ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಪ್ರಗತಿಗೆ ಶಿಕ್ಷಣ ಅಗತ್ಯ: ಶೆಟ್ಟರ್‌

Last Updated 9 ಫೆಬ್ರುವರಿ 2020, 15:37 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಮಾಜದ ಪ್ರಗತಿಗೆ ಶಿಕ್ಷಣ ಅತಿ ಮುಖ್ಯವಾಗಿದೆ. ಕಷ್ಟವಾದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಪಾಲಕರು ಮುಂದಾಗಬೇಕು ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಇಲ್ಲಿನ ಜೆ.ಸಿ ನಗರದ ಬಂಜಾರ ಭವನದಲ್ಲಿ ಬಂಜಾರ ಸೇವಾ ಸಂಘದ ನೂತನ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ಮಕ್ಕಳು ಎಲ್ಲಿಯವರೆಗೆ ಕಲಿಯುತ್ತಾರೋ ಅಲ್ಲಿಯವರೆಗೆ ವಿದ್ಯಾಭ್ಯಾಸ ಮಾಡಿಸಬೇಕು. ದೇಶದ ಉತ್ತಮ ನಾಗರಿಕರಾಗಲು ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಸಮಾಜದಲ್ಲಿರುವ ಪ್ರತಿಭಾವಂತರನ್ನು ಗುರುತಿಸಿ ಬೆಳೆಸಬೇಕು. ಅವರನ್ನು ದೇಶದ ಆಸ್ತಿಯನ್ನಾಗಿ ಮಾಡಬೇಕು ಎಂದರು.

ರಾಜ್ಯದಲ್ಲಿರುವ ಬಂಜಾರ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಹಿಂದೆಯೇ ನಿರ್ಧರಿಸಲಾಗಿತ್ತು. ಕೆಲವು ತಾಂತ್ರಿಕ ಕಾರಣಗಳಿಂದ ಅನುಷ್ಠಾನವಾಗಿರಲಿಲ್ಲ. ಈಗ ಅದನ್ನು ಕಾರ್ಯರೂಪಕ್ಕೆ ತರುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ಕುಸಗಲ್‌ ರಸ್ತೆ ಬಳಿ ಗುಡಿಸಲಿನಲ್ಲಿದ್ದ ಬಂಜಾರ ಸಮುದಾಯದವರಿಗೆ ಗೋಕುಲ ರಸ್ತೆ ಬಳಿ 10 ಎಕರೆ ಜಾಗ ಖರೀದಿಸಿ, ಬಂಜಾರ ಕಾಲೊನಿ ನಿರ್ಮಿಸಿಕೊಡಲಾಗಿದೆ. ಅಲ್ಲಿ 400ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ರಾಜ್ಯದಲ್ಲಿಯೇ ಅದು ಮಾದರಿ ಕಾಲೊನಿಯಾಗಿದೆ ಎಂದರು.

ಬಂಜಾರ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತ ಬಂದಿದೆ ಎಂದು ಹೇಳಿದರು.

ಬಂಜಾರ ಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಪಾಂಡುರಂಗ ಪಮ್ಮಾರ ಮಾತನಾಡಿ, ಬಡತನದಲ್ಲಿಯೇ ಕಷ್ಟ ಪಟ್ಟು ವಿದ್ಯಾಭ್ಯಾಸ ಮಾಡಿದ ಬಂಜಾರ ಸಮುದಾಯದ ಅನೇಕರು ಇಂದು ಉನ್ನತ ಹುದ್ದೆಯಲ್ಲಿದ್ದಾರೆ. ಅವರ ಬದುಕಿನ ಹಾದಿ ಉಳಿದವರಿಗೂ ಮಾರ್ಗದರ್ಶನವಾಗಬೇಕು. ಸಮಾಜದಲ್ಲಿರುವ ಪ್ರತಿಭಾವಂತರನ್ನು ಗುರುತಿಸಿ, ಸೂಕ್ತ ವೇದಿಕೆ ಕಲ್ಪಿಸಿಕೊಡಬೇಕು ಎಂದರು.

ಕೆಎಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿವಿಧ ಹುದ್ದೆಗಳಿಗೆ ನೇಮಕವಾದ ಬಂಜಾರ ಸಮುದಾಯದ 15 ಅಭ್ಯರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಚೈತನ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮರಸಿಂಗ್‌ ತಿಲಾವತ್‌, ಮುಖಂಡರಾದ ರೇವುನಾಯಕ ಬೆಳಮಗಿ, ಡಿ. ರಾಮಾ ನಾಯಕ, ನಾಮದೇವ ರಾಠೋಡಕರ್, ಮಾನಸಿಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT