ಭಾನುವಾರ, ಮಾರ್ಚ್ 26, 2023
24 °C

ಸಾಮರ್ಥ್ಯ ತೋರಿದರೂ ಧಾರವಾಡದ ರೋಹಿತ್‌ಗೆ ಸಿಗದ ಅವಕಾಶ

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: 25 ವ‌ರ್ಷದ ಒಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರಿದರೂ, ಧಾರವಾಡದ ರೋಹಿತ್‌ ಕುಮಾರ ಎ.ಸಿ. ಅವರಿಗೆ ಬಿಸಿಸಿಐ ಆಯೋಜಿಸಿರುವ ಟೂರ್ನಿಯಲ್ಲಿ ರಾಜ್ಯ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಇದು ಈ ಭಾಗದ ಕ್ರಿಕೆಟ್‌ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದ್ದು, ಹಲವರಿಗೆ ನಿರಾಸೆಯನ್ನೂ ಉಂಟು ಮಾಡಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 25 ವರ್ಷದ ಒಳಗಿನವರ ಎಸ್‌.ಎ. ಶ್ರೀನಿವಾಸನ್‌ ಸ್ಮಾರಕ ಟೂರ್ನಿಯಲ್ಲಿ ಧಾರವಾಡ ವಲಯ ತಂಡ ಚಾಂಪಿಯನ್‌ ಆಗಿತ್ತು. 23 ವರ್ಷಗಳ ಬಳಿಕ ಈ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಧಾರವಾಡ ತಂಡ ಚಾಂಪಿಯನ್‌ ಆಗಲು ರೋಹಿತ್ ಪ್ರಮುಖ ಪಾತ್ರ ವಹಿಸಿದ್ದರು. ಟೂರ್ನಿಯಲ್ಲಿ ಒಟ್ಟು 16 ವಿಕೆಟ್‌ಗಳನ್ನು ಕಬಳಿಸಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎನ್ನುವ ಹೆಗ್ಗಳಿಕೆಗೂ ರೋಹಿತ್‌ ಪಾತ್ರರಾಗಿದ್ದರು.

ನ. 20ರಿಂದ ಗುಜರಾತ್‌ನ ರಾಜಕೋಟ್‌ನಲ್ಲಿ ಬಿಸಿಸಿಐ ಏಕದಿನ ಕ್ರಿಕೆಟ್‌ ಟೂರ್ನಿ ಆಯೋಜಿಸಿದೆ. ಶುಭಾಂಗ ಹೆಗ್ಡೆ ನಾಯಕತ್ವದಲ್ಲಿ 20 ಸದಸ್ಯರನ್ನು ಒಳಗೊಂಡ ರಾಜ್ಯ ತಂಡವನ್ನು ಆಯ್ಕೆ ಮಾಡಿದೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಆಯ್ಕೆ ಸಮಿತಿ ತಂಡ ಆಯ್ಕೆಗೂ ಮೊದಲು ಮೂರು ಅಭ್ಯಾಸ ಪಂದ್ಯಗಳನ್ನು ಆಯೋಜಿಸಿತ್ತು. ಇದರಲ್ಲಿ ರೋಹಿತ್ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು. 26 ಆಟಗಾರರನ್ನು ಒಳಗೊಂಡ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ, 20 ಸದಸ್ಯರ ತಂಡದಲ್ಲಿ ಸ್ಥಾನ ಲಭಿಸಿಲ್ಲ.

ಎಡಗೈ ಸ್ಪಿನ್ನರ್ ಆಗಿರುವ ರೋಹಿತ್‌ 19 ವರ್ಷದೊಳಗಿನವರ ಕೂಚ್‌ ಬಿಹಾರ್‌ ಟ್ರೋಫಿ ಟೂರ್ನಿಯಲ್ಲಿ 2019ರಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ಸ್ಥಳೀಯವಾಗಿ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಅಭ್ಯಾಸ ಮಾಡುತ್ತಿದ್ದು, ಧಾರವಾಡದ ಜೆಎಸ್‌ಎಸ್‌ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆಎಸ್‌ಸಿಎ ಸದಸ್ಯರೊಬ್ಬರು ‘ರೋಹಿತ್‌ ಅವರು ಶ್ರೀನಿವಾಸನ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರಿಗೆ ರಾಜ್ಯ ತಂಡದಲ್ಲಿ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆ ಬಲವಾಗಿತ್ತು. 20 ಸದಸ್ಯರ ತಂಡಕ್ಕೇ ಆಯ್ಕೆ ಮಾಡಿಲ್ಲ ಎನ್ನುವುದು ಅಚ್ಚರಿ. ಬೇರೆ ಆಟಗಾರರಿಗೆ ಅವಕಾಶ ಕೊಟ್ಟ ಬಗ್ಗೆ ನಮ್ಮ ತಕರಾರು ಇಲ್ಲ; ಆದರೆ ಉತ್ತಮ ಸಾಮರ್ಥ್ಯ ತೋರಿದ ರೋಹಿತ್‌ಗೆ ಸ್ಥಾನ ಸಿಗಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.

***

ರೋಹಿತ್‌ಗೆ ಅಂತಿಮ ತಂಡದಲ್ಲಿ ಅವಕಾಶ ಸಿಗುವ ನಿರೀಕ್ಷೆ ನಮಗೂ ಇತ್ತು. ಮುಂಬರುವ ನಾಲ್ಕು ದಿನಗಳ ಟೂರ್ನಿಯಲ್ಲಿ ಸ್ಥಾನ ಸಿಗುವ ಭರವಸೆಯಿದೆ.

-ವೀರಣ್ಣ ಸವಡಿ, ಕೆಎಸ್‌ಸಿಎ ಧಾರವಾಡ ವಲಯದ ಚೇರ್ಮನ್‌

***

ರೋಹಿತ್‌ಗೆ ಸ್ಥಾನ ಸಿಗುವ ನಿರೀಕ್ಷೆ ಹೊಂದಿದ್ದೆವು. ಆದರೆ, ಆಯ್ಕೆ ಸಮಿತಿಯೇ ತಂಡವನ್ನು ಅಂತಿಮಗೊಳಿಸುತ್ತದೆ. ಮುಂದೆ ಅವಕಾಶ ಸಿಗಬಹುದು.

-ಅವಿನಾಶ ಪೋತದಾರ, ಕೆಎಸ್‌ಸಿಎ ಧಾರವಾಡ ವಲಯದ ನಿಮಂತ್ರಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು