ಬುಧವಾರ, ಆಗಸ್ಟ್ 10, 2022
25 °C
ವಾಡಿಕೆಗಿಂತ ಕಡಿಮೆ ಮಳೆ: ಕೃಷಿ ಕಾರ್ಯಕ್ಕಿಲ್ಲ ತೊಡಕು

ಹುಬ್ಬಳ್ಳಿ | ಜಿಲ್ಲೆಯಾದ್ಯಂತ ಮಳೆ ನಿರೀಕ್ಷೆ; ಬಿತ್ತನೆ ಉತ್ತಮ

ಗಣೇಶ ವೈದ್ಯ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಜಿಲ್ಲೆಯಾದ್ಯಂತ ಜೂನ್ ತಿಂಗಳಲ್ಲಿ ಸುರಿದ ಮಳೆ ಕೃಷಿಗೆ ಅನುಕೂಲಕರವಾಗಿದೆ. ಕೆಲವು ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿದ್ದರೂ ಮುಂದಿನ ದಿನಗಳಲ್ಲಿ ಒಳ್ಳೆಯ ಮಳೆ ಆಗುವ ನಿರೀಕ್ಷೆಯಲ್ಲಿ ರೈತರು ಬಿತ್ತನೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.

ಜಿಲ್ಲೆಯ ಸರಾಸರಿ ಗಮನಿಸಿದರೆ ಜೂನ್ ತಿಂಗಳಲ್ಲಿ ವಾಡಿಕೆಯಂತೆ 10 ಸೆಂ.ಮೀ. ಮಳೆ ಆಗಬೇಕಿತ್ತು. ಆದರೆ ಜೂನ್ 1ರಿಂದ 25ರ ವರೆಗೆ 8.5 ಸೆಂ.ಮೀ. ಮಳೆ ಆಗಿದೆ. ನವಲಗುಂದ ಮತ್ತು ಧಾರವಾಡ ತಾಲ್ಲೂಕಿನಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚಿನ ಮಳೆ ಆಗಿದೆ. ಉಳಿದಂತೆ ಹುಬ್ಬಳ್ಳಿ, ಕಲಘಟಗಿ, ಕುಂದಗೋಳ, ಹುಬ್ಬಳ್ಳಿ ನಗರ, ಅಳ್ನಾವರ ಮತ್ತು ಅಣ್ಣಿಗೇರಿ ತಾಲ್ಲೂಕುಗಳಲ್ಲಿ ನಿರೀಕ್ಷಿತ ಮಳೆ ಆಗಿಲ್ಲ.

ಜೂನ್ ತಿಂಗಳಲ್ಲಿ ಧಾರವಾಡ ತಾಲ್ಲೂಕಿನಲ್ಲಿ 11 ಸೆಂ.ಮೀ. (ವಾಡಿಕೆ 9.2 ಸೆಂ.ಮೀ.), ನವಲಗುಂದದಲ್ಲಿ 8.4 ಸೆಂ.ಮೀ. (7.8 ಸೆಂ.ಮೀ), ಹುಬ್ಬಳ್ಳಿಯಲ್ಲಿ 8.6 ಸೆಂ.ಮೀ. (9.6 ಸೆಂ.ಮೀ.), ಕಲಘಟಗಿಯಲ್ಲಿ 8.9 ಸೆಂ.ಮೀ. (12.6 ಸೆಂ.ಮೀ.), ಕುಂದಗೋಳದಲ್ಲಿ 5.3 ಸೆಂ.ಮೀ. (7.4 ಸೆಂ.ಮೀ.), ಹುಬ್ಬಳ್ಳಿ ನಗರದಲ್ಲಿ 6.6 ಸೆಂ.ಮೀ. (9.1 ಸೆಂ.ಮೀ.), ಅಣ್ಣಿಗೇರಿಯಲ್ಲಿ 7.1 ಸೆಂ.ಮೀ. (8 ಸೆಂ.ಮೀ.) ಮತ್ತು ಅಳ್ನಾವರದಲ್ಲಿ 12.3 ಸೆಂ.ಮೀ. (18.5 ಸೆಂ.ಮೀ.) ಮಳೆ ಆಗಿದೆ. ಅಳ್ನಾವರ ತಾಲ್ಲೂಕಿನಲ್ಲಿ ನಿರೀಕ್ಷೆಗಿಂತ ಬಹಳ ಕಡಿಮೆ ಪ್ರಮಾಣದಲ್ಲಿ ಮಳೆ ಆಗಿದೆ.

ಬಿತ್ತನೆಗಿಲ್ಲ ಹಿನ್ನಡೆ: ಜನವರಿಯಿಂದ ಜೂನ್‌ವರೆಗೆ ಪರಿಗಣಿಸಿದರೆ 22.6 ಸೆಂ.ಮೀ. ಮಳೆ ಆಗಬೇಕಿತ್ತು. ಬದಲಾಗಿ 35.5 ಸೆಂ.ಮೀ. ಮಳೆ ಆಗಿದೆ. ಆದ್ದರಿಂದ ಜೂನ್ ತಿಂಗಳಲ್ಲಿ ನಿರೀಕ್ಷೆಗಿಂತ ಕೊಂಚ ಕಡಿಮೆ ಮಳೆ ಆದರೂ ಬಿತ್ತನೆಗೆ ಹಿನ್ನಡೆ ಆಗಿಲ್ಲ.

ವರುಣರಾಯ ಕೈಬಿಡುವುದಿಲ್ಲ ಎಂಬ ನಿರೀಕ್ಷೆಯಲ್ಲಿ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ರೈತರು ಬಿತ್ತನೆ ಕಾರ್ಯವನ್ನು ಮುಗಿಸಿದ್ದಾರೆ. ಜಿಲ್ಲೆಯಲ್ಲಿ ಈ ಸಾಲಿನಲ್ಲಿ 2.73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಗುರಿ ಹೊಂದಲಾಗಿದೆ. 2.34 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯೂ ಪೂರ್ಣಗೊಂಡಿದೆ. ಈಗಾಗಲೇ ಬಿತ್ತನೆ ಆಗಿರುವ ಹೆಸರು ಹೊಲಗಳಿಗೆ ಕಳೆದ ಮೂರು ತಿಂಗಳುಗಳ ಮಳೆ ಅನುಕೂಲಕರವಾಗಿ ಪರಿಣಮಿಸಿದೆ. ಜೋಳ, ಹತ್ತಿ, ಶೇಂಗಾ ಬಿತ್ತನೆ ಇನ್ನಷ್ಟೇ ಆಗಬೇಕಿದೆ.

ನವಲಗುಂದ ಮತ್ತು ಅಳ್ನಾವರ ತಾಲ್ಲೂಕುಗಳಲ್ಲಿ ಈಗಾಗಲೇ ನಿರೀಕ್ಷೆಯಷ್ಟು ಬಿತ್ತನೆ ಆಗಿದೆ. ಕುಂದಗೋಳ ಮತ್ತು ಧಾರವಾಡದಲ್ಲಿ ಇನ್ನಷ್ಟೇ ಚುರುಕು ಪಡೆದುಕೊಳ್ಳಬೇಕಿದೆ.

‘ಜೂನ್ ತಿಂಗಳಲ್ಲಿ ಸ್ವಲ್ಪವೇ ಕಡಿಮೆ ಆಗಿದ್ದರೂ ಮೇ ತಿಂಗಳಲ್ಲಿ ಸುರಿದ ಮಳೆಯು ಬೆಳೆಗಳಿಗೆ ಅನುಕೂಲಕರವಾಗಿಯೇ ಇತ್ತು. ಹೆಚ್ಚಿನ ಹೊಲಗಳಲ್ಲಿ ಈಗಾಗಲೇ ಬಿತ್ತನೆ ಆಗಿದ್ದು ಬೀಜ ಮೊಳಕೆಯೊಡೆದು ಹಸಿರು ಮೂಡಿದೆ’ ಎನ್ನುತ್ತಾರೆ ಅಳ್ನಾವರ ತಾಲ್ಲೂಕಿನ ಕೋಗಿಲಗೇರಿ ರೈತ ಭರತೇಶ ಪಾಟೀಲ.

**

ಈಗಾಗಲೇ ಬಿತ್ತನೆ ಆಗಿರುವ ಹೊಲಗಳಿಗೆ ಈವರೆಗಿನ ಮಳೆ ಒಳ್ಳೆಯ ಫಲಿತಾಂಶವನ್ನೇ ನೀಡಿದೆ. ತಿಂಗಳಾಂತ್ಯದ ವರೆಗೆ ಇನ್ನೂ ಉತ್ತಮ ಮಳೆ ಆಗಲಿದ್ದು, ಬಿತ್ತನೆಯೂ ಇನ್ನಷ್ಟು ಪ್ರಗತಿ ಸಾಧಿಸಲಿದೆ.
–ಐ.ಬಿ. ರಾಜಶೇಖರ, ಕೃಷಿ ಇಲಾಖೆ ಜಂಟಿ ನಿರ್ದೇಶಕ, ಧಾರವಾಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು