ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಸಕಾಲಕ್ಕೆ ಸಿಗದ ಚಿಕಿತ್ಸೆ, ಅಪರಿಚಿತ ಸಾವು

ಬಾರದ ಅಂಬುಲನ್ಸ್: ಬೀದಿಯಲ್ಲೇ ಬಿದ್ದಿದ್ದ ಶವ
Last Updated 30 ನವೆಂಬರ್ 2022, 5:59 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿನ ಕರ್ನಾಟಕ ಪ್ರೌಢಶಾಲೆ ಬಳಿಯ ಕೊಂಡವಾಡ ಓಣಿ ರಸ್ತೆಯ ಬಳಿ ಅಪರಿಚಿತ ವ್ಯಕ್ತಿ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣ ವ್ಯಕ್ತಿ ಮೃತಪಟ್ಟಿರುವ ಸಾಧ್ಯತೆ ಕುರಿತು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕೊಂಡವಾಡ ಓಣಿ ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿ ಪಕ್ಕದಲ್ಲಿ ಮದ್ಯದ ಪ್ಯಾಕ್ ಇತ್ತು. ಇದನ್ನು ಕಂಡ ಕೆಲವರು ಮದ್ಯವ್ಯಸನಿ ಎಂದು ನಿರ್ಲಕ್ಷಿಸಿದರು. ಆದರೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ವ್ಯಕ್ತಿ ಮೃತಪಟ್ಟಿದ್ದಾರೆ. ನಂತರ ಕೆಲವರು ಪಾಲಿಕೆ ಹಾಗೂ ಪೊಲೀಸರಿಗೆ ಮಾಹಿತಿ ಮುಟ್ಟಿಸುವ ಪ್ರಯತ್ನ ನಡೆಸಿದರು.

ಸ್ಥಳಕ್ಕೆ ಬಂದ ಪೊಲೀಸರು 108ಕ್ಕೆ ಕರೆ ಮಾಡುವಂತೆ ಸ್ಥಳೀಯರಿಗೆ ತಿಳಿಸಿ ಹೋದರು. ಆದರೆ ಸಂಜೆಯವರೆಗೂ ಯಾರೊಬ್ಬರೂ ಬಾರದೆ, ಶವ ಬೀದಿಯಲ್ಲೇ ಬಿದ್ದಿತ್ತು. ವ್ಯಕ್ತಿಯ ಪರಿಚಯವೂ ಇಲ್ಲದ ಕಾರಣ, ದಾರಿಯಲ್ಲಿ ಹೋಗುವವರು ಮೃತ ವ್ಯಕ್ತಿಯ ದೇಹವನ್ನು ನೋಡುತ್ತಾ ಸಾಗಿದರು.

ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ಸಾಗಿಸಿರುವುದಾಗಿ ಉಪನಗರ ಠಾಣೆ ಪೊಲೀಸರು ತಿಳಿಸಿದರು.

ಬಾಲಕಿ ನಾಪತ್ತೆ; ಅಪಹರಣ ಪ್ರಕರಣ ದಾಖಲು

ಧಾರವಾಡ: ತಾಲ್ಲೂಕಿನ ಬೆಳ್ಳಿಗಟ್ಟಿ ಗ್ರಾಮದ 17 ವರ್ಷದ ಬಾಲಕಿ ನ. 14ರಿಂದ ನಾಪತ್ತೆಯಾಗಿದ್ದು, ಗ್ರಾಮೀಣ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.

5.1ಅಡಿ ಎತ್ತರವಿರುವ ಬಾಲಕಿ ನೀಲಿ ಬಣ್ಣದ ಟಾಪ್, ಚಾಕೊಲೇಟ್ ಬಣ್ಣದ ಪ್ಯಾಂಟ್ ಧರಿಸಿದ್ದಳು. ನ. 14ರ ರಾತ್ರಿ 10.30ರಿಂದ ನಸುಕಿನ 3.30ರೊಳಗೆ ಅಪಹರಣವಾಗಿರುವ ಸಾಧ್ಯತೆ ಇದೆ ಎಂದು ಪಾಲಕರು ದೂರಿನಲ್ಲಿ ಹೇಳಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಯುವಕ ಆತ್ಮಹತ್ಯೆ

ಧಾರವಾಡ: ಗುಣವಾಗದ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ರಜತಗಿರಿಯ ತನ್ನ ಮನೆಯಲ್ಲಿ ವೈಯರ್‌ನಿಂದ ನೇಣು ಹಾಕಿಕೊಂಡು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಕಾಶರಾಜ್ ಕಾಗತಿಕಾರ(32) ಆತ್ಮಹತ್ಯೆ ಮಾಡಿಕೊಂಡವರು. ಆರು ತಿಂಗಳ ಹಿಂದೆ ಇವರ ವಿವಾಹವಾಗಿತ್ತು. ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರ ಪತ್ನಿ ಶಿರಸಿಗೆ ಹೋಗಿದ್ದರು. ಈ ಸಂದರ್ಭ ಮನೆಯಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡು ಆಕಾಶರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ಮನೆಯ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ವಿಷಯ ತಿಳಿದುಬಂದಿದೆ. ವಿದ್ಯಾಗಿರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದರು.

ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್‌ನೋಟ್ ಸಿಕ್ಕಿದ್ದು, ಅದರಲ್ಲಿ ತಾನು ಅತಿಯಾದ ಭಾವನೆ ಮತ್ತು ಅನಿಯಂತ್ರಿತ ಆಲೋಚನೆಗಳಿಂದ ನೊಂದಿದ್ಧೇನೆ. ಕೆಲಸ ಸಿಗದ ಕಾರಣ ತೀವ್ರ ಮಾನಸಿಕ ಒತ್ತಡದಿಂದ ಬಳಲಿದ್ದೇನೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ತಾಯಿ ಹಾಗೂ ಪತ್ನಿಗೆ ಕ್ಷಮೆ ಯಾಚಿಸುತ್ತೇನೆ. ಪೊಲೀಸರು ಇವರಿಗೆ ಯಾವುದೇ ತೊಂದರೆ ನೀಡಬಾರದು ಎಂದು ಬರೆದಿರುವ ಕುರಿತು ಪೊಲೀಸರು ತಿಳಿಸಿದರು.

ಪತ್ನಿ ಸ್ಮಿತಾ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT