ಮಂಗಳವಾರ, ಫೆಬ್ರವರಿ 18, 2020
16 °C

ತಾಯಂದಿರ ಭತ್ಯೆಗೆ ಇರುವ ಷರತ್ತು ಸಡಿಲಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ತಾಯಂದಿರಿಗೆ ಮಾತೃತ್ವ ರಕ್ಷಣಾ ಸೌಲಭ್ಯಕ್ಕಾಗಿ ನೀಡುತ್ತಿರುವ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ನೀಡುತ್ತಿರುವ ಸಾಮಾಜಿಕ ಭದ್ರತಾ ಭತ್ಯೆಗೆ ಹಾಕಿರುವ ಅನಗತ್ಯ ನಿಬಂಧನೆಗಳನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿ ಆಹಾರದ ಹಕ್ಕಿಗಾಗಿ ಆಂದೋಲನ ಸಂಘಟನೆಯ ಕಾರ್ಯಕರ್ತೆಯರು ಶುಕ್ರವಾರ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಮೂಲಕ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಿ ದೇಬಶ್ರೀ ಚೌದರಿ ಅವರಿಗೆ ಮನವಿ ಸಲ್ಲಿಸಿದ ಅವರು, ‘ದೇಶದಲ್ಲಿ ಪ್ರತಿ ವರ್ಷ 45ಸಾವಿರ ತಾಯಂದಿರ ಮರಣವಾಗುತ್ತಿದ್ದು, ಇದರಲ್ಲಿ ದಕ್ಷಿಣ ಭಾರತದಲ್ಲಿ ಕರ್ನಾಟಕವೇ ಅಗ್ರ ಸ್ಥಾನದಲ್ಲಿದೆ. ಅದರಲ್ಲೂ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯಲ್ಲಿ ತಾಯಂದಿರ ಮರಣ ಪ್ರಮಾಣ ಹೆಚ್ಚಾಗಿದೆ. ಇದನ್ನು ರಕ್ಷಿಸಲು ಜಾರಿಗೊಳಿಸಿರುವ ಈ ಯೋಜನೆಯ ಲಾಭ ಪಡೆಯಲು ಪಡಿತರ ಚೀಟಿ, ಬ್ಯಾಂಕ್ ಖಾತೆ ಪುಸ್ತಕ, ಅದಕ್ಕೆ ಆಧಾರ್ ಜೋಡಣೆ ಇವೆಲ್ಲದಕ್ಕೆ ಆಕೆಯ ಹೆಸರಿನೊಂದಿಗೆ ಪತಿಯ ಹೆಸರೂ ಸೇರಿರಬೇಕು ಎಂದು ಷರತ್ತು ವಿಧಿಸಲಾಗಿದೆ’ ಎಂದು ವಿವರಿಸಿದ್ದಾರೆ.

‘ಗ್ರಾಮೀಣ ಭಾಗದಲ್ಲಿ ಮದುವೆಯಾಗಿ ಒಂದು ವರ್ಷದೊಳಗೆ ಮಗುವಾಗಬೇಕು ಎಂಬ ಪದ್ಧತಿ ಈಗಲೂ ಇದೆ. ಹೀಗಿರುವಾಗ ವರ್ಷದೊಳಗೆ ಬಹುತೇಕ ಮಹಿಳೆಯರ ಹೆಸರಿನೊಂದಿಗೆ ಪತಿ ಹೆಸರು ಸೇರಿರುವುದಿಲ್ಲ. ಜತೆಗೆ ದಾಖಲಾತಿಗಳೂ ಬದಲಾಗಿರುವುದಿಲ್ಲ. ಹೀಗಾಗಿ ಈ ಷರತ್ತಿನಿಂದಾಗಿ ಬಹಳಷ್ಟು ಬಡ ಮಹಿಳೆಯರಿಗೆ ಯೋಜನೆಯ ಲಾಭ ಸಿಗುತ್ತಿಲ್ಲ. ಸರ್ಕಾರದ ವರದಿ ಪ್ರಕಾರ ₹2500ಕೋಟಿ ಈ ಯೋಜನೆಗಾಗಿ ಮೀಸಲಿಡಲಾಗಿದೆ. ಆದರೆ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಬೆಳಗಾವಿ ಖಾನಾಪುರ ತಾಲ್ಲೂಕಿನಲ್ಲಿ 11, ರಾಯಚೂರಿನಲ್ಲಿ 14, ಬಾಗಲಕೋಟೆಯ ಎರಡು ತಾಲ್ಲೂಕುಗಳಲ್ಲಿ 3, ಕೊಪ್ಪಳದಲ್ಲಿ 6, ವಿಜಯಪುರದಲ್ಲಿ ಒಂದು, ಉತ್ತರ ಕನ್ನಡದಲ್ಲಿ ಒಬ್ಬರು ಹಾಗೂ ಧಾರವಾಡದ ಕಲಘಟಗಿ ತಾಲ್ಲೂಕಿನಲ್ಲಿ 13 ಮಹಿಳೆಯರಿಗೆ ಮಾತ್ರ ಲಭಿಸಿದೆ. ಒಟ್ಟು 639 ತಾಯಂದಿರನ್ನು ಸಂದರ್ಶಿಸಿದಾಗ ಅವರಲ್ಲಿ 26 ಮಂದಿಗೆ ಮಾತ್ರ ಭತ್ಯೆ ಲಭಿಸಿದೆ. ಹೀಗಾಗಿ ನಿಯಮ ಸಡಿಲಿಸಿ ಎಲ್ಲಾ ತಯಾಂದರಿಗೂ ಯೋಜನೆ ಲಾಭ ಸಿಗುವಂತೆ ಮಾಡಬೇಕು’ ಎಂದು ಸಂಘಟನೆಯ ಶಾರದಾ ದಾಬಡೆ ಒತ್ತಾಯಿಸಿದ್ದಾರೆ.

2013ರಲ್ಲಿ ‘ಇಂದಿರಾಗಾಂಧಿ ಮಾತೃತ್ವ ಸಹಯೋಗ ಯೋಜನೆ’ ಹೆಸರಿನಲ್ಲಿ ಜಾರಿಗೆ ಬಂದ ಇದರಲ್ಲಿ ಒಬ್ಬ ಹಾಲುಣಿಸುವ ತಾಯಿಗೆ ₹6ಸಾವಿರ ಭತ್ಯೆ ನೀಡಲಾಗುತ್ತಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರರನ್ನು ಹೊರತುಪಡಿಸಿ ಉಳಿದೆಲ್ಲಾ ತಾಯಂದಿರಿಗೂ ಈ ಯೋಜನೆಯ ಲಾಭ ಸಿಗುವಂತಿತ್ತು. ಆದರೆ ನಂತರ ಅದನ್ನು ‘ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ’ ಎಂದು ಬದಲಿಸಿ ಭತ್ಯೆ ಮೊತ್ತವನ್ನು ₹5ಸಾವಿರಕ್ಕೆ ಇಳಿಸಲಾಯಿತು. ಜತೆಗೆ ಷರತ್ತು ವಿಧಿಸಿ ಯಾರಿಗೂ ಸಿಗದಂತಾಗಿದೆ’ ಎಂದು ಯೋಜನೆಯಲ್ಲಿನ ಸಮಸ್ಯೆಯನ್ನು ವಿವರಿಸಿದ್ದಾರೆ.

‘ಹೀಗಾಗಿ ಸಾಮಾಜಿಕ ಸುರಕ್ಷತೆ ಇರುವ ಮಹಿಳೆಯರನ್ನು ಮಾತ್ರ ಹೊರತುಪಡಿಸಿ ಎಲ್ಲಾ ಮಹಿಳೆಯರಿಗೂ ಆಗುವ ಮಕ್ಕಳಿಗೂ ತಾಯ್ತನದ ಭತ್ಯೆ ಸಿಗಬೇಕು. ಕಾನೂನಿನಲ್ಲಿ ಇರುವ ಅಂಶವನ್ನು ಸರ್ಕಾರ ಮೊಟಕುಗೊಳಿಸಬಾರದು’ ಎಂದು ದಾಬಡೆ ಅವರು ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)