ಸ್‌ ಆವರಣದಲ್ಲೇ ಇದನ್ನು ಆರಂಭಿಸಲು ತೀರ್ಮಾನಿಸಲಾಯಿತು. ಪ್ರಿಕಾಸ್ಟ್‌ನಲ್ಲಿ ನಿರ್ಮಿಸುತ್ತಿರುವುದರಿಂದ ಭವಿಷ್ಯದಲ್ಲಿ ಇದನ್ನು ಬೇರೆಡೆ ಸ್ಥಳಾಂತರಿಸಲೂ ಅವಕಾಶವಿದೆ’ ಎಂದು ನಿತೇಶ್ ಕೆ.ಪಾಟೀಲ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು