ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡಿ‘

ರಾಯಣ್ಣ ವೈಭವ ಸಮಾವೇಶ: ಸರ್ಕಾರದಿಂದಲೇ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಮನವಿ
Last Updated 1 ಜುಲೈ 2018, 13:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಲ್ಲಿರುವ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಹೆಸರಿಡಬೇಕು ಎನ್ನುವ ಆಗ್ರಹ ಭಾನುವಾರ ನಡೆದ ‘ರಾಯಣ್ಣ ವೈಭವ’ ಸಮಾವೇಶದಲ್ಲಿ ಕೇಳಿಬಂತು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಫೌಂಡೇಷನ್‌ ಧಾರವಾಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ಆಶ್ರಯದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆಗ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣನವರ ‘ಶಕ್ತಿ, ಧೈರ್ಯ ಮತ್ತು ಸಾಹಸಕ್ಕೆ ಹೆಸರಾಗಿರುವ ರಾಯಣ್ಣ ಅವರ ಹೆಸರನ್ನು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಇಡಬೇಕು. ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ ಹೆಸರು ನಾಮಕರಣ ಮಾಡಬೇಕು’ ಎಂದು ಆಗ್ರಹಿಸಿದರು.

‘ದೇಶದ ರಕ್ಷಣೆ ಮತ್ತು ಕೀರ್ತಿಗಾಗಿ ಸಂಗೊಳ್ಳಿ ರಾಯಣ್ಣ ಮತ್ತು ರಾಣಿ ಚನ್ನಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ಮಾಡಿದ್ದಾರೆ. ಅವರ ಹೆಸರು ಅಜರಾಮರವಾಗಿ ಉಳಿಯಲು ವಿಮಾನ ನಿಲ್ದಾಣಗಳಿಗೆ ಹೆಸರಿಡುವುದು ಅಗತ್ಯವಿದೆ. ಈ ಸಾಹಸಿಗರಂತೆ ಎಲ್ಲರೂ ದೇಶ ರಕ್ಷಣೆಗೆ ಪಣ ತೊಡಬೇಕು’ ಎಂದರು.

ಸಂಘಟನೆ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಪಾಟೀಲ ಪುಟ್ಟ‍ಪ್ಪ ‘ಸಂಗೊಳ್ಳಿ ರಾಯಣ್ಣ ಮತ್ತು ಚನ್ನಮ್ಮ ಅವರ ಅಪ್ರತಿಮ ಹೋರಾಟ ಭಾರತಕ್ಕೆ ಸ್ವಾತಂತ್ರ ಲಭಿಸಲು ಕಾರಣವಾಯಿತು. ಚನ್ನಮ್ಮ ಅವರನ್ನು ಬ್ರಿಟಿಷರು ಬೈಲಹೊಂಗಲದಲ್ಲಿ ಸೆರೆಮನೆಯಲ್ಲಿಟ್ಟಾಗ ರಾಯಣ್ಣ ಅವರೊಬ್ಬರೇ ಕಿತ್ತೂರು ಸಂಸ್ಥಾನದ ಉಳಿವಿಗಾಗಿ ಹೋರಾಡಿದರು’ ಎಂದರು.

‘ಕುರುಬರು ಎಲ್ಲಿಯೇ ಇದ್ದರೂ, ಅವರನ್ನು ಬೆಂಬಲಿಸಬೇಕು. ಸಿದ್ದರಾಮಯ್ಯ ಅವರಂಥ ಉತ್ತಮ ಸಂಘಟಕರಿಗೂ ಬೆಂಬಲ ಕೊಡಬೇಕು. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆ ಮುಂದುವರಿದಿರುವುದು ಒಳ್ಳೆಯ ಬೆಳವಣಿಗೆ. ಈ ಕಾರ್ಯಕ್ರಮಕ್ಕೆ ಮಹಿಳೆಯೇ ಅಧ್ಯಕ್ಷತೆ ವಹಿಸಿರುವುದು ಹೆಮ್ಮೆಯ ವಿಷಯ‘ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಸಾವಿತ್ರ ಭಗವತಿ ಅಧ್ಯಕ್ಷತೆ ವಹಿಸಿದ್ದರು.

ಸಂಗೊಳ್ಳಿ ರಾಯಣ್ಣ ಫೌಂಡೇಷನ್‌ ರಾಜ್ಯ ಘಟಕದ ಅಧ್ಯಕ್ಷ ಸಿದ್ದಣ್ಣ ತೇಜಿ ಮಾತನಾಡಿ ‘ನಮ್ಮ ಸಮಾಜದ ವಿದ್ಯಾರ್ಥಿಗಳ ಸಾಧನೆಯನ್ನು ಸರ್ಕಾರ ಗುರುತಿಸಬೇಕು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದವರಿಗೆ ಸರ್ಕಾರವೇ ಪ್ರೋತ್ಸಾಹ ಧನ ಕೊಡಬೇಕು. ಹಾಸ್ಟೆಲ್‌ ಸೌಲಭ್ಯ ಒದಗಿಸಿಕೊಡಬೇಕು’ ಎಂದರು.

ಕಾರ್ಯಕ್ರಮಕ್ಕೂ ಮೊದಲು ರಾಣಿ ಚನ್ನಮ್ಮ ವೃತ್ತದಿಂದ ಮೆರವಣಿಗೆ ನಡೆಯಿತು. ಡೊಳ್ಳು ಕುಣಿತ, ಲಾವಣಿ ಹಾಡು ಹಾಗೂ ಇನ್ನಿತರ ಜಾನಪದ ಕಾರ್ಯಕ್ರಮಗಳು ಗಮನ ಸೆಳೆದವು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಟಿ.ಎಚ್‌. ಅವೀನ, ರವಿರಾಜ ಕಂಬಳೆ, ಮುದುಕಣ್ಣ, ಪ್ರೊ. ಹನುಗುಂದ, ಮಹಾಂತೇಶ ಪಾಲ್ಗೊಂಡಿದ್ದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ 90ಕ್ಕಿಂತಲೂ ಹೆಚ್ಚು ಅಂಕಗಳನ್ನು ಪಡೆದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇದೇ ವೇಳೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT