ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಕುಡಿವ ನೀರು: ಬೇಕು ಶುದ್ಧತೆ ‘ಖಾತ್ರಿ’

ಪಾಲಿಕೆಯಿಂದ ಪೂರೈಕೆಯಾಗುವ ನೀರು ಬಳಸದ ಬಹುತೇಕರು; ನೀರಿನ ಕ್ಯಾನ್‌ ಮೊರೆ
Published 25 ಮಾರ್ಚ್ 2024, 5:48 IST
Last Updated 25 ಮಾರ್ಚ್ 2024, 5:48 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವರುಣನ ಅವಕೃಪೆ, ಅತಿಯಾದ ಬಿಸಿಲಿನಿಂದ ಜಲಮೂಲಗಳು ಬತ್ತಿವೆ. ಭೀಕರ ಬರದಿಂದ ಜನ-ಜಾನುವಾರು, ಪಶು-ಪಕ್ಷಿಗಳು ಕಂಗೆಟ್ಟಿವೆ. ಎಲ್ಲೆಡೆ ನೀರಿಗಾಗಿ ಪರದಾಡುತ್ತಿರುವ ಪರಿಸ್ಥಿತಿಯಲ್ಲಿ ಶುದ್ಧ ನೀರಿನ ಚರ್ಚೆ ಕೇಳಿಬರುತ್ತಿದೆ.

ಜಲ ಸಂಕಷ್ಟದ ಪರಿಸ್ಥಿತಿಯಲ್ಲಿ ನೀರು ಸಿಕ್ಕರೆ ಸಾಕು ಎಂಬ ಮನಸ್ಥಿತಿ ಜನರದ್ದು. ನೀರಿನ ತೀವ್ರ ಕೊರತೆ ಇರುವಾಗ, ಪೂರೈಕೆಯಾಗುವ ನೀರು ಶುದ್ಧವೋ, ಅಶುದ್ಧವೋ ಎಂದು ಬಹುತೇಕರು ಚಿಂತಿಸುವುದಿಲ್ಲ. ಆದರೆ, ಎಂತಹ ಪರಿಸ್ಥಿತಿಯಲ್ಲೂ ಜನರ ನೈಸರ್ಗಿಕ ಹಕ್ಕಾದ ಶುದ್ಧ ಕುಡಿಯುವ ನೀರು ಒದಗಿಸುವುದು ಆಡಳಿತ ವ್ಯವಸ್ಥೆಯ ಆದ್ಯ ಕರ್ತವ್ಯ. ಈ ವಿಷಯದಲ್ಲಿ ರಾಜೀ ಇರುವುದಿಲ್ಲ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಸರಬರಾಜು ಆಗುವ ನೀರು ಶುದ್ಧೀಕರಣವಾಗದಿದ್ದಾಗ ಜನರು ಆಗಾಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶುದ್ಧ ನೀರು ಪೂರೈಕೆಗೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಿದ ಉದಾಹರಣೆಗಳೂ ಇವೆ.

ಶುದ್ಧ ನೀರಿಗಾಗಿ ಉಳ್ಳವರು ಮನೆಯಲ್ಲೇ ನೀರು ಸಂಸ್ಕರಿಸುವ ಯಂತ್ರಗಳ ಮೊರೆ ಹೋದರೆ, ಬಡವರಿಗೆ ಶುದ್ಧ ಕುಡಿಯುವ ನೀರಿನ ಘಟಕಗಳು ಆಸರೆಯಾಗಿವೆ. ಸಮಯದ ಅಭಾವ ಇದ್ದವರು, ಮನೆ–ಮನೆಗೆ ಕುಡಿಯುವ ನೀರಿನ ಕ್ಯಾನ್‍ಗಳನ್ನು ಪೂರೈಸುವವರಿಂದ ಖರೀದಿಸುತ್ತಾರೆ. 20 ಲೀಟರ್‌ನ ಒಂದು ಕ್ಯಾನ್ ನೀರಿಗೆ (₹200 ಮುಂಗಡ ಪಾವತಿ ಸಹಿತ) ₹50ರಿಂದ ₹60ರವರೆಗೆ ದರವಿದೆ. ಉದ್ಯೋಗಸ್ಥರು, ವಿದ್ಯಾರ್ಥಿಗಳು, ಹೋಟೆಲ್‍ನವರು, ಕಚೇರಿಗಳಲ್ಲಿ ಈ ನೀರನ್ನೇ ಖರೀದಿಸುತ್ತಾರೆ. ಅಲ್ಲದೆ, ಹಲವರು ಈ ಉದ್ಯಮವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ.

ಶುದ್ಧತೆಯ ಪ್ರಶ್ನೆ: ನೀರನ್ನು ಶುದ್ಧೀಕರಿಸುವ ಘಟಕಗಳು ಯಾವ ವಿಧಾನ ಅನುಸರಿಸುತ್ತವೆ, ಎಲ್ಲಿಯ ನೀರು ಬಳಸುತ್ತವೆ, ಎಷ್ಟು ಬಾರಿ ಶುದ್ಧೀಕರಿಸುತ್ತವೆ, ನೀರಿನ ಶುದ್ಧೀಕರಣದಿಂದ ಹಿಡಿದು ಪೂರೈಕೆವರೆಗೆ ಪ್ರಕ್ರಿಯೆಗೂ, ನಾವು ನೀಡುವ ಹಣಕ್ಕೂ ತಾಳೆಯಾಗುತ್ತದೆಯೇ? ಎಂಬುದು ಹಲವರ ಪ್ರಶ್ನೆಯಾಗಿದೆ.

ಇಂತಹ ಘಟಕಗಳಲ್ಲಿ ಶುದ್ಧೀಕರಣಗೊಳ್ಳುವ ನೀರಿನ ಗುಣಮಟ್ಟ ಪರೀಕ್ಷೆ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಬ್ಯುರೊ ಆಫ್‍ ಇಂಡಿಯನ್ ಸ್ಟ್ಯಾಂಡರ್ಸ್‍ (ಬಿಐಎಸ್‍)ನ  ಧಾರವಾಡ ಜಿಲ್ಲೆಯ ಸ್ಟ್ಯಾಂಡರ್ಡ್‌ ಪ್ರಮೋಷನ್ ಅಧಿಕಾರಿ ಮೊಹಮದ್‍ ಬಿಜಾಪುರ್, ‘ಬಿಐಎಸ್‍ ನಿಯಮಗಳ ಪ್ರಕಾರವೇ ಉತ್ಪನ್ನದ ಗುಣಮಟ್ಟ ನಿರ್ವಹಣೆ ಮಾಡಬೇಕು. ಇಲ್ಲದಿದ್ದರೆ, ಕ್ರಮ ವಹಿಸಲಾಗುತ್ತದೆ. ಪ್ಯಾಕೇಜ್ಡ್‌ ಕುಡಿಯುವ ನೀರು ಮಾರುವ ಘಟಕಗಳಿಗೂ ಇದು ಅನ್ವಯ’ ಎಂದರು.

‘ನೀರು ಮಾರಾಟ ಮಾಡುವ ಘಟಕಗಳು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು. ಘಟಕ ಸಿದ್ಧತೆ ಪೂರ್ಣಗೊಳಿಸಿರಬೇಕು. ಅಧಿಕಾರಿಗಳು ಪರಿಶೀಲನೆ ನಡೆಸಿ, ಎಲ್ಲವೂ ನಿಯಮದ ಪ್ರಕಾರವಿದ್ದರೆ 30 ದಿನಗಳಲ್ಲಿ ಪರವಾನಗಿ ನೀಡುತ್ತಾರೆ. ಪ್ರತಿ ವರ್ಷ ಪರವಾನಗಿ ನವೀಕರಣ ಸಂದರ್ಭದಲ್ಲಿ ತಯಾರಿಕಾ ಘಟಕದಲ್ಲಿರುವ ನಿರ್ದಿಷ್ಟ ಉತ್ಪನ್ನದ ಮಾದರಿಯನ್ನು ಎರಡು ಬಾರಿ,  ಮಾರುಕಟ್ಟೆಯಲ್ಲಿರುವ ಉತ್ಪನ್ನದ ಮಾದರಿಯನ್ನು ನಾಲ್ಕು ಬಾರಿ ಪರೀಕ್ಷಿಸಲಾಗುತ್ತದೆ’ ಎಂದರು.

‘ಉತ್ಪನ್ನದ ಗುಣಮಟ್ಟದ ಬಗ್ಗೆ ದೂರುಗಳು ಬಂದಲ್ಲಿ, ದಾಳಿ ನಡೆಸಿ, ಪರಿಶೀಲಿಸಲಾಗುತ್ತದೆ. ನಿಯಮ ಉಲ್ಲಂಘಿಸಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ನೀರಿನ ಗುಣಮಟ್ಟದ ವಿಚಾರವಾಗಿ ಧಾರವಾಡ ಜಿಲ್ಲೆಯಲ್ಲಿ ದೂರು ಬಂದಿಲ್ಲ’ ಎಂದರು.

ಧಾರವಾಡ ಅಮ್ಮಿನಬಾವಿಯ ಜಲಶುದ್ಧೀಕರಣ ಘಟಕ  (ಸಂಗ್ರಹ ಚಿತ್ರ)
ಧಾರವಾಡ ಅಮ್ಮಿನಬಾವಿಯ ಜಲಶುದ್ಧೀಕರಣ ಘಟಕ  (ಸಂಗ್ರಹ ಚಿತ್ರ)
ಅಂಕಿ–ಅಂಶ ₹40.50 ಕೋಟಿ 2023–24ನೇ ಸಾಲಿನಲ್ಲಿ ಸಂಗ್ರಹವಾದ ನೀರಿನ ಕಂದಾಯ 26  ಜಿಲ್ಲೆಯಲ್ಲಿರುವ ನೀರು ಮಾರಾಟ ಉದ್ಯಮಗಳು 58 ಅವಳಿನಗರದಲ್ಲಿ ಬಂದ್‌ ಆದ ಶುದ್ಧ ನೀರಿನ ಘಟಕಗಳು
ಮನೆಗೆ ತುಂಬಿದ ನೀರಿನ ಕ್ಯಾನ್‌ ನೀಡಿ ಖಾಲಿ ಕ್ಯಾನ್‌ ಒಯ್ಯುತ್ತಾರೆ. ಕ್ಯಾನ್‌ಗೆ ಎಲ್ಲಿ ನೀರು ತುಂಬಿಸುತ್ತಾರೆ ಎಂಬುದು ಈವರೆಗೆ ಗೊತ್ತಾಗಿಲ್ಲ. ಯಾರೂ ಸಹ ಹೇಳಿಲ್ಲ.
ರಾಜಶ್ರೀ ಪಾಟೀಲ ಗೃಹಿಣಿ ಪ್ರಶಾಂತನಗರ
ಕೊಳವೆ ಬಾವಿ ನೀರು ಬಳಸಿ ಹಣ ಮಾಡುವ ದಂಧೆ ಇದು. ನೀರು ಶುದ್ಧೀಕರಿಸಲಾಗಿದೆಯೇ ಅಥವಾ ಇಲ್ಲವೆ ಎಂದು ಜನರು ತಿಳಿದುಕೊಳ್ಳಲ್ಲ.ಪ್ಲಾಸ್ಟಿಕ್‌ ಕ್ಯಾನ್‌ ಮರುಬಳಕೆ ಹಾನಿಕರ
ಪಿ.ವಿ.ಹಿರೇಮಠ ಪರಿಸರಾಸಕ್ತ ಸಾಧನಕೇರಿ
ಕೊಳವೆ ಬಾವಿಯಿಂದ ನೀರು ತಂದು ಶುದ್ಧೀಕರಣ ಯಂತ್ರದಲ್ಲಿ ಶುದ್ಧೀಕರಿಸಿ ಕ್ಯಾನ್‌ಗೆ ತುಂಬಿಸುತ್ತೇವೆ. ಶುದ್ಧ ನೀರನ್ನು ಜನರಿಗೆ ಪೂರೈಸುತ್ತೇವೆ.
ಮಂಜುನಾಥ ಕ್ಯಾನ್‌ ನೀರು ಪೂರೈಕೆದಾರ ಧಾರವಾಡ
‘ಪರವಾನಗಿ ಪಡೆಯದವರಿಂದ ನಷ್ಟ’
‘ಶುದ್ಧ ನೀರಿನ ಕ್ಯಾನ್‍ ಪೂರೈಸಲು ಹುಬ್ಬಳ್ಳಿ‌ ‌ಧಾರವಾಡ ಮಹಾನಗರ ಪಾಲಿಕೆಯಿಂದ ವ್ಯಾಪಾರ ಪರವಾನಗಿ ಪಡೆಯಬೇಕು. ಕೆಲವರು ಪರವಾನಗಿ ಪಡೆಯದೆ ಕಡಿಮೆ ದರಕ್ಕೆ ನೀರು ಪೂರೈಸುತ್ತಾರೆ. ಶುದ್ಧ ಕುಡಿಯುವ ನೀರಿನ ಘಟಕದಿಂದ ಕ್ಯಾನ್‍ಗಳನ್ನು ತುಂಬಿಸಿಕೊಂಡು ಜನರಿಗೆ ಪೂರೈಸುವವರೂ ಇದ್ದಾರೆ. ಇದರಿಂದ ಪರವಾನಗಿ ಪಡೆದು ನಿರ್ದಿಷ್ಟ ಕಂಪನಿಯ ನೀರು ಪೂರೈಸುವವರಿಗೆ ನಷ್ಟವಾಗುತ್ತದೆ’ ಎಂದು ಶುದ್ಧ ನೀರಿನ ಕ್ಯಾನ್‍ ಪೂರೈಕೆದಾರರಾದ ದಾದಾಪೀರ್‌ ಎಂ. ಬಡಬಡೆ ಹಾಗೂ ಶಿವು ತಿಳಿಸಿದರು.
‘ನಿರಂತರ ಸ್ವಚ್ಛತೆ; ಗುಣಮಟ್ಟಕ್ಕೆ ಆದ್ಯತೆ’
‘ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೂಲಕ ಅವಳಿನಗರಕ್ಕೆ ನೀರು ಪೂರೈಸುವ ನೀರಸಾಗರ ಜಲಾಶಯ ಅಮ್ಮಿನಬಾವಿ ಬಳಿ ಇರುವ ಜಲಶುದ್ಧೀಕರಣ ಘಟಕಗಳನ್ನು ಆಗಾಗ್ಗೆ ಶುಚಿಗೊಳಿಸಲಾಗುತ್ತದೆ. ನೀರಿನ ಗುಣಮಟ್ಟವನ್ನೂ ನಿರ್ವಹಣೆ ಮಾಡಲಾಗುತ್ತಿದೆ’ ಎಂದು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದರು. ‘ಆರು ಮಾನದಂಡಗಳಲ್ಲಿ ನೀರಿನ ಗುಣಮಟ್ಟವನ್ನು ತಿಂಗಳಿಗೆ ನಾಲ್ಕು ಬಾರಿ ಪರೀಕ್ಷಿಸಲಾಗುತ್ತದೆ. ಪೂರೈಕೆಯಾಗುವ ನೀರನ್ನೂ ಪರೀಕ್ಷಿಸಿ ಗುಣಮಟ್ಟ ಕಾಯ್ದುಕೊಳ್ಳಲಾಗುತ್ತಿದೆ. ಅಶುದ್ಧ ನೀರು ಪೂರೈಕೆಯಾದಲ್ಲಿ ದೂರು ನೀಡಿದರೆ ಕ್ರಮ ವಹಿಸಲಾಗುತ್ತದೆ’ ಎಂದು ತಿಳಿಸಿದರು. ‘ಬಿಬಿಎಂಪಿ ಮಾದರಿಯಲ್ಲಿ ನೀರು ಪೂರೈಸುವ ಟ್ಯಾಂಕರ್‌ಗಳಿಗೆ ದರ ನಿಗದಿ ಮಾಡಲು ಚಿಂತನೆ ನಡೆಸಲಾಗಿದೆ. ಈ ವೇಳೆ ಕ್ಯಾನ್‍ ನೀರಿಗೂ ದರ ನಿಗದಿ ಬಗ್ಗೆ ಪರಿಶೀಲಿಸಲಾಗುತ್ತದೆ’ ಎಂದರು.
ಕ್ಯಾನ್‌ ನೀರು; ನಿಗಾ ಕೊರತೆ
ಧಾರವಾಢ: ಕ್ಯಾನ್‌ಗಳಲ್ಲಿ ಕುಡಿಯುವ ನೀರು ಪೂರೈಸುವ ಖಾಸಗಿ ಸಂಸ್ಥೆಗಳು ನಗರದಲ್ಲಿ ಇವೆ. ಮನೆ ವಸತಿಗೃಹ ಲಾಡ್ಜ್‌ ಅಂಗಡಿ ಕಚೇರಿ ಮೊದಲಾದವುಗಳಿಗೆ ನೀರು ಒದಗಿಸುತ್ತಾರೆ. ಈ ಖಾಸಗಿ ಸಂಸ್ಥೆಗಳು ಕೊಳವೆ ಬಾವಿಗಳಲ್ಲಿ ನೀರು ಸಂಗ್ರಹಿಸುತ್ತಾರೆ. ಕೆಲವು ಸಂಸ್ಥೆಗಳು ಶುದ್ಧೀಕರಣ ಯಂತ್ರದಲ್ಲಿ ನೀರು ಶುದ್ಧೀಕರಿಸಿ ಐಎಸ್‌ಐ ಚಿಹ್ನೆಯೊಂದಿಗೆ ಪೂರೈಸುತ್ತಾರೆ. ಕೆಲವರು ಕೊಳವೆ ಬಾವಿಯಿಂದ ಕ್ಯಾನ್‌ಗೆ ನೀರು ತುಂಬಿಸಿ ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಾರೆ ಕ್ಯಾನ್‌ಗಳನ್ನು ಸರಿಯಾಗಿ ಸ್ವಚ್ಛಗೊಳಿಸಲ್ಲ. ಖಾಸಗಿ ನೀರು ಪೂರೈಕೆ ಘಟಕದ ಚಟುವಟಿಕೆಗಳ ಮೇಲೆ ಮಹಾನಗರ ಪಾಲಿಕೆ ಆರೋಗ್ಯ ಇಲಾಖೆ ನಿಗಾ ಇಟ್ಟಿಲ್ಲ ಎಂಬ ದೂರುಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT