ಶನಿವಾರ, ಜೂಲೈ 11, 2020
29 °C
ನಿರ್ಧಾರ ವಾಪಸ್‌ ಪಡೆಯುವಂತೆ ವಿವಿಧ ಸಂಘಟನೆಗಳ ಆಗ್ರಹ

ಹುಬ್ಬಳ್ಳಿ: ಆಸ್ತಿ ತೆರಿಗೆ ಹೆಚ್ಚಳಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೊರೊನಾ ಸಂಕಷ್ಟದ ಸಮಯದಲ್ಲಿಯೂ ಮಹಾನಗರ ಪಾಲಿಕೆ ಆಸ್ತಿ ತೆರಿಗೆಯನ್ನು ಶೇ 20ರಿಂದ ಶೇ 30ಕ್ಕೆ ಹೆಚ್ಚಳ ಮಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಪಾಲಿಕೆ ಕೂಡಲೇ ಈ ನಿರ್ಧಾರ ವಾಪಸ್‌ ಪಡೆಯಬೇಕು ಎಂದು ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಮಾಜಿ ಶಾಸಕ ನಾಗರಾಜ ಛಬ್ಬಿ ‘ಲಾಕ್‌ಡೌನ್‌ನಿಂದ ನಲುಗಿದ ಜನರಿಗೆ ಪಾಲಿಕೆ ತೆರಿಗೆ ಹೆಚ್ಚಿಸುವ ಮೂಲಕ ಆಘಾತ ನೀಡಿದೆ. ವ್ಯಾಪಾರ–ವಹಿವಾಟು ಇಲ್ಲದೆ ಸಾಕಷ್ಟು ಉದ್ಯಮಿಗಳು ನಷ್ಟ ಅನುಭವಿಸುತ್ತಿದ್ದಾರೆ. ಅನೇಕರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ತೆರಿಗೆ ಏರಿಸಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆಸ್ತಿಕರ ಪಾವತಿಗೆ ರಿಯಾಯಿತಿ ನೀಡಬೇಕು. ಪಾಲಿಕೆ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಜನರ ಮೇಲೆ ಹೊರೆ ಹಾಕದೇ ಸರ್ಕಾರದಿಂದ ವಿಶೇಷ ಪ್ಯಾಕೇಜ್‌ ಪಡೆಯಲು ಯೋಜನೆ ರೂಪಿಸಬೇಕು ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರಿಗೆ ಒತ್ತಾಯಿಸಿದ್ದಾರೆ.

ನವನಗರದ ನಿವಾಸಿ ನಾರಾಯಣ ವೆಂ. ಭಾದ್ರಿ ‘ಖಾಸಗಿ ನೌಕರಿಯಲ್ಲಿರುವ ಜನ ಲಾಕ್‌ಡೌನ್‌ನಿಂದ ತತ್ತರಿಸಿದ್ದಾರೆ. ಈಗ ಆಸ್ತಿ ತೆರಿಗೆ ಹೆಚ್ಚಿಸಿದ್ದು ಸರಿಯಲ್ಲ; ಮಾನವೀಯ ನೆಲೆಗಟ್ಟಿನ ಹಿನ್ನೆಲೆಯಲ್ಲಿ ನಿರ್ಧಾರ ವಾಪಸ್‌ ಪಡೆಯಬೇಕು’ ಎಂದಿದ್ದಾರೆ.

ಹಿಂಪಡೆಯಲು ಕೋರಿಕೆ: ಕೊರೊನಾ ಸಂಕಷ್ಟದಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಈ ಸಂಕಷ್ಟದ ಸಮಯದಲ್ಲಿ ತೆರಿಗೆ ಹೆಚ್ಚಿಸಿದ್ದು ಸರಿಯಲ್ಲ, ಇದನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಪದಾಧಿಕಾರಿಗಳು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

ತೆರಿಗೆ ಹೆಚ್ಚಳ ಮಾಡಿದ ಕ್ರಮ ಅವೈಜ್ಞಾನಿಕ ಹಾಗೂ ಅಸಮಂಜಸವಾಗಿದೆ. ಕೂಡಲೇ ಶೇ 5ರಷ್ಟು ರಿಯಾಯಿತಿಯೊಂದಿಗೆ ಮೊದಲಿದ್ದ ದರದಲ್ಲಿ ಆಸ್ತಿ ಕರ ಪಾವತಿಸಲು ಅನುಕೂಲ ಮಾಡಿಕೊಡಬೇಕು. ತೆರಿಗೆ ಕಟ್ಟಲು ಜುಲೈ 31ರ ವರೆಗೆ ಕಾಲಾವಕಾಶ ನೀಡಬೇಕು ಎಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.

ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಲದ್ದಡ, ಉಪಾಧ್ಯಕ್ಷ ವಿನಯ ಜೆ.ಜವಳಿ, ಸಿದ್ದೇಶ್ವರ ಕಮ್ಮಾರ, ಗೌರವ ಕಾರ್ಯದರ್ಶಿ ಅಶೋಕ ಗಡಾದ, ಮಾಜಿ ಅಧ್ಯಕ್ಷರಾದ ಶಂಕರಣ್ಣ ಮುನವಳ್ಳಿ, ರಮೇಶ ಪಾಟೀಲ, ಸದಸ್ಯರಾದ ಬಸವರಾಜ ಎಕಲಾಸಪೂರ, ಅಂದಾನಪ್ಪ ಸಜ್ಜನರ, ಶಾಂತರಾಜ ಪೋಳ ಇದ್ದರು.

ಆಮ ಆದ್ಮಿ ಖಂಡನೆ: ರಾಜ್ಯ ಸರ್ಕಾರ ಮತ್ತು ಸಚಿವ ಜಗದೀಶ ಶೆಟ್ಟರ್‌ ಅವರು ತುರ್ತು ನಿಗಾವಹಿಸಿ ತೆರಿಗೆ ಹೆಚ್ಚಳವನ್ನು ವಾಪಸ್‌ ಪಡೆಯಬೇಕು ಎಂದು ಆಮ್‌ ಆದ್ಮಿ ಪಕ್ಷದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ನರಗುಂದ ಆಗ್ರಹಿಸಿದ್ದಾರೆ.

ಬೆಂಗಳೂರು, ಮೈಸೂರು, ವಿಜಯಪುರ ಪಾಲಿಕೆಗಳಲ್ಲಿ ಸರ್ಕಾರ ಆಸ್ತಿ ತೆರಿಗೆ ಹೆಚ್ಚಿಸಿಲ್ಲ. ಲಾಕ್‌ಡೌನ್‌ನಿಂದ ಬಹಳಷ್ಟು ಜನರಿಗೆ ಕೆಲಸವಿಲ್ಲದಂತಾಗಿದೆ. ಆದ್ದರಿಂದ ಈ ನಿರ್ಧಾರ ಕೈ ಬಿಡಬೇಕು ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು