ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ರಾಜಕೀಯ ವ್ಯವಸ್ಥೆ ರೂಪಿಸುವ ಗುರಿ: ಮಹಿಮ ಪಟೇಲ್

Last Updated 16 ಜುಲೈ 2021, 15:00 IST
ಅಕ್ಷರ ಗಾತ್ರ

ಧಾರವಾಡ: ‘ಪ್ರಸ್ತುತ ದೇಶದಲ್ಲಿ ದರ್ಶನ, ದೂರದೃಷ್ಟಿ ಇಲ್ಲದ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವ ಮೌಲ್ಯಗಳನ್ನು ನಾಶ ಮಾಡುತ್ತಿವೆ. ಹೀಗಾಗಿ ‘ಸಾವಯವ’ ರಾಜಕೀಯ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಪಕ್ಷ ಕಾರ್ಯ ನಿರ್ವಹಿಸುತ್ತಿದೆ’ ಎಂದು ಜನತಾದಳ (ಸಂಯುಕ್ತ)-ಕರ್ನಾಟಕ ರಾಜ್ಯಾಧ್ಯಕ್ಷ ಮಹಿಮ ಪಟೇಲ್ ಹೇಳಿದರು.

‘ವಿಕಾಸದ ಆಶಯದೊಂದಿಗೆ ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕಾದ ಅಗತ್ಯ ಹಿಂದಿಗಿಂತಲೂ ಇಂದು ಹೆಚ್ಚಾಗಿದೆ. ಪ್ರಜಾಪ್ರಭುತ್ವ ಎಂದರೆ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಮೂಲಕ ಆಡಳಿತ ನಡೆಯಬೇಕು. ಆದರೆ ಇಂದು ದೇಶದಲ್ಲಿ ಜನರ ಧ್ವನಿಯನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ದೃಷ್ಟಿಹೀನ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ಜಾತಿ, ಧರ್ಮ, ಹಣದ ಆಧಾರದಲ್ಲಿ ರಾಸಾಯನಿಕ ರಾಜಕಾರಣ ನಡೆಸುತ್ತಿದ್ದಾರೆ. ಇದರಿಂದ ಹೊರತಾದ ಸಾವಯವ ರಾಜಕೀಯ ವ್ಯವಸ್ಥೆ ರೂಪಿಸುವ ಆಶಯ ನಮ್ಮದು. ಮುಕ್ತ ವಾತಾವರಣ ಬೇಕು ಎನ್ನುವುದು ಪಕ್ಷದ ನಿಲುವು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ನಮಗೆಂಥ ವ್ಯವಸ್ಥೆ ಬೇಕು ಎನ್ನುವ ಕುರಿತು 2 ದಿನಗಳ ಕಾಲ ನಗರದಲ್ಲಿ ನಡೆಯುತ್ತಿರುವ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಲಾಗುವುದು. ಜತೆಗೆ ರಾಜ್ಯದಾದ್ಯಂತ ಸಂಚರಿಸಿ, ಪಕ್ಷ ಸಂಘಟನೆ ಕುರಿತು ಕೂಡ ಯೋಜನೆ ರೂಪಿಸಲಾಗುವುದು’ ಎಂದು ಹೇಳಿದರು.

‘ಪ್ರತಿಯೊಂದು ರಾಜಕೀಯ ಪಕ್ಷದ ಉದ್ದೇಶ ಸೇವಾ ಮನೋಭಾವನೆ ಹೊಂದಿರಬೇಕು. ಜನರ ಜೀವನವನ್ನು ಇನ್ನಷ್ಟು ಉತ್ತಮಗೊಳಿಸುವ ವಾತಾವರಣ ನಿರ್ಮಿಸಬೇಕು. ಪ್ರತಿಯೊಂದು ಪಕ್ಷದಲ್ಲೂ ಒಳ್ಳೆಯ ಜನರಿದ್ದರೂ ಅನಿವಾರ್ಯತೆಯಿಂದಾಗಿ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಹಿಂದೆ, ಮುಂದೆ ನೋಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಪಟೇಲ್ ಹೇಳಿದರು.

‘ಸಾವಯವ ಆಲೋಚನೆ, ಸೇವಾ ಮನೋಭಾವನೆ, ಗ್ರಾಮಗಳ ಸಬಲೀಕರಣ, ಗುಡಿ ಕೈಗಾರಿಕೆಗಳ ಸ್ಥಾಪನೆ ಮೂಲಕ ಜನರಲ್ಲಿ ಆರ್ಥಿಕ ಸ್ವಾವಲಂಬನೆ ತರುವುದು. ರಾಜಕೀಯದ ಶುದ್ಧೀಕರಣ ಇಂಥ ವಿಭಿನ್ನ ಆಲೋಚನೆಗಳ ಮೂಲಕ ಪಕ್ಷ ಬಲಪಡಿಸಲು ಚಿಂತನೆ ನಡೆದಿದೆ. ಈ ನಿಟ್ಟಿನಲ್ಲಿ ನಾಡಿನ ಸಾಹಿತಿಗಳು, ಕಲಾವಿದರು, ಚಿಂತಕರು, ಬುದ್ಧಿಜೀವಿಗಳನ್ನು ಭೇಟಿ ಮಾಡಿ, ಚರ್ಚಿಸಲಾಗುತ್ತಿದೆ’ ಎಂದು ಹೇಳಿದರು.

‘ನಮ್ಮ ರಾಜಕೀಯ ಸಿದ್ಧಾಂತದಲ್ಲಿ ನಾವು ಪ್ರತಿಪಾದಿಸುತ್ತಿರುವುದು ಪರಿಸರ ಪ್ರೇಮ, ಅಹಿಂಸೆ, ಬಾಂಧವ್ಯದ ಮೂಲಕ ರಾಜಕಾರಣ, ಸಾಮಾಜಿಕ ನ್ಯಾಯ ಮತ್ತು ತಳಮಟ್ಟದಿಂದ ಪ್ರಜಾಪ್ರಭುತ್ವ ಬೆಳೆಸುವ ಗುರಿ ಇದೆ. ಹಸಿರು ಚಳವಳಿ ಮೂಲಕ ಹಸಿರು ರಾಜಕೀಯಕ್ಕೆ ಪಕ್ಷ ಒತ್ತು ನೀಡುತ್ತದೆ. ಇಂಥದೊಂದು ಪ್ರಯೋಗ ದಾವಣಗೆರೆ ಜಿಲ್ಲೆ ಕಾರಿಗನೂರು ಗ್ರಾಮದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ’ ಎಂದು ಮಹಿಮ ಪಟೇಲ ಹೇಳಿದರು.

ಸುಭಾಸ ರಪಾಟೆ, ಶಕುಂತಲಾ ಶೆಟ್ಟಿ, ಶಾಂತಕುಮಾರಿ, ಸುಮನ್, ಧನಂಜಯ ಲಕ್ಷ್ಮಿಕಾಂತ, ಚಂದ್ರಶೇಖರ ಗಂಗೂರ, ಎಸ್.ಎಸ್.ರಡ್ಡೇರ, ಶಶಿಕುಮಾರ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT