ಶುಕ್ರವಾರ, ಮಾರ್ಚ್ 5, 2021
17 °C
ದಾಖಲೆಯಲ್ಲಷ್ಟೇ ಬಯಲು ಶೌಚಮುಕ್ತ

ಹುಬ್ಬಳ್ಳಿ: ಶೌಚಕ್ಕಾಗಿ ಕತ್ತಲಾಗುವ ತನಕ ಕಾಯುವ ದುಸ್ಥಿತಿ

ಬಸವರಾಜ ಹವಾಲ್ದಾರ‌ Updated:

ಅಕ್ಷರ ಗಾತ್ರ : | |

Prajavani

‘ಭಾರತ ಬಯಲು ಶೌಚಮುಕ್ತ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಆದರೆ, ರಾಜ್ಯದಲ್ಲಿ ಈಗಲೂ ನಸುಕಿನಲ್ಲೇ ಕೈಯಲ್ಲಿ ತಂಬಿಗೆ ಹಿಡಿದು ಮಹಿಳೆಯುರು, ಪುರುಷರು, ಮಕ್ಕಳು ಬಯಲ ಕಡೆಗೆ ಹೋಗುವುದು ಮಾಮೂಲಿ ದೃಶ್ಯ. ಸರ್ಕಾರದ ದಾಖಲೆಗಳಲ್ಲಿ ಮಾತ್ರ ಬಯಲು ಶೌಚಮುಕ್ತವಾಗಿದೆ. ಈ ಕುರಿತು ‘ಪ್ರಜಾವಾಣಿ’ ಇಲ್ಲಿ ಬೆಳಕು ಚೆಲ್ಲಿದೆ.

ಹುಬ್ಬಳ್ಳಿ: ‘ಮಳೆ ಬಂದಿರುವುದರಿಂದ ಹೊಲಗಳೆಲ್ಲ ರಾಡಿಯಾಗಿವೆ. ಅಲ್ಲಿ ಹೋಗಲಿಕ್ಕೆ ಆಗುವುದಿಲ್ಲ. ರಸ್ತೆ ಬದಿಯೇ ಹೋಗಬೇಕು. ಆದರೆ, ವಾಹನಗಳು ತಿರುಗಾಡುವುದರಿಂದ ಬೆಳಿಗ್ಗೆ ಬೆಳಕಾಗುವುದರೊಳಗೆ ಇಲ್ಲವೇ, ಸಂಜೆ ಕತ್ತಲಾದ ಮೇಲೆ ಹೋಗಬೇಕು. ಆಗಲೂ ವಾಹನಗಳು ಬಂದಾಗ ಎದ್ದು ನಿಲ್ಲಬೇಕಾದ ಸ್ಥಿತಿ ಇದೆ’

ಹೀಗೆಂದು ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ಲ ಗ್ರಾಮದಲ್ಲಿ ಬಯಲು ಶೌಚಕ್ಕೆ ಹೋಗಿದ್ದ ಮಹಿಳೆಯೊಬ್ಬರು ತಮ್ಮ ಸಂಕಷ್ಟ ಬಿಚ್ಚಿಟ್ಟರು. ‘ಮನೆ ಇದೆ. ಶೌಚಾಲಕ್ಕೆ ಜಾಗವಿಲ್ಲ. ಹಾಗಾಗಿ, ಹೊರಗಡೆ ಹೋಗುವುದು ಅನಿವಾರ್ಯ’ ಎಂದರು.

* ಇದನ್ನೂ ಓದಿ: ಶಿವಮೊಗ್ಗ: ಬೈಪಾಸ್ ಶೌಚಾಲಯ!

ಜಿಲ್ಲೆಯ ಬಹುತೇಕ ಪಟ್ಟಣ, ಗ್ರಾಮಗಳಲ್ಲಿ ಬಯಲು ಶೌಚಕ್ಕೆ ಹೋಗುತ್ತಿರುವುದು ಕಂಡು ಬರುತ್ತದೆ. ಊರ ಹೊರಗಿನ ರಸ್ತೆಗಳಲ್ಲಿ ಸಂಚರಿಸಬೇಕಾದರೆ ಮೂಗು ಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ ಇದೆ.

ದಾಖಲೆಗಳ ಪ್ರಕಾರ ಧಾರವಾಡ ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತವಾಗಿದೆ. ಆದರೆ, ಜಿಲ್ಲೆಯಲ್ಲಿ ಸಂಚರಿಸಿದಾಗ ಬೆಳಿಗ್ಗೆ ಹಾಗೂ ಸಂಜೆ ರಸ್ತೆ ಬದಿಗಳಲ್ಲಿ, ಪೊದೆಗಳಲ್ಲಿ ಜನರು ಶೌಚಾಕ್ಕೆ ಕುಳಿತಿರುವ ದೃಶ್ಯಗಳನ್ನು ಕಾಣಬಹುದಾಗಿದೆ.

ಶೌಚಾಲಯಗಳನ್ನು ನಿರ್ಮಿಸಿಕೊಂಡ ಹಲವರು ಈಗಲೂ ಬಯಲಿಗೆ ಹೋಗುತ್ತಿದ್ದಾರೆ. ಕೆಲವರು ಅಲ್ಲಿ ಕೂಡಲಿಕ್ಕೆ ಆಗುವುದಿಲ್ಲ ಎಂಬ ನೆಪ ಹೇಳಿದರೆ, ಕೆಲವೆಡೆ ನೀರಿನ ಕೊರತೆಯಿಂದಲೂ ಜನರು ಹೊರಗಡೆ ಹೋಗುತ್ತಿದ್ದಾರೆ.

‘ಶೌಚಾಲಯವನ್ನೇನೋ ನಿರ್ಮಿಸಲಾಗಿದೆ. ಆದರೆ, ಅದರ ತ್ಯಾಜ್ಯ ಹೋಗಲು ಸರಿಯಾದ ವ್ಯವಸ್ಥೆ ಮಾಡಿಲ್ಲ. ಹಿಂದೆ ಗುಂಡಿಯನ್ನು ತೋಡಿದ್ದೇವೆ. ಅದು ತುಂಬಿದರೆ ಗಟಾರದಲ್ಲಿ ಹರಿಯುತ್ತದೆ. ಇದಕ್ಕೆ ಅಕ್ಕ–ಪಕ್ಕದ ಮನೆಯವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ, ಶೌಚಾಲಯವಿದ್ದರೂ ಬಳಸಿಕೊಳ್ಳಲು ಆಗುತ್ತಿಲ್ಲ’ ಎಂದು ದೂರುತ್ತಾರೆ ಕುಸುಗಲ್ಲ ಗ್ರಾಮದ ಶಿವಾನಂದ ಕೆ.

* ಇದನ್ನೂ ಓದಿ:  ‘ಸ್ಮಾರ್ಟ್‌ಸಿಟಿ’ ಹಣೆಪಟ್ಟಿಯ ತುಮಕೂರು | ಕೆರೆಯ ಅಂಗಳವೇ ಇಲ್ಲಿ ಶೌಚಾಲಯ

‘ಹಳೆಯ ಮನೆ ಬಿದ್ದಿದೆ. ಇಲ್ಲಿ 15 ವರ್ಷಗಳ ಹಿಂದೆ ಮನೆ ಕಟ್ಟಿಸಿದ್ದೇವೆ. ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ಕೋರಿ ಅರ್ಜಿ ಸಲ್ಲಿಸಿದ್ದೇವೆ. ಆದರೆ, ಇಲ್ಲಿಯವರೆಗೆ ಮಂಜೂರು ಮಾಡಿಲ್ಲ. ಪಂಚಾಯ್ತಿ ಕಚೇರಿಗೆ ಅಲೆದೂ, ಅಲೆದು ಸಾಕಾಗಿದೆ’ ಎನ್ನುತ್ತಾರೆ ಶಿವಪ್ಪ ಫಕೀರಪ್ಪ ಗುಡಗೇರಿ.

‘ನಮಗೆ ಮನೆ ಇದೆ. ಆದರೆ, ಶೌಚಾಲಯ ಕಟ್ಟಿಸಿಕೊಳ್ಳಲು ಮನೆ ಬಳಿ ಒಂದಿಂಚೂ ಜಾಗವಿಲ್ಲ. ನಮ್ಮಂಥವರು ಏನು ಮಾಡಬೇಕು. ಸಾಮೂಹಿಕ ಶೌಚಾಲಯ ನಿರ್ಮಿಸಬೇಕು ಎಂದು ಕೋರಿಕೆ ಸಲ್ಲಿಸಿದ್ದೇವೆ. ಆದರೂ, ಕಟ್ಟಿಸಿಕೊಟ್ಟಿಲ್ಲ. ಹೀಗಾಗಿ, ನಮಗೆ ಬಯಲೇ ಗತಿ ಆಗಿದೆ’ ಎನ್ನುತ್ತಾರೆ ಬ್ಯಾಹಟ್ಟಿ ಗ್ರಾಮದ ಹೆಸರು ಬಹಿರಂಗ ಪಡಿಸಲು ಬಯಸದ ಗ್ರಾಮಸ್ಥರೊಬ್ಬರು.

‘ಧಾರವಾಡ ಜಿಲ್ಲೆಯಲ್ಲಿ 2012ರಲ್ಲಿ ಸಮೀಕ್ಷೆ ನಡೆಸಿದಾಗ ಒಟ್ಟು 1,40,713 ಲಕ್ಷ ಕುಟುಂಬಗಳಿದ್ದು, ಅವುಗಳಲ್ಲಿ 56,424 ಕುಟುಂಬಗಳಿ ಶೌಚಾಲಯ ಹೊಂದಿದ್ದವು. 84,289 ಕುಟುಂಬಗಳು ಶೌಚಾಲಯ ಹೊಂದಿರಲಿಲ್ಲ. ಸಮೀಕ್ಷೆಗೊಳಪಟ್ಟ ಎಲ್ಲ ಮನೆಗಳಿಗೂ ಶೌಚಾಲಯ ನಿರ್ಮಿಸಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಬಿ.ಎಸ್‌. ಮೂಗನೂರಮಠ.

* ಇದನ್ನೂ ಓದಿ: ಚಿತ್ರದುರ್ಗ ಗ್ರಾಮೀಣ ಪ್ರದೇಶದಲ್ಲಿ ನೀರಿನ ಕೊರತೆ|ಶೌಚ ಹೊರಗೆ...ವಸ್ತುಗಳು ಒಳಗೆ..

‘ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 24,413 ಕುಟುಂಬಗಳು ಶೌಚಾಲಯ ಹೊಂದಿರಲಿಲ್ಲ. ಈ ಪೈಕಿ 18,463 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಜಾಗ ಇಲ್ಲದಿರುವುದರಿಂದ 5,950 ಶೌಚಾಲಯಗಳ ನಿರ್ಮಾಣ ಸಾಧ್ಯವಾಗಿಲ್ಲ’ ಎನ್ನುತ್ತಾರೆ ಪಾಲಿಕೆ ಪರಿಸರ ಅಧಿಕಾರಿ ಕೆ.ಎಸ್‌. ನಯನಾ.

* ಹೆಚ್ಚುವರಿಯಾಗಿ ಶೌಚಾಲಯ ಇಲ್ಲದ 21,069 ಕುಟುಂಬಗಳನ್ನು ಗುರುತಿಸಲಾಗಿದೆ. 9,060 ಶೌಚಾಲಯ ನಿರ್ಮಿಸಲಾಗಿದೆ. ಉಳಿದವುವು ನಿರ್ಮಾಣ ಹಂತದಲ್ಲಿದೆ.

ಬಿ.ಎಸ್‌. ಮೂಗನೂರಮಠ, ಯೋಜನಾ ನಿರ್ದೇಶಕ, ಜಿಲ್ಲಾ ಪಂಚಾಯ್ತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು