ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಹೊಸ ಬಸ್‌ ನಿಲ್ದಾಣಕ್ಕೆ ಹೈಟೆಕ್‌ ಸ್ಪರ್ಶ

Published 20 ಡಿಸೆಂಬರ್ 2023, 5:18 IST
Last Updated 20 ಡಿಸೆಂಬರ್ 2023, 5:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಕೇಂದ್ರೀಯ ಹೊಸ ಬಸ್‌ನಿಲ್ದಾಣಕ್ಕೆ ಶೀಘ್ರ ಹೈಟೆಕ್‌ ಸ್ಪರ್ಶ ಸಿಗಲಿದ್ದು, ₹23.48 ಕೋಟಿ ವೆಚ್ಚದಲ್ಲಿ ನವೀಕರಣಕ್ಕೆ ಯೋಜನೆ ರೂಪಿಸಲಾಗಿದೆ.

ಬಸ್‌ ನಿಲ್ದಾಣದ ಕಟ್ಟಡದ ಚಾವಣಿ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಸೋರುತ್ತದೆ. ಪ್ರಯಾಣಿಕರು ಕೊಡೆ ಹಿಡಿದು ಪ್ಲಾಟ್‌ಫಾರ್ಮ್‌ಗಳಲ್ಲಿ ಬಸ್‌ಗಾಗಿ ಕಾಯುತ್ತಾರೆ. ಆವರಣದಲ್ಲಿ ಎಲ್ಲಡೆ ಮೂತ್ರ ವಿಸರ್ಜನೆ ಮಾಡುವ ಕಾರಣ ಸ್ವಚ್ಛತೆ ಮರೀಚೀಕೆ ಆಗಿದೆ. ದುರ್ವಾಸನೆಯೂ ಅಸಹನೀಯ. ಈ ಎಲ್ಲಾ ಅವ್ಯವಸ್ಥೆ, ಸಮಸ್ಯೆಗಳನ್ನು ಕೊನೆಗಾಣಿಸಲು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಉದ್ದೇಶಿಸಿದೆ.

‘ಹೊಸ್ ಬಸ್‌ ನಿಲ್ದಾಣದ ಆವರಣ 13 ಎಕರೆ ಇದ್ದು, ಶೇ 50ರಷ್ಟು ಮಾತ್ರ ಬಳಕೆಯಾಗುತ್ತಿದೆ. ಇಡೀ ಆವರಣವನ್ನು ಪೂರ್ಣಪ್ರಮಾಣದಲ್ಲಿ ಬಳಸುವುದರ ಜೊತೆಗೆ ಭವಿಷ್ಯದ ಬೇಡಿಕೆಗಳನ್ನು ಹಂತಹಂತವಾಗಿ ಅನುಷ್ಠಾನಗೊಳಿಸಲು ಯೋಜನೆ ರೂಪಿಸಲಾಗಿದೆ’ ಎನ್ನುತ್ತಾರೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಮುಖ್ಯ ಸಿವಿಲ್ ಎಂಜಿನಿಯರ್ ದಿವಾಕರ ಯರಗೊಪ್ಪ.

‘ಬಸ್‌ ನಿಲ್ದಾಣದ ನವೀಕರಣಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದ್ದು, ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಇದು ಮುಗಿದ ನಂತರ ಒಂದು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ’ ಎಂದರು.

ನಾಲ್ಕು ಹಂತಗಳಲ್ಲಿ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಕಾಮಗಾರಿ ಮುಗಿದ ಬಳಿಕ ಬಸ್‌ ವೇಳಾಪಟ್ಟಿ ಮಾಹಿತಿಗೆ ಎಲ್ಇಡಿ ಫಲಕ ಅಳವಡಿಸಲಗುವುದು.
ದಿವಾಕರ ಯರಗೊಪ್ಪ, ಮುಖ್ಯ ಸಿವಿಲ್ ಎಂಜಿನಿಯರ್, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ

‘ಬಸ್ ನಿಲ್ದಾಣದ ಕಟ್ಟಡ ನಿರ್ಮಿಸಿ 23 ವರ್ಷಗಳಾಗಿದ್ದು, ಪ್ರವೇಶ ದ್ವಾರ ಆಕರ್ಷಕವಾಗಿಲ್ಲ. ಅದನ್ನು ಮೇಲ್ದರ್ಜೆಗೇರಿಸಿ ಮರು ನಿರ್ಮಿಸಲಾಗುವುದು. 10 ಸಾವಿರ ಚದರ ಮೀಟರ್‌ ಪಾರ್ಕಿಂಗ್ ಪ್ರದೇಶವನ್ನು ಕಾಂಕ್ರೀಟ್‌ ಮಾಡಲಾಗುವುದು. ದ್ವಿಚಕ್ರ ವಾಹನ ಮತ್ತು ಕಾರುಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಅವರು ವಿವರಿಸಿದರು.

‘ಪ್ರತಿ ದಿನ ಈ ನಿಲ್ದಾಣದ ಮೂಲಕ 1,550 ಬಸ್‌ಗಳು ಸಂಚರಿಸುತ್ತವೆ. ಅದಕ್ಕೆ ಅನುಗುಣವಾಗಿ ಹೊಸ ಯೋಜನೆಯಲ್ಲಿ 53 ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗುವುದು. ಸುಸಜ್ಜಿತ ಶೌಚಾಲಯ ವ್ಯವಸ್ಥೆ ಇರಲಿದೆ. ಬಸ್‌ಗಳ ಆಗಮನ ಮತ್ತು ನಿರ್ಗಮನಕ್ಕೂ ಸಮರ್ಪಕ ವ್ಯವಸ್ಥೆ ಮಾಡಲಾಗುವುದು’ ಎಂದರು.

ಪ್ರತ್ಯೇಕ ಪ್ಲಾಟ್‌ಫಾರ್ಮ್‌

‘ನಿಲ್ದಾಣದಲ್ಲಿ ನಗರ ಸಾರಿಗೆ ಬಸ್‌ಗಳಿಗೆ ಪತ್ಯೇಕ ಪ್ಲಾಟ್‌ಫಾರ್ಮ್‌ ಇರಲಿದೆ. ನಗರ ಸಾರಿಗೆ ಬಸ್‌ಗಳಿಗೆ ಸಮರ್ಪಕ ನಿಲ್ದಾಣ ಇಲ್ಲ. ಇದು ಸಾರಿಗೆ ನಿಯಮಕ್ಕೆ ವಿರುದ್ಧವಾಗಿದ್ದು, ಡಲ್ಟ್‌ ನಿಯಮಾವಳಿಯಂತೆ ನಗರ ಸಾರಿಗೆ ಬಸ್‌ಗಳಿಗೆ ಪ್ಲಾಟ್‌ಫಾರ್ಮ್‌ ನಿರ್ಮಿಸಲಾಗುವುದು’ ಎಂದರು.

ಬಿಆರ್‌ಟಿಎಸ್ ನಿಲ್ದಾಣಕ್ಕೂ ಜಾಗ

‘ಮುಂದಿನ ದಿನಗಳಲ್ಲಿ ಬಿಆರ್‌ಟಿಎಸ್‌ನ ಚಿಗರಿ ಬಸ್‌ ಸೇವೆ ಹೊಸ ಬಸ್‌ ನಿಲ್ದಾಣದವರೆಗೆ ವಿಸ್ತರಣೆಯಾಗುವ ಸಾಧ್ಯತೆ ಇರುವ ಕಾರಣ ಬಿಆರ್‌ಟಿಎಸ್ ಬಸ್‌ ನಿಲ್ದಾಣ ನಿರ್ಮಾಣಕ್ಕೂ ಜಾಗ ಮೀಸಲಿಡಲಾಗುವುದು’ ಎಂದರು.

ಯಾವ ಸೌಲಭ್ಯಗಳು?

  • ಟಿಕೆಟ್ ಕೌಂಟರ್‌ ಮೇಲ್ದರ್ಜೆಗೆ

  • ಸೌರ ವಿದ್ಯುತ್ ಉತ್ಪಾದನೆ

  • ಆಟೊ ಟ್ಯಾಕ್ಸಿಗೆ ಪ್ರತ್ಯೇಕ ಪಥ

  • ಮಹಿಳೆಯರು ಹಾಲುಣಿಸಲು ಕೊಠಡಿ

  • ಮಳೆ ನೀರು ಸಂಗ್ರಹ ವ್ಯವಸ್ಥೆ

  • ಕೊಳಚೆ ನೀರು ಶುದ್ಧೀಕರಣ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT