ಹುಬ್ಬಳ್ಳಿ: ಮಂಗಳೂರಿನ ಗರೋಡಿಯಲ್ಲಿ ಶನಿವಾರ ಸಂಜೆ ಆಟೊದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ಥಳದಲ್ಲಿ ದೊರೆತ ಆಧಾರ್ ಕಾರ್ಡ್‌ನಲ್ಲಿದ್ದ ಹೆಸರಿನ ವ್ಯಕ್ತಿಯ ಪೋಷಕರನ್ನು ಸ್ಥಳೀಯ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಸದ್ಯ ತುಮಕೂರಿನಲ್ಲಿ ರೈಲ್ವೆ ಉದ್ಯೋಗಿಯಾಗಿರುವ ಪ್ರೇಮರಾಜ ಹುಟಗಿ ಅವರ ಹೆಸರು ಮತ್ತು ವಿಳಾಸವಿದ್ದ ಆಧಾರ್ ಕಾರ್ಡ್ ಸ್ಫೋಟ ನಡೆದ ಸ್ಥಳದಲ್ಲಿ ದೊರೆತಿತ್ತು. ಅವರ ಪೋಷಕರು ಹುಬ್ಬಳ್ಳಿ ಮಧುರಾ ಕಾಲೊನಿ ನಿವಾಸಿಯಾಗಿದ್ದಾರೆ. ಪ್ರೇಮರಾಜ ಅವರ ತಂದೆ ಮಾರುತಿ ಹುಟಗಿ, ತಾಯಿ ರೇಖಾ ಹಾಗೂ ಸಹೋದರ ಲವರಾಜ ಅವರನ್ನು ಶನಿವಾರ ರಾತ್ರಿಯೇ ಪೊಲೀಸರು ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಮಾರುತಿ ಹುಟಗಿ, ‘ಪ್ರೇಮರಾಜ ನನ್ನ ಮಗನಾಗಿದ್ದು, ಅರು ತಿಂಗಳ ಹಿಂದೆ ಆಧಾರ್ ಕಾರ್ಡ್ ಕಳೆದುಕೊಂಡಿದ್ದ. ಸ್ಫೋಟದ ಸ್ಥಳದಲ್ಲಿ ಸಿಕ್ಕಿದೆ ಎನ್ನಲಾದ ಆಧಾರ್ ಕಾರ್ಡ್‌ನಲ್ಲಿ ನಮ್ಮ ವಿಳಾಸವಿದೆ. ಆದರೆ, ಅದರಲ್ಲಿರುವ ಭಾವಚಿತ್ರ ನನ್ನ ಮಗನದ್ದಲ್ಲ. ಶನಿವಾರ ರಾತ್ರಿ 8.45ರ ವೇಳೆಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಮನೆಗೆ ಬಂದು ವಿಚಾರಣೆ ನಡೆಸಿದ್ದಾರೆ. ಅವರು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸಿದ್ದೇವೆ. ನನ್ನ ಎದುರಿಗೇ ಮಗನ ಜೊತೆಯೂ ಮಾತನಾಡಿದ್ದಾರೆ. ಸ್ಫೋಟ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ’ ಎಂದರು.
‘ನನ್ನ ಮಗ ಯಾವ ತಪ್ಪೂ ಮಾಡಿಲ್ಲ. ವಿಚಾರಣೆಗೆ ಎಲ್ಲಿಗೆ ಬೇಕಾದರೂ ಬರುತ್ತೇವೆ. ಆಧಾರ್ ಕಾರ್ಡ್ ಕಳೆದುಕೊಂಡರೆ ಹೀಗಾಗುತ್ತದೆ ಎಂದು ತಿಳಿದಿರಲಿಲ್ಲ. ಗೊತ್ತಿದ್ದರೆ ದೂರು ನೀಡುತ್ತಿದ್ದೆವು. ನಾವು ತಪ್ಪೇ ಮಾಡದಿರುವಾಗ, ಯಾಕೆ ಹೆದರಬೇಕು’ ಎಂದು ಪ್ರೇಮರಾಜ ತಾಯಿ ರೇಖಾ ಪ್ರಶ್ನಿಸಿದರು.
‘ಸಹೋದರ ಮೂರು ವರ್ಷಗಳಿಂದ ತುಮಕೂರಿನಲ್ಲಿಯೇ ಇದ್ದಾನೆ. ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತುಮಕೂರಿನ ಠಾಣೆಗೆ ತೆರಳಿ ಈಗಾಗಲೇ ಮಾಹಿತಿ ಹಂಚಿಕೊಂಡಿದ್ದಾನೆ. ಆಧಾರ್ ಕಾರ್ಡ್‌ಗೆ ಅವನ ಭಾವಚಿತ್ರ ಅಂಟಿಸಿ ದುರುಪಯೋಗ ಪಡಿಸಿಕೊಳ್ಳಲಾಗಿದೆ’ ಎಂದು ಪ್ರೇಮರಾಜ ಸಹೋದರ ಲವರಾಜ ತಿಳಿಸಿದರು.
ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕಮಿಷನರ್ ಲಾಭೂರಾಮ್, ‘ಮಂಗಳೂರಿನಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪ್ರೇಮರಾಜ ಅವರ ಪೋಷಕರನ್ನು ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಿಸಲಾಗಿದೆ’ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.