ಗುರುವಾರ , ಅಕ್ಟೋಬರ್ 22, 2020
21 °C
ಧಾರವಾಡ ಜಿಲ್ಲೆಯ ಮೂರನೇ ಮಳಿಗೆ

ನೀರಾ ಮಾರಾಟ ಮಳಿಗೆ ಅ.18ಕ್ಕೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದ ಶಿರೂರ ಪಾರ್ಕ್‌ ಪ್ರದೇಶದಲ್ಲಿ ಭಾನುವಾರ ನೀರಾ ಮಾರಾಟ ಮಳಿಗೆಯ ಉದ್ಘಾಟನೆ ನಡೆಯಲಿದೆ ಎಂದು ಮಲೆನಾಡು ನಟ್ಸ್‌ ಆ್ಯಂಡ್‌ ಸ್ಪೈಸ್‌ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಮನೋಹರ ಮಸ್ಕಿ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳಿಗ್ಗೆ 10.30ಕ್ಕೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ‘ವಸಂತ ನೀರಾ ಸೆಂಟರ್‌’ ಉದ್ಘಾಟಿಸುವರು. ಧಾರವಾಡ ಜಿಲ್ಲೆಯಲ್ಲಿ ಇದು ಮೂರನೇ ಮಳಿಗೆಯಾಗಿದೆ. ರಾಜ್ಯದ 14ನೇಯದ್ದಾಗಿದೆ’ ಎಂದರು

‘240 ಎಂ.ಎಲ್‌ನಷ್ಟು ನೀರಾಗೆ ₹50 ದರವಿದೆ. 500 ಎಂ.ಎಲ್‌ನ ಬಾಟಲ್‌ಗೆ ₹120 ದರವಿದೆ’ ಎಂದರು.

ಆರೋಗ್ಯಕರ ಪೇಯ: ‘ಔಷಧೀಯ ಗುಣಗಳನ್ನು ಹೊಂದಿರುವ ನೀರಾ ಆರೋಗ್ಯಕರ ಪೇಯವಾಗಿದೆ. ಆದರೆ, ಅದನ್ನು 4 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ತಾಪಮಾಣದಲ್ಲಿ ಶೇಖರಿಸಿಡಬೇಕು. ಇಲ್ಲದಿದ್ದರೆ, ಅದು ಹೆಂಡವಾಗಿ ಬದಲಾಗುತ್ತದೆ’ ಎಂದು ವಿವರಿಸಿದರು.

‘ತೆಂಗಿನ ಮರದ ಹೊಂಬಾಳೆಗೆ ಇನ್ಸುಲೇಟೆಡ್‌ ಐಸ್‌ಬಾಕ್ಸ್ ಅಳವಡಿಸಿ, ಕಡಿಮೆ ತಾಪಮಾನದಲ್ಲಿ ನೀರಾ ಸಂಗ್ರಹಿಸುತ್ತೇವೆ. ಅದನ್ನು ಶುದ್ಧೀಕರಿಸಿ ಗ್ರಾಹಕರಿಗೆ ಸರಬರಾಜು ಮಾಡಲಾಗುವುದು’ ಎಂದರು.

ನೀರಾ ಐಸ್‌ಕ್ರೀಂಗೂ ಸಿದ್ಧತೆ: ‘ಸದ್ಯ ನೀರಾ ಬೆಲ್ಲದ ಪುಡಿ ಲಭ್ಯವಿದ್ದು, ಪ್ರತಿ ಕೆ.ಜಿಗೆ ₹1 ಸಾವಿರ ದರವಿದೆ. ದೀಪಾವಳಿ ವೇಳೆಗೆ ಇದರ ದರವನ್ನು ₹800 ಇಳಿಸಲಾಗುವುದು’ ಎಂದರು.

‘ನೀರಾ ಐಸ್‌ಕ್ರೀಂ ತಯಾರಿಗೂ ಮಾತುಕತೆ ನಡೆಯುತ್ತಿದ್ದು, ಮುಂದಿನ ಬೇಸಿಗೆ ಹೊತ್ತಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ’ ಎಂದರು.

ಧಾರವಾಡ ಸುಪ್ರೀಂ ನೀರಾ ಪಾರ್ಲರ್‌ನ ಮಹಾದೇವ ಅರಸಿದ್ಧ, ಹುಬ್ಬಳ್ಳಿಯ ವಸಂತ ನೀರಾ ಸೆಂಟರ್‌ನ ನಿಂಗರಾಜ ಬಿಳಿಎಲೆ ಹಾಗೂ ಪ್ರಕಾಶ ಅರಳಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು