ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಸದರು ತೀರ್ಮಾನಿಸಿದರೆ ಪುಣೆಯಿಂದ–ಹುಬ್ಬಳ್ಳಿಗೆ ರೈಲು’

Last Updated 1 ಜುಲೈ 2019, 16:39 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಒಟ್ಟಾಗಿ ಚರ್ಚಿಸಿ ಎಲ್ಲಿಂದ ಎಲ್ಲಿಗೆ ರೈಲು ಓಡಿಸಬೇಕೆಂದು ತೀರ್ಮಾನಿಸುತ್ತಾರೊ ಅದನ್ನು ಜಾರಿಗೆ ತರಲು ನಾವು ಸಿದ್ಧರಿದ್ದೇವೆ ಎಂದು ಅಜಯ ಕುಮಾರ್‌ ಸಿಂಗ್ ಹೇಳಿದರು.

‘ಪುಣೆ–ಬೆಳಗಾವಿ ನಡುವೆ ಪುಷ್‌ಪುಲ್‌ ರೈಲು ಆರಂಭಿಸಬೇಕು ಎಂದು ಸುರೇಶ ಅಂಗಡಿ ಹೇಳಿದ್ದಾರೆ. ಅವರು ಹೇಳಿದರೆ, ಈ ರೈಲನ್ನು ಹುಬ್ಬಳ್ಳಿಯವರೆಗೂ ವಿಸ್ತರಿಸಲು ಯಾವುದೇ ಸಮಸ್ಯೆಯಿಲ್ಲ. ತಾಂತ್ರಿಕ ತೊಂದರೆಯೂ ಇಲ್ಲ. ಇದರಿಂದ ಹುಬ್ಬಳ್ಳಿಯ ಜನರಿಗೂ ಅನುಕೂಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಕಳೆದ ಐದು ವರ್ಷಗಳಲ್ಲಿ 114 ರೈಲುಗಳ ಸಂಚಾರ ಆರಂಭಿಸಿದ್ದೇವೆ. ಜೋಡಿ ರೈಲು ಮಾರ್ಗ ಕಾರ್ಯ ಪೂರ್ಣಗೊಂಡರೆ ಇನ್ನಷ್ಟು ರೈಲುಗಳನ್ನು ಆರಂಭಿಸಲು ಅನುಕೂಲವಾಗುತ್ತದೆ’ ಎಂದರು.

‘ಗಂಗಾವತಿ–ಕಾರಟಗಿ ನಡುವಿನ 28 ಕಿ.ಮೀ. ದೂರದ ರೈಲು ಮಾರ್ಗವನ್ನು ಈ ವರ್ಷದಲ್ಲಿ ಪೂರ್ಣಗೊಳಿಸುತ್ತೇವೆ. ಗದಗ–ವಾಡಿ ಮಾರ್ಗ ನಿರ್ಮಾಣಕ್ಕೆ ಭೂ ಸ್ವಾಧೀನ ಕಾರ್ಯ ಬಾಕಿಯಿದೆ’ ಎಂದು ತಿಳಿಸಿದರು.

ಬೆಳಗಾವಿ ಸಮೀಪದ ರೈಲು ಮಾರ್ಗ ನಿರ್ಮಾಣದಲ್ಲಿ ಪ್ರಾಣಿಗಳ ರಕ್ಷಣೆಗೆ ಅಂಡರ್‌ಪಾಸ್‌ ನಿರ್ಮಿಸುವುದಿಲ್ಲವೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ‘ಅಲ್ಲಿ ಜೋಡಿ ರೈಲು ಮಾರ್ಗಕ್ಕೆ ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ’ ಎಂದರು. ಹೀಗಾದರೆ ಪ್ರಾಣಿಗಳ ರಕ್ಷಣೆ ಹೇಗೆ ಎಂದು ಮರು ಪ್ರಶ್ನಿಸಿದಾಗ ‘ಮುಂಬೈನಲ್ಲಿ ಮನುಷ್ಯರೇ ಸಾಯುತ್ತಾರಲ್ಲ’ ಎಂದು ಉತ್ತರಿಸಿದರು.

ಇದಕ್ಕೆ ಸಮಜಾಯಿಷಿ ನೀಡಿದ ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ರಾಜೇಶ ಮೋಹನ್ ‘ಬೆಳಗಾವಿಯಲ್ಲಿ ಇತ್ತೀಚಿಗೆ ವನ್ಯಜೀವಿ ಪರಿಣಿತರ ಸಭೆ ನಡೆಸಲಾಗಿದೆ. ಪ್ರಾಣಿಗಳು ಹಾಗೂ ವನ್ಯಜೀವಿಗಳ ರಕ್ಷಣೆ ಬಗ್ಗೆ ಅವರೊಂದಿಗೆ ಚರ್ಚಿಸಲಾಗಿದ್ದು, ಪರ್ಯಾಯ ಹಾದಿ ತಿಳಿಸಿಕೊಟ್ಟಿದ್ದಾರೆ. ಅದರಂತೆ ನಡೆದುಕೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT