ನವಲಗುಂದ: ವಿಧಾನಸಭಾ ಕ್ಷೇತ್ರದ ರಸ್ತೆಗಳು ಕಳೆದ 6 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಣದೇ ಇರುವುದರಿಂದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಮಳೆಗಾಲ ಮುಗಿದ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತೇವೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಅವರು ಬುಧವಾರ ಮಳೆ ಹಾನಿ ಹಾಗೂ ಬೆಣ್ಣಿಹಳ್ಳ ವೀಕ್ಷಣೆಗೆ ನವಲಗುಂದ ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ತೆರಳುವ ಮಾರ್ಗ ಮಧ್ಯೆ ಮಹಾದಾಯಿ–ಕಳಸಾ–ಬಂಡೂರಿ ರೈತ ಹೋರಾಟ ವೇದಿಕೆಗೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದರು. ನದಿ ಜೋಡಣೆ, ರೈತರ ಸಾಲಮನ್ನಾ, ಬೆಳೆ ವಿಮೆ ಪರಿಹಾರ, ಕಳಸಾ ಬಂಡೂರಿ ಯೋಜನೆ ಟೆಂಡರ್ ಸೇರಿದಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹರಿಸಲಾಗುವುದು ಎಂದರು.
ಇನ್ನೂ ಬೆಣ್ಣಿಹಳ್ಳ, ಹಂದಿಗನಹಳ್ಳ ಮುಂತಾದ ಹಳ್ಳಗಳ ಪ್ರವಾಹದಿಂದ ಪ್ರತಿ ವರ್ಷ ರೈತರಿಗೆ ಹಾನಿಯಾಗುತ್ತಿದ್ದು, ಅಭಿವೃದ್ಧಿ ಪಡಿಸಲು ಈಗಾಗಲೇ ಡಿಪಿಆರ್ ತಯಾರಿಸಲಾಗಿದೆ. ಬೆಂಗಳೂರಿನಲ್ಲಿ ಸಭೆ ನಡೆಸಿ ಹಳ್ಳಗಳ ವಿಸ್ತರಣೆ ಹಾಗೂ ತಡೆಗೋಡೆ ನಿರ್ಮಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ನದಿ ಹಳ್ಳಗಳು ಭಾರಿ ಪ್ರಮಾಣದಲ್ಲಿ ಹರಿಯುತ್ತಿವೆ. ಹಳ್ಳದ ಸೇತುವೆಗಳ ಮೇಲೆ ಸಂಚರಿಸುವಾಗ ಸಾರ್ವಜನಿಕರು ಎಚ್ಚರ ವಹಿಸುವುದು ಅಗತ್ಯ ಎಂದರು.
ನಂತರ ತಾಲ್ಲೂಕಿನ ನಾಗನೂರ ಗ್ರಾಮಕ್ಕೆ ಭೇಟಿ ನೀಡಿ ಸೋರುತ್ತಿರುವ ಸೊಸೈಟಿ ಕಟ್ಟಡ ಹಾಗೂ ಕಡದಳ್ಳಿ ಗ್ರಾಮದ ಕೆರೆ ಹೂಳು ಎತ್ತುವ ಕಾಮಗಾರಿ ವೀಕ್ಷಣೆ ಮಾಡಿದರು. ಗುಡಿಸಾಗರ, ನಾಗನೂರ ಹಾಗೂ ಕಡದಳ್ಳಿ, ಅರಹಟ್ಟಿ ಗ್ರಾಮಸ್ಥರು ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿದರು.
ಕಳೆದ ವರ್ಷ ಅತಿವೃಷ್ಟಿ ಭಾರಿ ಅನಾಹುತ ಸೃಷ್ಟಿಸಿದ ಅರಹಟ್ಟಿ ಹಾಗೂ ತಡಹಾಳ ಮಧ್ಯದಲ್ಲಿರುವ ಹಂದಿಗೇನಹಳ್ಳ ವೀಕ್ಷಿಸಿದರು. ನಾಯಕನೂರು ಗ್ರಾಮದ ಕರಿಯಮ್ಮ ದೇವಿ ದೇವಸ್ಥಾನ ಕಂಪೌಂಡ್ ನಿರ್ಮಾಣ ಹಾಗೂ ಆವರಣ ಕಾಂಕ್ರೀಟ್ ಮಾಡುವುದು, ಹಂದಿಗೇನ ಹಳ್ಳಕ್ಕೆ ಸೇತುವೆ ನಿರ್ಮಾಣ, ರಸ್ತೆ ಅಭಿವೃದ್ಧಿ ಹಾಗೂ ನಾವಳ್ಳಿಯಿಂದ ತಡಹಾಳ ಬೆಣ್ಣಿಹಳ್ಳ ಹೂಳು ತೆಗೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಗ್ರಾಮಸ್ಥರು ಸಲ್ಲಿಸಿದರು.
ಶಾಸಕ ಎನ್.ಎಚ್.ಕೋನರಡ್ಡಿ ರಸ್ತೆ, ಮನೆ ಬಿದ್ದವರಿಗೆ ಪರಿಹಾರ ಹಾಗೂ ರೈತರ ಸಮಸ್ಯೆ ಕುರಿತು ಸಚಿವರಿಗೆ ವಿವರಿಸಿದರು.
ಕಾಂಗ್ರೆಸ್ ಗ್ರಾಮೀಣ ಘಟಕದ ಜಿಲ್ಲಾ ಅಧ್ಯಕ್ಷ ಅನಿಲ್‌ಕುಮಾರ್ ಪಾಟೀಲ, ವಿನೋದ ಅಸೂಟಿ, ಚಂಬಣ್ಣ ಹಾಳದೋಟರ, ವರ್ಧಮಾನಗೌಡ ಹಿರೇಗೌಡ್ರ, ಮಂಜುನಾಥ ಮಾಯಣ್ಣವರ, ಆರ್.ಎಚ್.ಕೋನರಡ್ಡಿ, ಸದುಗೌಡ ಪಾಟೀಲ, ವಿಜಯಗೌಡ ಪಾಟೀಲ, ರಾಜು ಹಳ್ಯಾಳ, ರಾಘು ಮೇಟಿ, ನಾರಾಯಣ ರಂಗರಡ್ಡಿ, ನವೀನ್ ಹೊಸಗೌಡ್ರ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.