ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಕ್ಕಾಗಿ ಕಾಂಗ್ರೆಸ್‌ನಲ್ಲಿ ಒಳಜಗಳ: ಸಚಿವ ಪ್ರಹ್ಲಾದ ಜೋಶಿ

Published 29 ಅಕ್ಟೋಬರ್ 2023, 9:05 IST
Last Updated 29 ಅಕ್ಟೋಬರ್ 2023, 9:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ರಾಜ್ಯ ಕಾಂಗ್ರೆಸ್‌ನಲ್ಲಿ ದಿನದಿಂದ ದಿನಕ್ಕೆ ಭಿನ್ನಮತ ಹೆಚ್ಚಾಗುತ್ತಿದ್ದು, ಅಧಿಕಾರಕ್ಕಾಗಿ ಒಳಜಗಳ ಆರಂಭವಾಗಿದೆ. ಇದನ್ನು ಮರೆಮಾಚಲು ಹುಲಿ ಉಗುರಿನ ಪೆಂಡೆಂಟ್ ಹಾಗೂ ಆಪರೇಷನ್ ಕಮಲದ ವಿಷಯ ಮುನ್ನೆಲೆಗೆ ತಂದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ' ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಭಾನುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಶಾಸಕರನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ಜಗಳ ತಾರಕಕ್ಕೇರಿದೆ. ಸಿಎಂ ಅವರು ಡಿಸಿಎಂ ಅವರನ್ನು ಹೊರಗಿಟ್ಟು ಸಭೆ ನಡೆಸುತ್ತಿದ್ದಾರೆ. ಎರಡು, ಮೂರು ಡಿಸಿಎಂ ಹುದ್ದೆ ಸೃಷ್ಟಿಸುವ ವಿಷಯ ಹರಿಯಬಿಡುತ್ತಿದ್ದಾರೆ. ಕಾಂಗ್ರೆಸ್ನ ಗೊಂದಲದಿಂದ ರಾಜ್ಯದ ಜನ ಅತಂತ್ರರಾಗಿದ್ದಾರೆ. ಅಭಿವೃದ್ಧಿ ಕಾರ್ಯಗಳೆಲ್ಲ ಸ್ಥಗಿತವಾಗಿದೆ' ಎಂದು ಆರೋಪಿಸಿದರು.

'ಕಾಂಗ್ರೆಸ್ ಸರ್ಕಾರ ಉರುಳಿಸಲು ಬಿಜೆಪಿ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ರಾಜ್ಯದ ಜನ ಅವರಿಗೆ ಅಧಿಕಾರ ನೀಡಿದ್ದು, ಐದು ವರ್ಷ ನಡೆಸಲಿ. ಆದರೆ, ಸಿದ್ದರಾಮಯ್ಯ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಬಾಲಿಶವಾದ ಹೇಳಿಕೆ, ಇಲ್ಲಸಲ್ಲದ ಆರೋಪ ಮಾಡುವುದು ಬಿಡಲಿ' ಎಂದರು.

'ಸಿಎಂ ಸಿದ್ದರಾಮಯ್ಯ ಅವರು, ಕರ್ನಾಟಕ ಸ್ವಾಭಿಮಾನ ಎಂದು ಮಾತನಾಡುತ್ತಿದ್ದಾರೆ. ಆದರೆ, ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರಕ್ಕೆ ಅವರು ಸಹಕಾರ ನೀಡುತ್ತಿಲ್ಲ' ಎಂದು ಆರೋಪಿಸಿದರು.

ಕಲಬುರ್ಗಿಯಲ್ಲಿ ನಡೆದ ಕೆಇಎ ಎಫ್.ಡಿ.ಎ ಪರೀಕ್ಷೆ ಅವ್ಯವಹಾರದ ಕುರಿತು ಪ್ರತಿಕ್ರಿಯಿಸಿದ ಸಚಿವ ಜೋಶಿ, 'ಬಿಜೆಪಿ ಸರ್ಕಾರ ಅವಧಿಯಲ್ಲಿ ಪಿಎಸ್ಐ ಹಗರಣ ಹೊರಬಂದಾಗ, ಐಜಿ ಅವರನ್ನೇ ಜೈಲಿಗೆ ಕಳುಹಿಸಲಾಗಿತ್ತು. ಪರೀಕ್ಷೆ ಅಕ್ರಮ ತಡೆಗಟ್ಟಲು ಸಾಕಷ್ಟು ತಂತ್ರಜ್ಞಾನವಿದ್ದರೂ, ಕಲಬುರ್ಗಿಯಲ್ಲಿ ಅಕ್ರಮ ನಡೆದಿರುವುದು ಅನುಮಾನ ಮೂಡಿಸುತ್ತಿದೆ. ಕಾಂಗ್ರೆಸ್ ನಾಯಕ‌ ಮಲ್ಲಿಕಾರ್ಜುನ ಖರ್ಗೆ ಅವರ ಜಿಲ್ಲೆಯಲ್ಲಿಯೇ ಯಾಕೆ ಹಗರಣ ಆಗುತ್ತಿದೆ ಎಂದು ಗೊತ್ತಾಗುತ್ತಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT