ಮಂಗಳವಾರ, ಜುಲೈ 27, 2021
21 °C
ಸುರಕ್ಷತಾ ನಿಯಮ ಪಾಲಿಸಿದರೂ ಹೋಗದ ಭಯ, ಮಾಲೀಕರಿಗೆ ಸಂಕಷ್ಟ

ಜಿಮ್‌ ತೆರೆದರೂ ಬಾರದ ಜನ

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೋವಿಡ್‌ ಹಾಗೂ ಲಾಕ್‌ಡೌನ್‌ನಿಂದಾಗಿ ಎರಡು ತಿಂಗಳುಗಳ ಕಾಲ ಮುಚ್ಚಿದ್ದ ಜಿಮ್‌ಗಳು ಪುನರಾರಂಭವಾಗಿದ್ದು, ಸೋಂಕಿನ ಭೀತಿಯಿಂದಾಗಿ ಜನ ಮೊದಲಿನ ಹಾಗೆ ಬರುತ್ತಿಲ್ಲ. ಇದು ಜಿಮ್‌ಗಳ ಮಾಲೀಕರನ್ನು ಸಂಕಷ್ಟಕ್ಕೆ ದೂಡಿದೆ.

ಅವಳಿ ನಗರಗಳಲ್ಲಿರುವ ಬಹಳಷ್ಟು ಜಿಮ್‌ಗಳು ಆಧುನಿಕ ಶೈಲಿಗೆ ತಕ್ಕಂತೆ ತರಬೇತಿ ನೀಡಲು ಸಿಬ್ಬಂದಿ ನಿಯೋಜಿಸಿಕೊಂಡಿವೆ. ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ವ್ಯಾಯಾಮದ ಸಾಮಗ್ರಿಗಳನ್ನೂ ಖರೀದಿಸಿವೆ. ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯ ಸಮಯದಲ್ಲಿ ನಾಲ್ಕು ತಿಂಗಳು ಜಿಮ್‌ಗಳು ಮುಚ್ಚಿದ್ದವು. ಬಳಿಕವೂ ಸೋಂಕಿನ ಭೀತಿಯಿಂದ ಜನ ಬರುತ್ತಿಲ್ಲ. ಹೀಗಾಗಿ ಜಿಮ್‌ಗಳ ಕಟ್ಟಡದ ಬಾಡಿಗೆ, ವಿದ್ಯುತ್‌ ಬಿಲ್‌, ಸಾಮಗ್ರಿಗಳ ನಿರ್ವಹಣೆ ಮತ್ತು ಸಿಬ್ಬಂದಿಗೆ ವೇತನ ನೀಡುವುದು ಮಾಲೀಕರಿಗೆ ಹೊರೆಯಾಗಿ ಪರಿಣಮಿಸಿದೆ.

ಕೊರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾದ ಬಳಿಕ ಶೇ 50ರಷ್ಟು ಜನರಿಗೆ ಅವಕಾಶ ನೀಡಿ ಜಿಮ್‌ ತೆರೆಯಲು ಸರ್ಕಾರ ಅನುಮತಿ ಕೊಟ್ಟಿದೆ. ಆದರೆ, ಇದರಲ್ಲಿ ಅರ್ಧದಷ್ಟು ಜನ ಕೂಡ ಬರುತ್ತಿಲ್ಲ. ಸಂಜೆ 5 ಗಂಟೆ ತನಕ ಮಾತ್ರ ಜಿಮ್‌ ತೆರೆಯಲು ಪರವಾನಗಿ ಕೊಟ್ಟಿದ್ದು ಜನ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಜಿಮ್‌ಗಳ ಮಾಲೀಕರು.

ಯಾಕೆಂದರೆ ಸಾಮಾನ್ಯವಾಗಿ ಬೆಳಿಗ್ಗೆ 6ರಿಂದ 10 ಗಂಟೆ ತನಕ ಮತ್ತು ಸಂಜೆ 5ರಿಂದ 9 ಗಂಟೆ ತನಕ ಜಿಮ್‌ನಲ್ಲಿ ದೇಹ ದಣಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿದ್ದರು. ನೌಕರಿಯಲ್ಲಿ ಇರುವವರು, ವೈದ್ಯರು ಹಾಗೂ ವಿದ್ಯಾರ್ಥಿಗಳು ಹೆಚ್ಚಾಗಿ ಸಂಜೆ ವೇಳೆ ಸಮಯ ನಿಗದಿ ಮಾಡಿಕೊಳ್ಳುತ್ತಿದ್ದರು. ಈಗ 5 ಗಂಟೆಗೆ ಜಿಮ್ ಬಂದ್‌ ಮಾಡಬೇಕಿರುವುದರಿಂದ ಪೂರ್ಣಪ್ರಮಾಣದಲ್ಲಿ ಲಾಭ ಸಿಗುತ್ತಿಲ್ಲ ಎನ್ನುತ್ತಾರೆ ಅವರು.

ಶಿರೂರು ಪಾರ್ಕ್‌ನಲ್ಲಿರುವ ಶಾಡೊ ಜಿಮ್‌ನ ವ್ಯವಸ್ಥಾಪಕ ಕಿರಣ ಎಚ್‌. ಪ್ರತಿಕ್ರಿಯಿಸಿ ‘ಕೋವಿಡ್‌ಗಿಂತ ಮೊದಲು ನಿತ್ಯ ಬೆಳಿಗ್ಗೆ 75ರಿಂದ 80 ಜನ ಬರುತ್ತಿದ್ದರು. 15ರಿಂದ 20 ಜನ ಬಂದರೆ ಅದೇ ಹೆಚ್ಚು. ಒಬ್ಬ ವ್ಯಕ್ತಿ ಬಳಸಿದ ಉಪಕರಣಗಳನ್ನು ಸ್ಯಾನಿಟೈಸ್‌ ಮಾಡಿದ ಬಳಿಕವಷ್ಟೇ ಇನ್ನೊಬ್ಬರಿಗೆ ಕೊಡಲಾಗುತ್ತದೆ. ಕೋವಿಡ್‌ ನಿಯಮ ಪಾಲಿಸಿ ಸುರಕ್ಷತೆಗೆ ಒತ್ತು ಕೊಟ್ಟರೂ ಜನ ಬರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಲಸಿಕೆ ಪ್ರಮಾಣಪತ್ರ ಕಡ್ಡಾಯ’

ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಐ ಫಿಟ್‌ನೆಸ್ ಕೇಂದ್ರವು ಜಿಮ್‌ ಮಾಡಲು ಬರುವವರಿಗೆ ಕೋವಿಡ್‌ ಲಸಿಕೆ ಪಡೆದ ದಾಖಲೆ ತೋರಿಸುವುದನ್ನು ಕಡ್ಡಾಯಗೊಳಿಸಿದೆ.

ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎನ್ನುವ ಉದ್ದೇಶದಿಂದ ಕಡ್ಡಾಯ ಮಾಡಲಾಗಿದೆ.  ಜಿಮ್‌ನಲ್ಲಿ ಹೆಚ್ಚು ಜನ ಸೇರದಂತೆ ತಡೆಯಲು ಆ್ಯಪ್‌ ಮೂಲಕ ಮುಂಗಡ ಬುಕ್ಕಿಂಗ್ ಮಾಡಿದರಷ್ಟೇ ಅವಕಾಶ ಕೊಡಲಾಗುತ್ತಿದೆ ಎಂದು ಐ ಫಿಟೆನೆಸ್‌ನ ವ್ಯವಸ್ಥಾಪಕ ಶೇಖ್‌ ಮೊಹಮ್ಮದ್‌ ಶಫಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.