ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ಮಾವು ಅಭಿವೃದ್ಧಿ ಕೇಂದ್ರ ಶೀಘ್ರ

ಮಾರುಕಟ್ಟೆ ಕೊರತೆ, ಬೆಳೆ ನಷ್ಟದಿಂದ ಕಂಗೆಟ್ಟ ರೈತರಿಗೆ ನೆರವಿನ ನಿರೀಕ್ಷೆ
Published 4 ಜುಲೈ 2024, 5:01 IST
Last Updated 4 ಜುಲೈ 2024, 5:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಳೆ ನಷ್ಟ, ಮಾರುಕಟ್ಟೆ ಕೊರತೆ ಸೇರಿದಂತೆ ವಿವಿಧ ಸಮಸ್ಯೆಯಿಂದ ಮಾವು ಬೆಳೆಗಾರರನ್ನು ಪಾರು ಮಾಡಲು ಜಿಲ್ಲೆಗೆ ‘ಮಾವು ಅಭಿವೃದ್ಧಿ ಕೇಂದ್ರ’ ಮಂಜೂರಾಗಿದ್ದು, ಶೀಘ್ರದಲ್ಲೇ ಸ್ಥಾಪನೆಯಾಗುವ ಸಾಧ್ಯತೆ ಇದೆ.

ಧಾರವಾಡದಲ್ಲಿ ಮಾವು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಸರ್ಕಾರದ ಹಂತದ ಪ್ರಕ್ರಿಯೆಗಳು ಬಹುತೇಕ ಪೂರ್ಣಗೊಂಡಿವೆ. ಮಾವು ಬೆಳೆ ಹಾಗೂ ಬೆಳೆಗಾರರ ಅಭಿವೃದ್ಧಿಗೆ ಹಲವು ಹಂತಗಳಲ್ಲಿ ಈ ಕೇಂದ್ರ ಶ್ರಮಿಸಲಿದೆ.

‘ಧಾರವಾಡದ ಭೂಮಿ, ಹವಾಗುಣ, ನೀರಿನ ವ್ಯವಸ್ಥೆ ಆಪೂಸ್‌ ಮಾವಿನ ಬೆಳೆಗೆ ಸೂಕ್ತವಾಗಿದೆ. ನೂರಾರು ವರ್ಷಗಳಿಂದ ಇಲ್ಲಿನ ರೈತರು ಮಾವು ಬೆಳೆಯುತ್ತಿದ್ದಾರೆ. ಇಲ್ಲಿ ಮಾವು ಅಭಿವೃದ್ಧಿ ಕೇಂದ್ರ ಸ್ಥಾಪನೆ ಮಾಡುವುದರಿಂದ ಬೆಳಗಾವಿ, ಹಾವೇರಿ, ಗದಗ, ಕೊಪ್ಪಳ, ಉತ್ತರ ಕನ್ನಡ ಸೇರಿದಂತೆ ಹಲವಾರು ಜಿಲ್ಲೆಗಳ ಮಾವು ಬೆಳೆಗಾರರಿಗೆ ಅನುಕೂಲವಾಗಲಿದೆ’ ಎಂದು ನೆಲ ಮತ್ತು ಜಲ ನಿರ್ವಹಣಾ ಸಂಸ್ಥೆ (ವಾಲ್ಮಿ) ನಿರ್ದೇಶಕ ರಾಜೇಂದ್ರ ಪೊದ್ದಾರ ತಿಳಿಸಿದರು. 

‘ಹವಾಮಾನ ಬದಲಾವಣೆ, ಸುಸ್ಥಿರ ಮಾರುಕಟ್ಟೆ ಇಲ್ಲದೆ ಮಾವು ಬೆಳೆಗಾರರು ಖರ್ಚು ಮಾಡಿದಷ್ಟೂ ಆದಾಯ ಗಳಿಸಲಾಗುತ್ತಿಲ್ಲ. ಆಪೂಸ್‌ ಜೊತೆಗೆ ಇತರೆ ಮಾವು ತಳಿಗಳನ್ನು ಇಲ್ಲಿ ಬೆಳೆಯಬೇಕಿದೆ. ಅಭಿವೃದ್ಧಿ ಕೇಂದ್ರದ ಮೂಲಕ ಇದಕ್ಕೆಲ್ಲ ಸಂಶೋಧನೆ ಆಧಾರಿತ ಪರಿಹಾರೋಪಾಯ ಕಂಡುಕೊಳ್ಳಬಹುದು. ಸಂಶೋಧನೆ, ಪ್ರಾತ್ಯಕ್ಷಿಕೆ, ತರಬೇತಿ, ಮಾರುಕಟ್ಟೆ, ರಫ್ತು ಉತ್ತೇಜನ ಇದರಿಂದ ಸಾಧ್ಯವಾಗಲಿದೆ’ ಎಂದರು.

‘ತೋಟಗಾರಿಕಾ ಇಲಾಖೆಯಿಂದ ಜಾಗ ಸೂಚಿಸಲಾಗಿದ್ದು, ಒಂದೆರಡು ತಿಂಗಳಲ್ಲಿ ಕೇಂದ್ರ ಸ್ಥಾಪನೆಯಾಗುವ ಸಾಧ್ಯತೆ ಇದೆ. ಮಾವು ಅಭಿವೃದ್ಧಿ ಮಂಡಳಿಯಿಂದ ಸಿಬ್ಬಂದಿ ನಿಯೋಜನೆ ಆಗಲಿದ್ದಾರೆ. ಆರಂಭಿಕ ಕೆಲಸಗಳಿಗಾಗಿ ₹50 ಲಕ್ಷ ಅನುದಾನ ನೀಡಲಾಗಿದೆ.  ಗುಣಮಟ್ಟದ ಮಾವು ಉತ್ಪಾದನೆ, ಮಾರುಕಟ್ಟೆ ಸಂಪರ್ಕಕ್ಕೆ ಮಂಡಳಿಯು ರೈತರಿಗೆ ಅಗತ್ಯ ತರಬೇತಿ ನೀಡಲಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

8,271 ಹೆಕ್ಟೇರ್‌ನಲ್ಲಿ ಮಾವು ಬೆಳೆ ಬೆಳೆ ಗುಣಮಟ್ಟ ಅಭಿವೃದ್ಧಿಗೆ ತರಬೇತಿ ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ಪ್ರದೇಶದಲ್ಲಿ ಜಾಗ ಗುರುತು
ಮಾವು ಅಭಿವೃದ್ಧಿ ಕೇಂದ್ರದ ಮೂಲಕ ಬೆಳೆ ರೋಗದಿಂದ ಮುಕ್ತವಾಗಬೇಕು. ದಲ್ಲಾಳಿಗಳ ಹಾವಳಿ ತಪ್ಪಬೇಕು. ರಫ್ತು ವ್ಯಾಪ್ತಿ ವಿಸ್ತರಣೆಯಾಗಬೇಕು
ಈಶ್ವರ ಮಾಳಣ್ಣವರ ಮಾವು ಬೆಳೆಗಾರ ಗಾಮನಗಟ್ಟಿ
ಧಾರವಾಡದಲ್ಲಿ ಕೇಂದ್ರ ಸ್ಥಾಪನೆಯಾಗುವುದರಿಂದ ರೈತರಿಗೆ ಸಾಕಷ್ಟು ಅನುಕೂಲವಿದೆ. ಈ ವರ್ಷ ಮಾವು ಬೆಳೆ ಕೈಹಿಡಿದಿಲ್ಲ. ಇನ್ನಾದರೂ ನಷ್ಟ ತಪ್ಪುವಂತಾಗಲಿ 
ಬಸವರಾಜ ಮನಗುಂಡಿ ಮಾವು ಬೆಳೆಗಾರ ಗಾಮನಗಟ್ಟಿ
ಮಾವು ಅಭಿವೃದ್ಧಿ ಕೇಂದ್ರಕ್ಕಾಗಿ ಧಾರವಾಡದ ಸೆಂಟರ್‌ ಫಾರ್‌ ಎಕ್ಸಲೆನ್ಸ್‌ನಲ್ಲಿ 5 ಎಕರೆ ಜಾಗ ಗುರುತಿಸಲಾಗಿದೆ. ಮಾವಿನ ಒಟ್ಟಾರೆ ಅಭಿವೃದ್ಧಿ ಸಾಧ್ಯವಾಗಲಿದೆ
ಕಾಶಿನಾಥ ಭದ್ರಣ್ಣವರ ತೋಟಗಾರಿಕೆ ಇಲಾಖೆ ಉಪನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT