ಬಾಲಸುಟ್ಟ ಬೆಕ್ಕು ಸಿಎಂ ಸಿದ್ದರಾಮಯ್ಯ: ಜೋಶಿ
ಹುಬ್ಬಳ್ಳಿ: ‘ಮುಡಾ‘ ನಿವೇಶನ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಾಬರಿಯಾಗಿ ಬಾಲಸುಟ್ಟ ಬೆಕ್ಕಿನಂತೆ ಓಡಾಡುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಸಿದ್ದರಾಮಯ್ಯ ಟಗರೋ ಹುಲಿನೋ ಸಿಂಹನೋ ಕುರಿನೋ ಎಂದು ನಾವು ಹೇಳಿಲ್ಲ. ನೈತಿಕ ಹೊಣೆಹೊತ್ತು ಅವರು ರಾಜೀನಾಮೆ ನೀಡಬೇಕು ಎಂದಿದ್ದೇವೆ’ ಎಂದು ‘ಸಿದ್ದರಾಮಯ್ಯ ಟಗರು’ ಎಂದು ಸಚಿವ ಜಮೀರ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದರು. ‘ಸಿದ್ದರಾಮಯ್ಯ ಅವರಿಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ದಿನ ಬೆಳಗಾದರೆ ರಾಜ್ಯಪಾಲರ ಭೇಟಿ ಮಾಧ್ಯಮಗಳಿಗೆ ಒಂದೊಂದು ಹೇಳಿಕೆ ನೀಡುವುದು ಮಾಡುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಮೊರೆ ಹೋಗಿದ್ದಾರೆ ಎಂದಾದರೆ ಆದೇಶ ಬರುವವರೆಗೆ ಕಾಯಲಿ. ನ್ಯಾಯ ಸಿಗುತ್ತದೆ ಎಂದು ಹೇಳಲಿ ನೋಡೋಣ. ಅದನ್ನು ಬಿಟ್ಟು ಕೋವಿಡ್ ಸಂದರ್ಭದಲ್ಲಿ ನಡೆದ ಭ್ರಷ್ಟಾಚಾರ ತನಿಖೆ ನಡೆಸುತ್ತೇವೆ ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂದು ದಿಕ್ಕು ತಪ್ಪಿಸುವ ಹೇಳಿಕೆ ನೀಡುವುದು ಯಾಕೆ’ ಎಂದು ಪ್ರಶ್ನಿಸಿದರು. ‘ಭಾವನಾತ್ಮಕವಾಗಿ ಮಾತನಾಡಿ ಬ್ಲ್ಯಾಕ್‌ಮೇಲ್ ಮಾಡುವ ತಂತ್ರ ಹಾಗೂ ನಾಟಕಗಳನ್ನು ಅವರು ಬಂದ್ ಮಾಡಲಿ’ ಎಂದರು.