ಸೋಮವಾರ, ಜನವರಿ 17, 2022
20 °C

ಪ್ರಜಾವಾಣಿ ಸಾಧಕರು; ವೃದ್ಧರ ಆರೈಕೆಯಲ್ಲಿ ಮಗ್ನ ಮುಕ್ತುಂಸಾಬ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಬಾಲ್ಯದಲ್ಲಿ ತಂದೆ ಹೇಳದೇ ಬಿಟ್ಟುಹೋದ ಬೇಸರ, ಅವರ ವೃದ್ಧಾಪ್ಯದಲ್ಲಿ ನೋಡಿಕೊಳ್ಳುವ ಭಾಗ್ಯ ಸಿಗಲಿಲ್ಲವಲ್ಲ ಎಂಬ ಕೊರಗು ನವನಗರದ ಮೈತ್ರಿ ವೃದ್ಧಾಶ್ರಮದಲ್ಲಿ ನೂರಾರು ವೃದ್ಧರನ್ನು ನೋಡಿಕೊಳ್ಳಲು ಪ್ರೇರಣೆಯಾಯಿತು ಇವರಿಗೆ.

ಹುಬ್ಬಳ್ಳಿಯ ಕೌಲಪೇಟೆಯ ಮುಕ್ತುಂಸಾಬ್ ಗಾಮನಗಟ್ಟಿ ಅವರು ಓದಿದ್ದು 10ನೇ ತರಗತಿವರೆಗೆ. ಬಾಲ್ಯದಲ್ಲಿರುವಾಗಲೇ ತಂದೆ ಯಾರಿಗೂ ಹೇಳದೆ ಹೊರಟು ಹೋದ ನಂತರ, ದುಡಿಯುವ ಅನಿವಾರ್ಯತೆ ಇವರಿಗೆ ಎದುರಾಯಿತು. ಹೀಗಾಗಿ 1992ರಲ್ಲಿ ವಾರ್ಡ್‌ಬಾಯ್‌ ಆಗಿ ವೃದ್ಧಾಶ್ರಮ ಸೇರಿಕೊಂಡರು.

ಅಲ್ಲಿ ಕಸ ಗುಡಿಸುವುದು, ಆವರಣ ಶುಚಿಗೊಳಿಸುವ ಕಾಯಕದ ಮೂಲಕವೇ ಹಿರಿಯರ ಒಡನಾಡಿಯಾಗಿ ಬೆಳೆಯಲಾರಂಭಿಸಿದರು.

ದಾವಣಗೆರೆಯ ಬಿ.ಜಿ.ಶಂಕರ ಪಾಟೀಲ ಅವರ ತಾಯಿ ಮೀನಾಕ್ಷಮ್ಮ ಅವರು ನವನಗರದಲ್ಲಿ ಸ್ಥಾಪಿಸಿದ ಮೈತ್ರಿ ವೃದ್ಧಾಶ್ರಮ ಸೇರುವ ಹಿರಿಯರ ಆರೈಕೆಗೆ ಇವರೇ ಸರಿಯಾದ ವ್ಯಕ್ತಿ ಎಂದು 2004ರಲ್ಲಿ ಮುಕ್ತುಂ ಸಾಬ್ ಅವರಿಗೆ ಮೇಲುಸ್ತುವಾರಿ ವಹಿಸಲಾಯಿತು. ಅಂದಿನಿಂದ ಇಂದಿನವರೆಗೂ 295 ವೃದ್ಧರ ಆರೈಕೆ ಇವರು ಮಾಡಿದ್ದಾರೆ. ಅವರ ಊಟ, ಆಟ, ಓದು, ಹರಟೆ, ಬೇಕು ಬೇಡಗಳು, ಚಿಕಿತ್ಸೆ, ಔಷಧ, ಆಸ್ಪತ್ರೆ ಹೀಗೆ ಪ್ರತಿಯೊಂದರಲ್ಲೂ ಅವರಿಗೆ ಮಗನಂತೆ ಆರೈಕೆ ಮಾಡಿದ್ದಾರೆ. 

ಹೆತ್ತವರು ಕಣ್ಣುಮುಚ್ಚಿದಾಗಲೂ ಮಕ್ಕಳು ಬಾರದ ಸಂದರ್ಭದಲ್ಲಿ ಅವರ ಕುಟುಂಬದವರಾಗಿ ನಿಂತು ಅಂತ್ಯ ಸಂಸ್ಕಾರ ನಡೆಸಿದವರು ಮುಕ್ತುಂ ಸಾಬ್‌. ಇವರು ಈವರೆಗೂ 25 ಜನರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಅವರವರ ಧರ್ಮದ ಆಚರಣೆಗೆ ತಕ್ಕಂತೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ಮೈತ್ರಿ ವೃದ್ಧಾಶ್ರಮದಲ್ಲಿ ಮುಕ್ತುಂ ಸಾಬ್‌ ಗಾಮನಗಟ್ಟಿ ಅವರು ಮಗ, ಸ್ನೇಹಿತ ಎಲ್ಲವೂ ಹೌದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು