ಹುಬ್ಬಳ್ಳಿ: ‘ಪಾರ್ಟ್‌ಟೈಮ್ ಜಾಬ್’ ಶೀರ್ಷಿಕೆಯ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಥವಾ ಮೊಬೈಲ್ ಕಿರುಸಂದೇಶದಲ್ಲಿ ಕ್ಲಿಕ್ ಮಾಡುವ ಮುನ್ನ ಎಚ್ಚರ ಇರಲಿ. ಆನ್‌ಲೈನ್‌ನಲ್ಲಿ ಇಂತಹ ಸಂದೇಶಗಳನ್ನು ನಂಬಿ ಹಣ ಕಳೆದುಕೊಂಡು ಮೋಸಕ್ಕೊಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹುಬ್ಬಳ್ಳಿಯ ಉಣಕಲ್ ನಿವಾಸಿ ಗೃಹಸ್ಥೆಯೊಬ್ಬರು ಇಂತಹದ್ದೇ ಸಂದೇಶ ನಂಬಿದ್ದರಿಂದ ಒಟ್ಟು ₹3.52 ಲಕ್ಷ ಹಣ ಮೋಸಕ್ಕೊಳಗಾಗಿದ್ದಾರೆ.
ಕಳೆದ ಸೆಪ್ಟೆಂಬರ್ 19ರಿಂದ ಸೆಪ್ಟೆಂಬರ್ 21ರ ನಡುವೆ ಹಂತಹಂತವಾಗಿ ಅಂಕಿತಾ ದೀಕ್ಷಿತ್ ಅವರ ಬ್ಯಾಂಕ್ ಖಾತೆಯಿಂದ ದುಷ್ಕರ್ಮಿಗಳು ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ. ಇದೀಗ ವಿದೇಶಕ್ಕೆ ತೆರಳಿರುವ ಅಂಕಿತಾ ಅವರು ತಮ್ಮ ತಂದೆಯ ಮೂಲಕ ಸೈಬರ್ ಪೊಲೀಸ್ ಠಾಣೆಗೆ ಲಿಖಿತ ದೂರನ್ನು ಗುರುವಾರ ತಲುಪಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಘಟನೆ ವಿವರ: ವ್ಯಾಟ್ಸ್‌ಆ್ಯಪ್‌ನಲ್ಲಿ ಸೆ.19 ರಂದು ಬಂದಿದ್ದ ಉದ್ಯೋಗದ ಸಂದೇಶವನ್ನು ಅಂಕಿತಾ ತೆರೆದು ನೋಡಿದ್ದರು. ಆನ್‌ಲೈನ್ ಟಾಸ್ಕ್‌ಗಳನ್ನು ಪೂರ್ಣಗೊಳಿಸುವಂತೆ ಅದರಲ್ಲಿ ದುಷ್ಕರ್ಮಿಗಳು ಹೇಳಿದ್ದನ್ನು ಅಂಕಿತಾ ಅನುಸರಿಸಿದ್ದರು. ಆರಂಭದಲ್ಲಿ ₹1 ಸಾವಿರ, ₹5 ಸಾವಿರ ಹಾಗೂ ₹7 ಸಾವಿರ ಹಣವನ್ನು ಬ್ಯಾಂಕ್ ಖಾತೆಗೆ ದುಷ್ಕರ್ಮಿಗಳು ವರ್ಗಾವಣೆ ಮಾಡಿದ್ದಾರೆ.
ನಂತರದಲ್ಲಿ ಅವರು ಕೇಳಿದ ಬ್ಯಾಂಕ್ ಖಾತೆಯ ಮಾಹಿತಿಯನ್ನೆಲ್ಲ ಅಂಕಿತಾ ನೀಡಿದ್ದರು. ಮಾಹಿತಿ ಪಡೆದು ಆನ್‌ಲೈನ್ ಕೈಚಳಕ ತೋರಿಸಿದ ಕದೀಮರು ಹಂತಹಂತವಾಗಿ ₹19,800, ₹60 ಸಾವಿರ, ₹1,35,100 ಹಾಗೂ ₹1,34,100 ಹಣವನ್ನು ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿಕೊಂಡಿದ್ದಾರೆ. ಒಟ್ಟು ₹3.52 ಲಕ್ಷ ಹಣ ಮೋಸಕ್ಕೊಳಗಾದ ಬಳಿಕ ಎಚ್ಚೆತ್ತುಕೊಂಡಿರುವ ಅಂಕಿತಾ ಅವರು ಹಣ ವಾಪಸ್ ಕೊಡಿಸುವಂತೆ ಸೈಬರ್ ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ.
ಕಳವಾಗಿದ್ದ ಮೊಬೈಲ್‌ನಿಂದ ಹಣ ವರ್ಗಾವಣೆ
ಹುಬ್ಬಳ್ಳಿ: ಬಸ್‌ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯ ಮೊಬೈಲ್ ಕಳ್ಳತನ ಮಾಡಿದ ಕಳ್ಳರು, ಅದರಿಂದ ₹78 ಸಾವಿರ ಹಣ ವರ್ಗಾವಣೆಯಾದ ಬಗ್ಗೆ ನಾಲ್ಕು ದಿನ ತಡವಾಗಿ ಗುರುವಾರ ದೂರು ದಾಖಲಾಗಿದೆ.
ಚಾಲಕ ವೃತ್ತಿ ಮಾಡುವ ಸಂಜೀವ ಮುಳಗುಂದ ಅವರು ಅ.8 ರಂದು ಹುಬ್ಬಳ್ಳಿಯಿಂದ ಹೆಬಸೂರಿಗೆ ಸಂಚರಿಸುತ್ತಿದ್ದಾಗ, ಮೊಬೈಲ್ ಕಳ್ಳತನವಾಗಿರುವುದು ಹುಬ್ಬಳ್ಳಿ ಕೋರ್ಟ್ ಸರ್ಕಲ್‌ನಲ್ಲಿ ಅರಿವಿಗೆ ಬಂದಿದೆ. ಅ.10 ರಂದು ಡುಪ್ಲಿಕೇಟ್ ಸಿಮ್ ಪಡೆದು ಇನ್ನೊಂದು ಮೊಬೈಲ್ ಹಾಕಿಕೊಂಡಾಗ ಬ್ಯಾಂಕ್ ಖಾತೆಯಿಂದ ಒಟ್ಟು ₹78 ಸಾವಿರ ಹಣ ಕಡಿತವಾಗಿರುವ ಸಂದೇಶ ಬಂದಿದೆ. ಆನಂತರ ಬ್ಯಾಂಕ್ ಸ್ಟೇಟ್‌ಮೆಂಟ್ ಪಡೆದು ಈ ಬಗ್ಗೆ ಅ.12 ರಂದು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್: ಮೂವರ ಬಂಧನ
ಹುಬ್ಬಳ್ಳಿ: ವಿಶ್ವಕಪ್ ಕ್ರಿಕೆಟ್ ನಡೆಯುತ್ತಿರುವುದರಿಂದ ಬೆಟ್ಟಿಂಗ್ ದಂಧೆ ಮೇಲೆ ನಿಗಾ ವಹಿಸಿರುವ ಸಿಸಿಬಿ ತಂಡದ ಪೊಲೀಸರು ಹುಬ್ಬಳ್ಳಿ ಮತ್ತು ಧಾರವಾಡ ನಗರಗಳಲ್ಲಿ ಗುರುವಾರ ಪ್ರತ್ಯೇಕವಾಗಿ ಎರಡು ಸ್ಥಳಗಳ ಮೇಲೆ ದಾಳಿ ನಡೆಸಿ ಮೂವರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.
ಧಾರವಾಡದ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ದುರ್ಗಾ ಕಾಲೊನಿಯಲ್ಲಿ ಗುರುವಾರ ದಾಳಿ ನಡೆಸಿ ರವಿವಾರ ಪೇಟೆ ನಿವಾಸಿ ಮಹಮ್ಮದ್ ಶರೀಫ್ ಆರೋಪಿಯನ್ನು ಹಾಗೂ ಹುಬ್ಬಳ್ಳಿಯ ಅಲ್ತಾಫ್ ಪ್ಲಾಟ್‌ನಲ್ಲಿ ದಾಳಿ ನಡೆಸಿ ಎಸ್.ಎಂ.ಕೃಷ್ಣಾನಗರದ ಸಿರಾಜ ಅಹ್ಮದ್ ಮುಲ್ಲಾ ಮತ್ತು ಸದರಸೋಫಾ ನಿವಾಸಿ ಸಮೀರ್ ಅಬ್ದುಲ್ ಖಾದರ್ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಮೊಬೈಲ್‌ಗಳನ್ನು ಮತ್ತು ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.