ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಹಾ ಕೊಲೆ ಪ್ರಕರಣ | ಕಣ್ಣೊರೆಸುವ ತಂತ್ರ ಬೇಡ, ಸಿಬಿಐಗೆ ಒಪ್ಪಿಸಿ: ಈಶ್ವರಪ್ಪ

Published 22 ಏಪ್ರಿಲ್ 2024, 13:18 IST
Last Updated 22 ಏಪ್ರಿಲ್ 2024, 13:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಇಡೀ ದೇಶ ವಿದ್ಯಾರ್ಥಿನಿ ನೇಹಾ ಕೊಲೆಯನ್ನು ಖಂಡಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸುಮ್ಮನಿದ್ದರೆ ರಾಜ್ಯ ಸರ್ಕಾರ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಣ್ಣೊರೆಸುವ ತಂತ್ರವಾಗಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದ್ದಾರೆ’ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್‌. ಈಶ್ವರಪ್ಪ ಆರೋಪಿಸಿದ್ದಾರೆ.

ನಗರದ ಬಿಡ್ನಾಳದಲ್ಲಿರುವ ಮೃತ ನೇಹಾ ಹಿರೇಮಠ ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

‘ಸಿಐಡಿ ತನಿಖೆಯಿಂದ ಈ ಪ್ರಕರಣಕ್ಕೆ ಯಾವುದೇ ಪರಿಹಾರ ಸಿಗುವುದಿಲ್ಲ. ಸಿಬಿಐಗೆ ಒಪ್ಪಿಸಿದರೆ ಮಾತ್ರ ಹೆಣ್ಣು ಮಗಳ ಕೊಲೆಗೆ ನ್ಯಾಯ ಸಿಗಲಿದೆ. ಆಗ ಮುಖ್ಯಮಂತ್ರಿಯವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಯುತ್ತೇವೆ. ಕಣ್ಣೊರೆಸುವ ತಂತ್ರ ಬಿಟ್ಟು, ಕೊಲೆಗಡುಕನಿಗೆ ಕಠಿಣ ಶಿಕ್ಷೆಯಾಗಲು ಈ ಪ್ರಕರಣ ಸಿಬಿಐಗೆ ಒಪ್ಪಿಸಲೇಬೇಕು’ ಎಂದು ಆಗ್ರಹಿಸಿದರು.

‘ಹೆಣ್ಣು ಮಗಳನ್ನು ತಾಯಿ ಎಂದು ಕರೆಯುವ ದೇಶ ನಮ್ಮದು. ಅಂತಹ ಹೆಣ್ಣನ್ನು ಕೊಲೆ ಮಾಡುವ ರಾಕ್ಷಸ ಮನಸ್ಥಿತಿಯ ವ್ಯಕ್ತಿಯನ್ನು ಒಂದು ನಿಮಿಷವೂ ಯೋಚನೆ ಮಾಡದೆ ಎನ್‌ಕೌಂಟರ್‌ ಮಾಡಿ ಬಿಸಾಡಬಹುದಿತ್ತು. ಆದರೆ, ರಾಜ್ಯದಲ್ಲಿ ಮುಸ್ಲಿಮರ ರಕ್ಷಣೆ ನಡೆಯುತ್ತಿದೆ. ಹಿಂದೂಗಳ ಕೊಲೆಯೆಂದರೆ ಕಾಂಗ್ರೆಸ್‌ಗೆ ಮಾಮೂಲಿಯಾಗಿ ಬಿಟ್ಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ ಈಶ್ವರಪ್ಪ, ‘ಯಾವುದೇ ಕಾರಣಕ್ಕೂ ಈ ಪ್ರಕರಣವನ್ನು ಯಾರೂ ರಾಜಕೀಯಕ್ಕೆ ಬಳಸಿಕೊಳ್ಳಬಾರದು’ ಎಂದೂ ವಿನಂತಿಸಿದರು.

‘ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಎನ್ನುವ ಸುದ್ದಿ ಕೇಳುತ್ತಿದ್ದೆವು. ಅದರ ಮುಂದುವರಿದ ಭಾಗವಾಗಿ ಕರ್ನಾಟಕದಲ್ಲಿ ನಡೆಯುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ, ಗೃಹ ಸಚಿವರ ಹೇಳಿಕೆ ಖಂಡನೀಯ. ನಿಮ್ಮ ಮನೆಯ ಮಗಳ ಮೇಲೆ ಮುಸ್ಲಿಂ ಯುವಕನಿಂದ ಇಂಥಹ ಕೃತ್ಯ ನಡೆದಿದ್ದರೆ ಇದೇ ಹೇಳಿಕೆ ನೀಡುತ್ತಿದ್ದರೇ’ ಎಂದು ಪ್ರಶ್ನಿಸಿದರು.

‘ಎನ್‌ಕೌಂಟರ್‌ ಕಾನೂನು ಜಾರಿಗೆ ಬರಲೇ ಬೇಕು’ ಎಂದಿರುವ ಸಚಿವ ಸಂತೋಷ ಲಾಡ್‌ ಹೇಳಿಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ‘ಸಚಿವರು ಘೋಷಣೆ ಮಾಡಿದರೆ ಸಾಲದು. ಆ ಕಾನೂನು ಜಾರಿಯಾಗಿಲ್ಲ ಎಂದರೆ ರಾಜೀನಾಮೆ ನೀಡುತ್ತೇನೆ ಎಂದು ದಿಟ್ಟ ಹೇಳಿಕೆ ನೀಡಬೇಕು. ಮುಖ್ಯಮಂತ್ರಿ ಮೇಲೆ ಮೇಲೆ ಒತ್ತಡ ತರಬೇಕು. ಅದಕ್ಕೆ ನಾನು ಸಹ ಬೆಂಬಲ ವ್ಯಕ್ತಪಡಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT