ಮಂಗಳವಾರ, ಮಾರ್ಚ್ 28, 2023
32 °C
11 ದಿನ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮಹಾಮಂಡಳ ಆಗ್ರಹ

ಹುಬ್ಬಳ್ಳಿ: ಕೋವಿಡ್‌ ನಿಯಮ ಪಾಲಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಕೋವಿಡ್–19 ಸಂಭಾವ್ಯ ಮೂರನೇ ಅಲೆ ಭೀತಿ ಇರುವ ಕಾರಣ ಗಣೇಶ ಚತುರ್ಥಿಯನ್ನು ಆದಷ್ಟು ಸರಳವಾಗಿ ಆಚರಿಸಬೇಕು. ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು’ ಎಂದು ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಲಾಬೂರಾಮ್‌ ಸೂಚಿಸಿದರು.

ಕಮಿಷನರೇಟ್‌ ಕಚೇರಿಯಲ್ಲಿ ಗುರುವಾರ ಗಣೇಶ ಮಹಾಮಂಡಳ ಹಾಗೂ ವಿವಿಧ ಮಂಡಳಿಗಳ ಮುಖಂಡರ ಜೊತೆ ಸಭೆ ನಡೆಸಿದ ಅವರು ‘ಮಾರ್ಗಸೂಚಿ ಪ್ರಕಾರ ಐದು ದಿನಗಳಷ್ಟೇ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಇದೆ. ಪ್ರತಿಷ್ಠಾಪನೆ ಸ್ಥಳದಲ್ಲಿ 20ಕ್ಕಿಂತ ಹೆಚ್ಚು ಜನ ಸೇರಬಾರದು. ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು, ಸ್ಯಾನಿಟೈಸರ್‌ ಬಳಕೆ ಮಾಡಬೇಕು. ಮೂರ್ತಿ ವಿಸರ್ಜನಾ ಸಮಯದಲ್ಲಿ ಮೆರವಣಿಗೆ ಮಾಡುವಂತಿಲ್ಲ’ ಎಂದು ಸೂಚಿಸಿದರು.

ಆಗ್ರಹ: ಜಿಲ್ಲೆಯಲ್ಲಿ ಗಣೇಶ ಹಬ್ಬಕ್ಕೆ ವಿಶೇಷವಾದ ಮಹತ್ವವಿದೆ. ಕೋವಿಡ್‌ ನೆಪವೊಡ್ಡಿ ಆಚರಣೆಗೆ ವಿನಾಕಾರಣ ನಿರ್ಬಂಧ ಹೇರಬಾರದು. ಗರಿಷ್ಠ 11 ದಿನ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕೊಡಬೇಕು ಎಂದು ಹಲವರು ಒತ್ತಾಯಿಸಿದರು.

‘ಕೋವಿಡ್‌ನಿಂದಾಗಿ ಜನ ರೋಸಿ ಹೋಗಿದ್ದಾರೆ. ಸಾರ್ವಜನಿಕವಾಗಿ ಸಮಾರಂಭ ನಡೆಸಲು ಅವಕಾಶ ಕೊಟ್ಟರೆ, ಎಲ್ಲರಿಗೂ ಸಂತೋಷವಾಗುತ್ತದೆ. ವಿಸರ್ಜನಾ ಸಮಯದಲ್ಲಿ ಮೆರವಣಿಗೆಗೂ ಅನುಮತಿ ಕೊಡಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಲಾಬೂರಾಮ್‌ ‘ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದರೆ ಅದಕ್ಕನುಗಣವಾಗಿ ಅನುಮತಿ ನೀಡಲಾಗುವುದು’ ಎಂದರು.

ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರು ಮಾತನಾಡಿ ‘ಗಣೇಶ ಮೂರ್ತಿಗಳ ವಿಸರ್ಜನೆಗೆ ಪಾಲಿಕೆ ವತಿಯಿಂದ ಬಾವಿಗಳನ್ನು ಸ್ವಚ್ಛಗೊಳಿಸಲಾಗಿದೆ. ವಿದ್ಯುತ್‌ ದೀಪಗಳನ್ನು ಹಾಕಲಾಗಿದೆ’ ಎಂದರು.

ಎಂಟು ಅತಿಸೂಕ್ಷ್ಮ: ಹುಬ್ಬಳ್ಳಿ ಉತ್ತರ ವಿಭಾಗ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನಾ ದಿನಗಳಂದು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಎಂದು ವಿಂಗಡಿಸಲಾಗಿದೆ.

ಒಟ್ಟು 231 ಮೂರ್ತಿಗಳ ಪ್ರತಿಷ್ಠಾಪನೆಯಾಗಲಿದ್ದು, 159 ಸಾಮಾನ್ಯ, 64 ಸೂಕ್ಷ್ಮ ಮತ್ತು ಎಂಟು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ ಎಂದು ಪೊಲೀಸ್‌ ಪ್ರಕಟಣೆ ತಿಳಿಸಿದೆ.

ಸಿದ್ಧತೆ ಜೋರು: ಮೂರ್ತಿಗಳ ಪ್ರತಿಷ್ಠಾಪನೆಗೆ ನಗರದ ವಿವಿಧೆಡೆ ಮೂರ್ನಾಲ್ಕು ದಿನಗಳಿಂದ ಸಿದ್ಧತೆ ಜೋರಾಗಿ ನಡೆದಿತ್ತು.

ಶಿರೂರು ಪಾರ್ಕ್‌, ದುರ್ಗದ ಬೈಲ್‌ ರಸ್ತೆ, ದುರ್ಗದ ಬೈಲ್‌, ಗವಳಿ ಗಲ್ಲಿ, ಬೂಸ್‌ಪೇಟ್‌, ಅಕ್ಕಿಹೊಂಡ, ಸಿಂಪಿಗಲ್ಲಿ ಸೇರಿದಂತೆ ಹಲವೆಡೆ ಸಾರ್ವಜನಿಕ ಗಣೇಶೋತ್ಸವ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದ್ದ ಚಿತ್ರಣ ಗುರುವಾರ ರಾತ್ರಿ ಕಂಡುಬಂತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.