ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ಮಾರುಕಟ್ಟೆಗೆ ಕನ್ಯಾಕುಮಾರಿ ‘ತಾಳೆ ಬೆಲ್ಲ’

ಔಷಧೀಯ ಗುಣವುಳ್ಳ ತಾಳೆ ಬೆಲ್ಲ ಖರೀದಿಗೆ ಮುಗಿಬಿದ್ದ ಜನ
Last Updated 15 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿ ನಗರದಲ್ಲಿ ತಮಿಳುನಾಡಿನ ಕನ್ಯಾಕುಮಾರಿಯ ‘ತಾಳೆ ಬೆಲ್ಲ’ ಮಾರಾಟ ಜೋರಾಗಿ ನಡೆದಿದೆ. ತೆಂಗಿನ ಚಿಪ್ಪಿನ ಆಕಾರದ ತಾಳೆ ಬೆಲ್ಲದ ಅಚ್ಚುಗಳು ದಾರಿ ಹೋಕರನ್ನು ಸೆಳೆಯುತ್ತಿದ್ದು, ಜನರು ಮುಗಿಬಿದ್ದು ಖರೀದಿಸತೊಡಗಿದ್ದಾರೆ.

ದೇಶಪಾಂಡೆ ನಗರದ ಗುಜರಾತ್‌ ಭವನದ ಎದುರು ತಾಳೆ ಬೆಲ್ಲದ ಮಾರಾಟದಲ್ಲಿ ನಿರತವಾಗಿದ್ದ ಕನ್ಯಾಕುಮಾರಿಯ ವ್ಯಾಪಾರಿ ಸೆಲ್ವರಾಜ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ತಾಳೆ ಬೆಲ್ಲ (ಕರುಪತ್ತಿ) ಕೆ.ಜಿ.ಗೆ ₹140 ರಂತೆ ಹಾಗೂ ಸುಂಟಿ, ಕಾಳು ಮೆಣಸು, ಏಲಕ್ಕಿ ಮಿಶ್ರಣದ ಖಾರ ಮತ್ತು ಸಿಹಿಯಾಗಿರುವ ತಾಳೆ ಬೆಲ್ಲ (ಪನಾಂಗ್‌ ಕರುಪತ್ತಿ) ಕೆ.ಜಿ.ಗೆ ₹ 240ರಂತೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.

ಕನ್ಯಾಕುಮಾರಿಯಿಂದ ಎಂಟು ಜನ ತಾಳೆ ಬೆಲ್ಲವನ್ನು ತೆಗೆದುಕೊಂಡು ಬಂದಿದ್ದೇವೆ. ಅವಳಿ ನಗರದಲ್ಲಿ ರಸ್ತೆ ಪಕ್ಕದಲ್ಲಿ ಮಾರಾಟ ಮಾಡುತ್ತಿದ್ದೇವೆ. ತಾಳೆಬೆಲ್ಲ ಖರೀದಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪ್ರತಿ ದಿನ 100 ಕೆ.ಜೆ.ಗೂ ಅಧಿಕ ತಾಳೆ ಬೆಲ್ಲ ಮಾರಾಟವಾಗುತ್ತಿದೆ ಎಂದು ತಿಳಿಸಿದರು.

‘ಔಷಧೀಯ ಗುಣವುಳ್ಳ ತಾಳೆ ಬೆಲ್ಲವನ್ನು ಚಹಾ, ಗ್ರೀನ್‌ ಟೀ, ಬ್ಲಾಕ್‌ ಟೀ, ಕಾಫಿ, ಕಷಾಯ ಮಾಡಿಕೊಂಡು ಕುಡಿಯಬಹುದು. ಕೆಮ್ಮು, ನೆಗಡಿಗೆ ಉತ್ತಮ. ರಕ್ತದೊತ್ತಡ, ಸಕ್ಕರೆ ಕಾಯಿಲೆ ಇರುವವರೂ ಈ ಬೆಲ್ಲವನ್ನು ತಿನ್ನಬಹುದು. ಯಾವುದೇ ಅಡ್ಡ ಪರಿಣಾಮ ಇಲ್ಲ’ ಎಂದು ಹೇಳಿದರು.

‘ಕಬ್ಬಿನಿಂದ ಬೆಲ್ಲ ತಯಾರಿಸುವಂತೆ ತಾಳೆ ಗಿಡದಿಂದ ಸೇಂದಿ ತೆಗೆದು ಅದನ್ನು ಕಾಯಿಸಿ ಬೆಲ್ಲ ಮಾಡುತ್ತೇವೆ. ಅಕ್ಟೋಬರ್‌–ಡಿಸೆಂಬರ್‌ನಲ್ಲಿ ಈ ಬೆಲ್ಲವನ್ನು ತಯಾರಿಸುತ್ತೇವೆ. ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಕೊಂಡೊಯ್ದು ಮಾರಾಟ ಮಾಡುತ್ತೇವೆ’ ಎಂದು ತಿಳಿಸಿದರು.

‘ಮೊದಲಿನಿಂದಲೂ ತಾಳೆ ಬೆಲ್ಲವನ್ನೇ ಬಳಕೆ ಮಾಡುತ್ತಿದ್ದೇವೆ. ಆರೋಗ್ಯಕ್ಕೆ ಉತ್ತಮವಾಗಿದೆ’ ಎಂದು ಬೆಲ್ಲ ಖರೀದಿಯಲ್ಲಿ ನಿರತವಾಗಿದ್ದ ಅಶೋಕನಗರದ ನಿವಾಸಿ ಎಚ್‌.ಕೆ.ಸುಮಂಗಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಶಿವಗಿರಿ ಕಾಲೊನಿ ನಿವಾಸಿ ಜಿ.ಕೆ.ಭಟ್‌ ಮಾತನಾಡಿ, ‘ತಾಳೆ ಬೆಲ್ಲದ ಬಗ್ಗೆ ಕೇಳಿದ್ದೆ. ಆದರೆ, ಉಪಯೋಗಿಸಿರಲಿಲ್ಲ. ಪ್ರಥಮ ಬಾರಿಗೆ ತಾಳೆ ಬೆಲ್ಲ ಖರೀದಿಸುತ್ತಿದ್ದೇನೆ. ಕಷಾಯ, ಚಹಾ ತಯಾರಿಸಿ ಕುಡಿಯಲು ಇದು ಉತ್ತಮ’ ಎಂದು ಅಭಿಪ್ರಾಯಪಟ್ಟರು.

ಮಾಹಿತಿಗಾಗಿ ಸೆಲ್ವರಾಜ್‌ ಅವರ ಮೊಬೈಲ್‌ ಸಂಖ್ಯೆ 8870171650 ಸಂಪರ್ಕಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT