ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ಶಾಲೆಯ ಗೋಡೆ ಒಡೆದ ದುಷ್ಕರ್ಮಿಗಳು

ಗಿರಣಿಚಾಳ; ಶಾಲೆಯ ಹಳೆಯ ವಿದ್ಯಾರ್ಥಿಗಳ ಪ್ರತಿಭಟನೆ, ಕ್ರಮಕ್ಕೆ ಆಗ್ರಹ
Published 20 ಆಗಸ್ಟ್ 2024, 16:22 IST
Last Updated 20 ಆಗಸ್ಟ್ 2024, 16:22 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಕಾರವಾರ ರಸ್ತೆಯ ಗಿರಣಿಚಾಳದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಠಡಿಯ ಗೋಡೆಯನ್ನು  ದುಷ್ಕರ್ಮಿಗಳು ಒಡೆದು ಹಾಕಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.

ಇದನ್ನು ಖಂಡಿಸಿ, ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳು ಮಂಗಳವಾರ ಶಾಲೆಯ ಬಳಿ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಮಹೇಶ ಟೆಂಗಿನಕಾಯಿ ಪರಿಶೀಲನೆ ನಡೆಸಿ, ಘಟನೆ ಬಗ್ಗೆ ಮಾಹಿತಿ ಪಡೆದರು. ಹಳೆಯ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಸರ್ಕಾರಿ ಶಾಲೆ ಉಳಿವಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

‘138 ವರ್ಷಗಳ ಇತಿಹಾಸವಿರುವ ಶಾಲೆಯ ಗೋಡೆಯನ್ನು ದುಷ್ಕರ್ಮಿಗಳು ಕೆಡವಿರುವುದು ಖಂಡನೀಯ. ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಪೊಲೀಸರು ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯವರು ಕೊಠಡಿಯ ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಶಾಲೆಗಳ ಜಾಗವನ್ನು ಯಾರಾದರೂ ಅತಿಕ್ರಮಣ ಮಾಡಲು ಮುಂದಾದರೆ ಸಹಿಸುವುದಿಲ್ಲ. ಸರ್ಕಾರಿ ಶಾಲೆಗಳು ಉಳಿಯಬೇಕು ಎಂಬುದು ನಮ್ಮ ಆಶಯ. ಈ ಹಿಂದೆ ಬ್ರಾಡ್‌ವೇನಲ್ಲಿದ್ದ ಶಾಲೆಯನ್ನು ಹೋರಾಟದ ಮೂಲಕವೇ ಉಳಿಸಿದ್ದೇವೆ’ ಎಂದರು.

ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ‘ನಾನು ಈ ಶಾಲೆಯ ಹಳೆಯ ವಿದ್ಯಾರ್ಥಿ. ಶಾಲೆಗೆ ಶತಮಾನದ ಇತಿಹಾಸ ಇದೆ. ಕಿಡಿಗೇಡಿಗಳ ಕೃತ್ಯದ ಕುರಿತು ಸಮಗ್ರ ತನಿಖೆಯಾಗಬೇಕು. ಶಾಲೆಯ ಅಭಿವೃದ್ಧಿಗೂ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಶಾಲೆಯ ಗೋಡೆ ಒಡೆದಿರುವುದರ ಹಿಂದೆ ಭೂಮಾಫಿಯಾದವರ ಕೈವಾಡ ಇರುವ ಶಂಕೆ ಇದೆ. ಈ ಕುರಿತು ತನಿಖೆ ನಡೆಸಿ ಸತ್ಯಾಂಶ ಬಯಲಿಗೆಳೆಯಬೇಕು. ಸರ್ಕಾರಿ ಶಾಲೆ ಉಳಿಸಬೇಕು’ ಎಂದು ಸ್ಥಳೀಯರು ಆಗ್ರಹಿಸಿದರು.

ಈ ವೇಳೆ ಗಿರಿಣಿಚಾಳ ನಿವಾಸಿ ಮೋಹನ ಹಿರೇಮನಿ, ಹನುಮಂತಪ್ಪ ಮಾಲಪಲ್ಲಿ, ಮಾರುತಿ ಬಾರಕೇರ, ರವಿ ದೊಡ್ಡಮನಿ ಇದ್ದರು.

ಕೊಠಡಿ ದುರಸ್ತಿಗೆ ಕ್ರಮ; ಬಿಇಒ
ಹುಬ್ಬಳ್ಳಿ: ‘ಶಾಲೆಯ ಕೊಠಡಿಯ ಗೋಡೆ ಒಡೆದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದ್ದು ಈ ಬಗ್ಗೆ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಹುಬ್ಬಳ್ಳಿ ಶಹರ ಬಿಇಒ ಚನ್ನಪ್ಪಗೌಡ ಹೇಳಿದರು. ‘ಗೋಡೆ ಒಡೆದಿದ್ದಕ್ಕೆ ₹50 ಸಾವಿರ ನಷ್ಟವಾಗಿದೆ. ಬುಧವಾರದಿಂದಲೇ ದುರಸ್ತಿ ಕಾರ್ಯ ಆರಂಭಿಸಲಾಗುವುದು. ಶಾಲೆಯ ಜಾಗವನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ’ ಎಂದರು. ‘ಕಟ್ಟಡವನ್ನು ಯಾವಾಗ ನಿರ್ಮಿಸಲಾಗಿದೆ ಎಂಬ ಬಗ್ಗೆಯೂ ದಾಖಲೆಗಳು ಇಲ್ಲ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ 22 ಮಕ್ಕಳು ಓದುತ್ತಿದ್ದಾರೆ. ಒಂದು ಕೊಠಡಿಗೆ ಹಾನಿಯಾಗಿರುವುದರಿಂದ ಇನ್ನೊಂದು ಕೊಠಡಿಯಲ್ಲಿ ಮಂಗಳವಾರ ತರಗತಿ ನಡೆಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT