ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ಈದ್ಗಾ ಮೈದಾನ ಕಾಂಪೌಂಡ್ ತೆರವು ಪ್ರಕ್ರಿಯೆಗೆ ವಿರೋಧ

Published : 6 ಆಗಸ್ಟ್ 2024, 0:03 IST
Last Updated : 6 ಆಗಸ್ಟ್ 2024, 0:03 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ‘ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಯೋಜನೆಯ ಮೂಲ ನೀಲನಕ್ಷೆಯಲ್ಲಿ ಈದ್ಗಾ ಕಾಂಪೌಂಡ್‌ ತೆರವು ಇರಲಿಲ್ಲ. ಈಗ ನಕ್ಷೆಯನ್ನೇ ಬದಲಿಸಿ, ಕಾಂಪೌಂಡ್‌ ತೆರವಿಗೆ ನಿರ್ಧರಿಸಿರಬಹುದು’ ಎಂದು ಮುಸ್ಲಿಂ ಸಮುದಾಯದ ಮುಖಂಡ ಅಲ್ತಾಫ್‌ ಹಳ್ಳೂರ ಹೇಳಿದ್ದಾರೆ.

‘ಮೇಲ್ಸೇತುವೆ ಕಾಮಗಾರಿಗಾಗಿ ರಾಣಿ ಚನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನದ ಕಾಂಪೌಂಡ್‌ ಭಾಗಶಃ ತೆರವು ಆಗಲಿದೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಆದರೆ, ಮೂಲ ನೀಲನಕ್ಷೆಯಲ್ಲಿ ಇರದ ತೆರವು ಅಂಶ ಈಗ ಏಕಾಏಕಿ ಹೇಗೆ ಉದ್ಭವಿಸಿತು ಎಂದು ತಿಳಿಯುತ್ತಿಲ್ಲ’ ಎಂದು ಅವರು ಸೋಮವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಬೆಳವಣಿಗೆ ಹಿನ್ನೆಲೆಯಲ್ಲಿ ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳ ಸಭೆ ತುರ್ತು ಕರೆಯಲಾಗುವುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸಂಪೂರ್ಣ ಮಾಹಿತಿ ಪಡೆದು, ಮುಂದಿನ ನಿರ್ಧಾರ  ತಿಳಿಸಲಾಗುವುದು’ ಎಂದರು.

‘ಈದ್ಗಾ ಮೈದಾನ ಧಾರ್ಮಿಕ ಸ್ಥಳವಾಗಿದ್ದು, ಅಲ್ಲಿನ ಕಟ್ಟಡಕ್ಕೆ ತೊಂದರೆ ಆಗಬಾರದು ಎಂಬುದು ನಮ್ಮ ಮನವಿ. ಕೋಮು ಸೌಹಾರ್ದಕ್ಕೆ ಧಕ್ಕೆಯಾಗದ ರೀತಿ ಅಭಿವೃದ್ಧಿ ಕಾರ್ಯ ನಡೆಯಲಿ. ಈದ್ಗಾ ಮೈದಾನ ಸುತ್ತಮುತ್ತ ಯಾವುದೆಲ್ಲ ಸ್ವರೂಪದಲ್ಲಿ ಕಾಮಗಾರಿ ನಡೆಯಲಿದೆ ಎಂಬ ಬಗ್ಗೆ ವಿವರಣೆ ನೀಡುವಂತೆ ಸಚಿವ ಸಂತೋಷ ಲಾಡ್‌ ಅವರಿಗೆ ಮತ್ತೊಮ್ಮೆ ಕೋರಲಾಗುವುದು’ ಎಂದು ಅಂಜುಮನ್‌ ಸಂಸ್ಥೆ ಶಿಕ್ಷಣ ಮಂಡಳಿ ಸದಸ್ಯ ನವೀದ್‌ ಮುಲ್ಲಾ ಹೇಳಿದರು.

ಈ ಎಲ್ಲದರ ಮಧ್ಯೆ ಸಂಸ್ಥೆಯ ಕೆಲ ಪದಾಧಿಕಾರಿಗಳು ಸೋಮವಾರ ಅಶೋಕನಗರದಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಚರ್ಚಿಸಿರುವುದು ಗೊತ್ತಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ‘ಪಾಲಿಕೆ ಆಸ್ತಿಯಾದ ಕಾರಣ ಪಾಲಿಕೆಗೆ ಮತ್ತು ಭೂಸ್ವಾಧೀನ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದೇವೆ. ಅಲ್ಲಿಂದ ಕ್ರಮ ಜರುಗಲಿದೆ. ಇದರಲ್ಲಿ ನಮ್ಮ ಪಾತ್ರವಿಲ್ಲ’ ಎಂದು ಹೇಳಿದ್ದಾರೆಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT