ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಯುವಜನೋತ್ಸವ| ಸಮರ ಕಲೆಯ ಖಣಖಣ ನಾದ: ಮೈನವಿರೇಳಿಸಿದ ಪ್ರದರ್ಶನ

26ನೇ ರಾಷ್ಟ್ರೀಯ ಯುವಜನೋತ್ಸವ: ಮೈನವಿರೇಳಿಸಿದ ಪ್ರದರ್ಶನ
Last Updated 14 ಜನವರಿ 2023, 3:08 IST
ಅಕ್ಷರ ಗಾತ್ರ

ಧಾರವಾಡ: ಅಲ್ಲಿ ಕತ್ತಿ, ಗುರಾಣಿಗಳಿದ್ದವು. ಲಾಠಿ, ಭರ್ಚಿಗಳೂ ಇದ್ದವು. ಸುರಳುಗತ್ತಿಗಳೂ ಹಿಡಿದ ಯುವಕ– ಯುವತಿ ಅಲ್ಲಿ ಸುಳಿದಾಡುತ್ತಿದ್ದರು... ಸಮರ ವೀರರಂತೆ ಗಾಳಿಯಲ್ಲಿ ಹಾರಾಡುತ್ತ, ತೇಲಾಡುತ್ತ, ಮಿಂಚಿಗಿಂತಲೂ ವೇಗವಾಗಿ ಅವರ ಕೈಗಳು ಚಲಿಸುತ್ತಿದ್ದವು. ನೆರೆದವರು ಆಗಾಗ ಉಸಿರು ಬಿಗಿ ಹಿಡಿದು ನೋಡಿದರೆ, ಮರುಕ್ಷಣವೇ ನಿಟ್ಟುಸಿರು ಬಿಟ್ಟು ಹಗುರಾಗುತ್ತಿದ್ದರು.

ಸ್ವರಕ್ಷಣೆಯ ಸಮರ ಕಲೆಗಳ ಪ್ರದರ್ಶನದಲ್ಲಿ ವೀರರ ಜೋಷ್, ನೋಡುಗರ ಸಂಯಮ ಎರಡೂ ಒರೆಗೆ ಇಟ್ಟಂತೆ ಆಗಿತ್ತು. ಸುಡುಸುಡುವ ಬಿಸಿಲಿನಲ್ಲಿ, ಸುಳಿದಾಡುವ ಗಾಳಿಯಲ್ಲಿ, ಆಗಾಗ ಗುರಾಣಿ ಮೇಲಿನ ಠೇಂಕಾರ, ಖಡ್ಗಗಳ ಝೇಂಕಾರ, ನೆರೆದವರ ಕರತಾಡನಗಳೆಲ್ಲವೂ ಜುಗಲ್‌ಬಂದಿಗೆ ಇಳಿದಿದ್ದವು.

ಧಾರವಾಡದ ಆರ್‌.ಎನ್‌.ಶೆಟ್ಟಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಯುವಜನೋತ್ಸವದ ಸಮರ ಕಲೆಗಳ ಪ್ರದರ್ಶನದಲ್ಲಿ ಶುಕ್ರವಾರ ಮಧ್ಯಾಹ್ನ ಕಂಡ ನೋಟವಿದು. ಬಿಸಿಲಿನ ತಾಪ ತಗ್ಗಿರಲಿಲ್ಲ. ಯುವಕರ ಉತ್ಸಾಹವೂ ಅಷ್ಟೇ... ಸಂಜೆ 4 ಗಂಟೆಗೆ ಶುರುವಾದ ಪ್ರದರ್ಶನ ಸಂಜೆ 6.45ರ ತನಕ ಸಾಗಿತ್ತು.

ಗಮನ ಸೆಳೆದ ಗತ್ಕಾ: ತಡವಾಗಿ ಆರಂಭವಾದರೂ ಸಮರಕಲೆಗಳ ಪ್ರದರ್ಶನ ನೆರೆದವರನ್ನು ರೋಮಾಂಚನಗೊಳಿಸಿತು. ಪಂಜಾಬಿನ ಗತ್ಕಾ ಸಮರ ಕಲೆಯ ಪ್ರದರ್ಶನ ಮನಸೂರೆಗೊಂಡಿತು.

ಪಂಜಾಬಿನ ಉತ್ಸಾಹ ಚಿಮ್ಮಿಸುವ ಹಿನ್ನೆಲೆ ಸಂಗೀತದಲ್ಲಿ ಹಳದಿ–ಬಿಳಿ ಉಡುಗೆ, ನೀಲಿ ಪಗಡಿ ಧರಿಸಿದ್ದ ಕಲಾವಿದರು ವೇದಿಕೆಯಲ್ಲಿ ರಣೋತ್ಸಾಹವನ್ನು ಬಿಂಬಿಸಿತು.

ಬಡಿಗೆ, ಕಟಾರಿ, ಚಕ್ರಬಾಣ, ಏಕಮುಖ ಅಲಗಿನ ಖಡ್ಗ, ದ್ವಿಮುಖ ಅಲಗಿನ ಖಡ್ಗ–ಗುರಾಣಿ
ಗಳೊಂದಿಗೆ ಪ್ರದರ್ಶನ ನೀಡಿದ ತರಬೇತುದಾರ ಯೋಗರಾಜ್ ಸಿಂಗ್ ಅವರ ನೇತೃತ್ವದ 15 ಜನರ ತಂಡವು ನೆರೆದಿದ್ದವರನ್ನು ಬಿಸಿಲಿನಲ್ಲೂ ಹಿಡಿದಿಟ್ಟಿತು.

‘ಸಿಖ್ಖರ 6ನೇ ಗುರು ಹರಗೋವಿಂದ್‌ ಸಿಂಗ್‌ ಅವರು ಶಸ್ತ್ರವಿದ್ಯೆಯನ್ನು ಸಮುದಾಯಕ್ಕೆ ಪರಿಚಯಿಸಿದರು. ನಾವು ಇಲ್ಲಿ ಮೂರು ದಿನಗಳ ಕಾಲ ಪಂಜಾಬಿನ ಸಾಂಪ್ರದಾಯಿಕ ಸಮರ ಕಲೆಯನ್ನು ಪರಿಚಯಿಸಲಿದ್ದೇವೆ’ ಎಂದು ಪಂಜಾಬ್‌ ಗತ್ಕಾ ಸಮರಕಲೆ ತಂಡದ ಸದಸ್ಯ ಜಸ್‌ಕರಣ್ ಸಿಂಗ್‌ ಖಾಲ್ಸಾ ‘ಪ್ರಜಾವಾಣಿ’ಗೆ ತಿಳಿಸಿದರು.

ನಂತರ, ಮಣಿಪುರದ 19 ಜನರ ತಂಡವು ಮುಖನಾ ಹಾಗೂ ತಂಗ್ಟಾ ಕಲೆಯನ್ನು ಪ್ರದರ್ಶಿಸಿತು. ಅವರು ಭರ್ಚಿ, ಬಡಗಿ, ಖಡ್ಗದಂಥ ಆಯುಧಗಳನ್ನು ಬಳಸುತ್ತಿದ್ದ ರೀತಿ ಮೈನವಿರೇಳಿಸುವಂತಿತ್ತು. ಈ ತಂಡ ಮುಖನಾದಲ್ಲಿ ಕೇವಲ ಬರೀ ಕೈಗಳನ್ನೇ ಆಯುಧಗಳಂತೆ ಬಳಸಿ ಎದುರಾಳಿಗಳನ್ನು ಎದುರಿಸಿ ಚಾಕಚಾಕ್ಯತೆ ಮೆರೆಯಿತು. ನಂತರ ಆಯುಧಗಳನ್ನು ಬಳಸಿ ತಂಗ್ಟಾ ಕಲೆಯನ್ನು ಪ್ರದರ್ಶಿಸಿತು.

ತಮಿಳುನಾಡಿನ 7 ಜನರ ತಂಡವು ಸಿಲಂಬಂ ಕಲೆ ಪ್ರದರ್ಶಿಸಿತು. ನಂತರ ಅಸ್ಸಾಂನ ಕಲಾವಿದರು ‘ಖೊಮ್ಲೈನೈ’ ಎಂಬ ವಿಶಿಷ್ಟ ಸಮರ ಕಲೆ ಪ್ರಸ್ತುತ ಪಡಿಸಿದರು. ಬೋಡೊ ಜನಾಂಗದವರು ಆಡುವ ವಿಶಿಷ್ಟ ಬಗೆಯ ಕುಸ್ತಿ ಇದಾಗಿದ್ದು, ನಿಗದಿತ ವೃತ್ತದಿಂದ ಎದುರಾಳಿಗಳನ್ನು ಹೊರ ನೂಕಿ ವಿಜಯ ಸಾಧಿಸುವುದು ಈ ಸಮರ ಕಲೆಯ ವೈಶಿಷ್ಟ್ಯ.

ಕೇರಳ ಕಲಾವಿದರು ಮೈನವಿರೇಳಿಸುವಂತೆ ಕಳರಿಯಪಟ್ಟು ಪ್ರದರ್ಶನ ನೀಡಿದರು. ಮಹಾರಾಷ್ಟ್ರದ ಕಲಾವಿದರು ಚಲಿಸುವ ಸೈಕಲ್‌ ಮೇಲೆ ಮಲ್ಲಕಂಬ ಪ್ರದರ್ಶನ ನೀಡಿದ್ದು ಚಪ್ಪಾಳೆಗಿಟ್ಟಿಸಿತು. ಧಾರವಾಡದ ಸ್ಥಳೀಯ ಮಲ್ಲಕಂಬ ತಂಡವು ಹಗ್ಗ ‌ಹಾಗೂ ಸ್ಥಿರಮಲ್ಲಕಂಬ ಬಳಸಿ ಪ್ರದರ್ಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT