ಸೋಮವಾರ, ಅಕ್ಟೋಬರ್ 26, 2020
21 °C
ಪ್ರಜಾವಾಣಿ ಫೋನ್ ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ವಲಯದ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ

ಮಕ್ಕಳ ಕಲಿಕೆಯಲ್ಲಿ ಪೋಷಕರೂ ಪಾಲ್ಗೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಶಾಲೆಯನ್ನೇ ಇನ್ನೂ ಶುರು ಮಾಡಿಲ್ಲ; ನಮ್ಮ ಮಕ್ಕಳಿಗೆ ಆನ್‌ ಲೈನ್‌ ಒಗ್ಗೋದಿಲ್ರೀ, ಬದಲಿ ವ್ಯವಸ್ಥೆ ಏನ್ರೀ?, ‘ವಿದ್ಯಾಗಮ’ ಯೋಜನೆ ಅಷ್ಟು ಚಲೋ ಇದ್ದಂಗಿಲ್ಲ..., ನಮ್ಮ ಶಾಲೆಗೆ ಒಳ್ಳೆ ಆಟದ ಮೈದಾನ ಇಲ್ಲ, ಶಾಲಾ ಪಠ್ಯಪುಸ್ತಕ ಇನ್ನೂ ಬಂದಿಲ್ಲ ಯಾವಾಗ ಬರ್ತದ್ರೀ? ಮಕ್ಕಳಿಗೆ ಸಮವಸ್ತ್ರ ಯಾವಾಗ ವಿತರಣೆ ಮಾಡ್ತೀರಿ? ಮುಖ್ಯ ಶಿಕ್ಷಕರೇ ಗೈರು ಹಾಜರಾಗಿ ವಾರಕ್ಕೊಮ್ಮೆ ಪಾಠ ಮಾಡೋಕೆ ಬರ್ತಾರ‍್ರೀ, ಶಿಕ್ಷಕರ ಹುದ್ದೆ ಭರ್ತಿ ಯಾವಾಗ್ರೀ?’

–ಶಾಲಾ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಉಪನ್ಯಾಸಕರುಗಳಿಂದ ಸೋಮವಾರ ಹುಬ್ಬಳ್ಳಿ ಬ್ಯುರೋದಲ್ಲಿ ಆಯೋಜಿಸಿದ್ದ ‘ಫೊನ್‌ ಇನ್‌’ ಕಾರ್ಯಕ್ರಮದಲ್ಲಿ ಪ್ರಶ್ನೆಗಳು ಹರಿದುಬಂದಿವು. ಅವೆಲ್ಲವುಗಳಿಗೆ  ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ವಲಯದ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ತಾಳ್ಮೆಯಿಂದ ಉತ್ತರಿಸಿದರು.

‘ಪ್ರಾಥಮಿಕ ಶಿಕ್ಷಣವೇ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ. ಮಕ್ಕಳನ್ನು ಶಾಲೆಗೆ ಸೇರಿಸಿದ್ದೇವೆ, ಶಿಕ್ಷಕರು ಪಾಠ ಮಾಡುತ್ತಾರೆ ಎಂದು ಸುಮ್ಮನಿದ್ದರೆ ಸಾಲದು. ಮಗು ಏನು ಕಲಿಯುತ್ತದೆ ಎನ್ನುವುದನ್ನು ಪೋಷಕರು ನಿತ್ಯ ಗಮನಿಸಬೇಕು’ ಎನ್ನುವ ಕಿವಿಮಾತನ್ನೂ ಮೇಜರ್‌ ಹೇಳಿದರು. 

ಅವರೊಂದಿಗೆ ಪ್ರಭಾರಿ ಜೆಡಿಪಿಐ ಎಂ.ಎಫ್‌. ಕುಂದಗೋಳ, ಜೆಆರ್‌ಒ ಮಹಾದೇವಿ ಮೂಡಲಗೇರಿ, ಕಂಪ್ಯೂಟರ್‌ ಅನಲಿಸ್ಟ್‌  ಶಾಂತಾ ಮೀಶಿ, ಆಪ್ತ ಸಹಾಯಕ ಗುರು ಬಿದರಿ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ವಿದ್ಯಾ ನಾಡಿಗೇರ ಪಾಲ್ಗೊಂಡಿದ್ದರು.

ಓದುಗರಿಂದ ಕೇಳಿ ಬಂದ ಪ್ರಶ್ನೆ–ಅದಕ್ಕೆ ಉತ್ತರಗಳು ಇಲ್ಲಿವೆ.

* ಸಾಗರ ಗಾಂವ್ಕರ್, ಅಂಕೋಲಾ: ಚಂದನ ವಾಹಿನಿಯಲ್ಲಿ ‘ಸಂವೇದ’ ಕಾರ್ಯಕ್ರಮ ಪ್ರಸಾರ ಆಗುವ ಅವಧಿಯಲ್ಲೇ ಆನ್‌ಲೈನ್ ಪಾಠವೂ ನಡೆಯುತ್ತದೆ. ಮಕ್ಕಳು ಎರಡೂ ಕಡೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ.

ಮೇಜರ್ ಸಿದ್ಧಲಿಂಗಯ್ಯ ಹಿರೇಮಠ: ಈ ಕುರಿತು ಪಾಲಕರು, ವಿದ್ಯಾರ್ಥಿಗಳು ಶಾಲೆಯ ಮುಖ್ಯಶಿಕ್ಷಕರ ಹತ್ತಿರ ಮಾತನಾಡಬೇಕು. 'ಸಂವೇದ' ಕಾರ್ಯಕ್ರಮದ ಅವಧಿಯನ್ನು ನೋಡಿಕೊಂಡು, ಬೇರೆ ಅವಧಿಯಲ್ಲೇ ತರಗತಿ ನಡೆಸುವಂತೆ ತಿಳಿಸಬೇಕು.

* ಸವಣೂರು, ಹಾವೇರಿ: ಖಾಸಗಿ ಶಾಲೆಯವರು ₹12 ಸಾವಿರ ಶುಲ್ಕ ಕಟ್ಟಲೇ ಬೇಕೆಂದು ಒತ್ತಾಯ ಮಾಡುತ್ತಿದ್ದಾರೆ... 

–ಅನುದಾನ ರಹಿತ (ಖಾಸಗಿ) ಶಾಲೆಗಳ ಶಿಕ್ಷಕರಿಗೆ ಸರ್ಕಾರದಿಂದ ಸಂಬಳ ಇರುವುದಿಲ್ಲ.ನೀವು ಕಟ್ಟುವ ಶುಲ್ಕದಿಂದಲೇ ಅವರಿಗೆ ಸಂಬಳ ಕೊಡಲಾಗುತ್ತದೆ.  ಖಾಸಗಿ ಶಾಲೆಗಳು ಅರ್ಧ ಶುಲ್ಕ ಪಡೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

*ಸುಜಾತ, ಬನಹಟ್ಟಿ: ಇನ್ನೂ ಶಾಲೆ ಆರಂಭಿಸದೇ ಇರೋದ್ರಿಂದ ಮನೆಯಲ್ಲಿ ಮಕ್ಕಳು ಕಲಿಯಲು ಆಸಕ್ತಿಯೇ ತೋರಿಸುತ್ತಿಲ್ಲ...

–ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದು ಸರ್ಕಾರದ ಜವಾಬ್ದಾರಿ ಮಾತ್ರವಲ್ಲ. ಎರಡು ತಿಂಗಳ ಶಿಕ್ಷಣ ಸಿಗದಿದ್ದರೆ ಮಕ್ಕಳ ಭವಿಷ್ಯ ಹಾಳಾಗಲ್ಲ. ಆದರೂ, ಮಕ್ಕಳು ಶಿಕ್ಷಣದಿಂದ ದೂರ ಉಳಿಯುವಂತಾಗಬಾರದು ’ವಿದ್ಯಾಗಮ’ ಆರಂಭಿಸಲಾಗಿದೆ. 

* ಸ್ಮಿತಾ, ಬಾಗಲಕೋಟೆ, ಹುನಗುಂದ (ಆದರ್ಶ ವಿದ್ಯಾಲಯ,9 ನೇ ತರಗತಿ): ನಮ್ಮ ಶಾಲೆಗೆ ಊರಿಂದ ಆಚೆ ಇದೆ. ಆದರೆ ಒಳ್ಳೆಯ ಆಟದ ಮೈದಾನ ಇಲ್ಲ. ನಮಗೆ ಇಂಗ್ಲಿಷ್ ಪಠ್ಯ ಪುಸ್ತಕ ಬಂದಿಲ್ಲ.

–ಆದರ್ಶ ವಿದ್ಯಾಲಯಕ್ಕೆ ಕನಿಷ್ಠ ಐದು ಎಕರೆ ಸ್ಥಳ ಇರಬೇಕು ಎಂಬ ನಿಯಮ ಇದೆ. ಅದರಲ್ಲಿ ಒಳ್ಳೆಯ ಆಟದ ಮೈದಾನವೂ ಇರುವುದು ಕಡ್ಡಾಯ. ಜೊತೆಗೆ ಎಲ್ಲ ಶಾಲೆಗಳಿಗೆ ಎಲ್ಲ ಪಠ್ಯ ಪುಸ್ತಕಗಳನ್ನು ಪೂರೈಸಲಾಗಿದೆ.  ಪರಿಶೀಲನೆ ನಡೆಸುತ್ತೇನೆ.

 * ಲಕ್ಷ್ಮಿ ಕಮತಗಿ, ಬಾಗೇವಾಡಿ, ವಿಜಯಪುರ (ಪಿಯು ಪ್ರಥಮ ವರ್ಷ): ನಮ್ಮ ಮನೆಯ ಹತ್ತಿರ ಇರುವ ಶಾಲೆಯಲ್ಲಿ ನನ್ನ ಇಬ್ಬರು ತಂಗಿಯರು ನಾಲ್ಕು ಮತ್ತು ಆರನೇ ತರಗತಿ ಓದುತ್ತಿದ್ದಾರೆ. ಅಲ್ಲಿ ಉಳಿದೆಲ್ಲ ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಾರೆ. ಆದರೆ ಮುಖ್ಯ ಶಿಕ್ಷಕರು ಮಾತ್ರ ವಾರಕ್ಕೊಮ್ಮೆ ಬಂದು ಸಹಿ ಮಾಡಿ ಹೋಗುತ್ತಾರೆ. ಹತ್ತು ವರ್ಷದಿಂದ ಇದೇ ಶಾಲೆಯಲ್ಲಿ ಇದ್ದಾರೆ...

–ಈ ಶಿಕ್ಷಕರ ಬಗ್ಗೆ ನಾನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ.

* ಅತಿಥಿ ಉಪನ್ಯಾಸಕಿ, ಸರ್ಕಾರಿ ಶಾಲೆ, ರಾಣೆಬೆನ್ನೂರು: ವಿದ್ಯಾಗಮ ಕಾರ್ಯವನ್ನು ವಾರದ ಏಳೂ ದಿವಸ ಮಾಡುತ್ತಿದ್ದೇವೆ. ಮಧ್ಯಾಹ್ನದವರೆಗೆ ವಿದ್ಯಾಗಮ ಮುಗಿಸಿ ನಂತರ ಶಾಲೆಗೆ ಬರಬೇಕು. ಇದರಿಂದ ಕಷ್ಟವಾಗುತ್ತಿದೆ.

–ಈ ಬಗ್ಗೆ ನೀವು ನಿಮ್ಮ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಳಿ ಮಾತನಾಡಬೇಕಾಗುತ್ತದೆ.

*ಶಿವಲಿಂಗಗೌಡ ಬಾಶಿ, ಶಿರಸಿ: ಈಗ ‘ವಿದ್ಯಾಗಮ’ ಮೂಲಕ ಪಾಠಗಳು ಜರುಗುತ್ತಿವೆ. ಆದರೆ, ಸಂಗೀತ ತರಗತಿಗಳು ನಡೆಯುತ್ತಿಲ್ಲ...

–ರಾಜ್ಯದಲ್ಲಿ ಕೆಲವೇ ಶಾಲೆಗಳಲ್ಲಿ ಸಂಗೀತ ವಿಷಯವಿದೆ. ಅಗತ್ಯದ,ಗುಣಮಟ್ಟದ ಸಂಗೀತ ವಿಡಿಯೊಗಳನ್ನು ಮಾಡಿ, ಅಪ್‌ಲೋಡ್‌ ಮಾಡಲಾಗುತ್ತಿದೆ. ಈಗಾಗಲೇ 20 ವಿಡಿಯೊಗಳು ಸಿದ್ಧವಾಗುತ್ತಿವೆ. ಸಂಗೀತ ತರಗತಿ ನಡೆಸುವಂತೆ ಸೂಚನೆ ನೀಡಲಾಗುತ್ತದೆ.

*ಈರಣ್ಣ, ಲಕ್ಷ್ಮೇಶ್ವರ: ನನ್ನ ಮಗ ಮೊರಾರ್ಜಿ ಶಾಲೆಯಲ್ಲಿ ಓದುತ್ತಿದ್ದಾನೆ. ಆದರೆ, ಇನ್ನು ಪಠ್ಯ ಪುಸ್ತಕಗಳು ಬಂದಿಲ್ಲ.

–ಎಲ್ಲಾ ಶಾಲೆಗಳಿಗೆ ಸುಮಾರು 2 ಕೋಟಿ ಪಠ್ಯಪುಸ್ತಕಗಳನ್ನು ಪೂರೈಸಲಾಗಿದೆ. ದೀಕ್ಷ ಚಾನೆಲ್‌ ಮೂಲಕ ಯೂಟ್ಯೂಬ್‌ನಲ್ಲಿ ವಿಡಿಯೊಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ಪುಸ್ತಕಗಳ ಲಭ್ಯತೆ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಲಾಗುತ್ತದೆ.

*ಪೂಜಾರಿ, ತಿಮ್ಮಾಪುರ: ಧಾರವಾಡದ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿದ್ದೇನೆ. ಸದ್ಯ ಎಲ್ಲಿಯೂ ನೇಮಕಾತಿ ಇಲ್ಲ. ಜೀವನ ನಿರ್ವಹಣೆ  ಕಷ್ಟವಾಗಿದೆ.

–ಅನುದಾನಿತ ಶಿಕ್ಷಕರ ನೇಮಕಕ್ಕೆ ಆಡಳಿತ ಮಂಡಳಿಗಳಿಗೆ ಸೂಚಿಸಲಾಗಿದೆ. ಅನುದಾನಿತ ಶಾಲೆಗಳ ಸಂಖ್ಯೆ ಹೆಚ್ಚುತ್ತಿದ್ದು, ಸ್ಪರ್ಧೆ ಹೆಚ್ಚುತ್ತಿದೆ. ಇದರಿಂದಾಗಿ ಶಿಕ್ಷಕರ ನೇಮಕದಲ್ಲೂ ತೊಡಕಾಗಿದೆ. 

* ಮಹಾಂತೇಶ ರಾಜಗುಳಿ, ಬೈಲಹೊಂಗಲ: ಭಜಂತ್ರಿ, ಹಾವೇರಿ/ ಚಂದ್ರಶೇಖರ ಮಟ್ಟಿ, ಹೆಬ್ಬಳ್ಳಿ, ಧಾರವಾಡ: ‘ವಿದ್ಯಾಗಮ’ ಯೋಜನೆ ಮಕ್ಕಳ ಕಲಿಕೆಗೆ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಕಲಿಕೆ ಕುಂಠಿತವಾಗದಂತೆ ನೋಡಿಕೊಳ್ಳುವುದು ಹೇಗೆ?

–‘ವಿದ್ಯಾಗಮ’ ತಾತ್ಕಾಲಿಕ ವ್ಯವಸ್ಥೆ. ಕೊರೊನಾದಿಂದಾಗಿ ಮಕ್ಕಳ ಶಿಕ್ಷಣ ಸ್ಥಗಿತಗೊಳ್ಳಬಾರದು ಎಂಬ ಉದ್ದೇಶದಿಂದ, ಸುರಕ್ಷಾ ಕ್ರಮಗಳೊಂದಿಗೆ ‘ವಿದ್ಯಾಗಮ’ ಯೋಜನೆ ಜಾರಿಗೆ ತರಲಾಗಿದೆ. ಕೊರೊನಾ ಹಾವಳಿ ತಗ್ಗಿದ ನಂತರ, ಶಾಲೆಗಳಲ್ಲಿ ಎಂದಿನಂತೆ ತರಗತಿಗಳು ಆರಂಭವಾಗಲಿವೆ.

* ಮಹಾಲಿಂಗ ಮಾಯಣ್ಣವರ, ಚಿಮ್ಮಡಗಿ, ರಬಕವಿ: ನಮ್ಮ ಸರ್ಕಾರಿ ಶಾಲೆಯಲ್ಲಿ 350ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಆದರೆ, ಜಿಪಿಟಿ (ಪದವೀಧರ) ಶಿಕ್ಷಕರ ಕೊರತೆ ಇದೆ., ಕೂಡಲೇ ಹುದ್ದೆಯನ್ನು ಭರ್ತಿ ಮಾಡಿದರೆ ಅನುಕೂಲವಾಗುತ್ತದೆ.

– ಅತಿ ಹೆಚ್ಚು ಮಕ್ಕಳಿರುವ ನಿಮ್ಮ ಶಾಲೆಗೆ ಶಿಕ್ಷಕರ ಕೊರತೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಹಾಗಾಗಿ, ಅಗತ್ಯ ಶಿಕ್ಷಕರನ್ನು ನಿಯೋಜಿಸಲು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಉಪ ನಿರ್ದೇಶಕರಿಗೆ ಸೂಚನೆ ನೀಡುವೆ.

* ಸಕಲೇಶ ಹಿರೇಮಠ, ಎಸ್‌ಡಿಎಂಸಿ ಅಧ್ಯಕ್ಷ, ಸರ್ಕಾರಿ ಪ್ರೌಢಶಾಲೆ, ಬಾಡಗಿ, ಬೀಳಗಿ ತಾಲ್ಲೂಕು: ‘ವಿದ್ಯಾಗಮ ಯೋಜನೆ’ಯಡಿ ನಮ್ಮೂರಿನ ಶಾಲೆಯ ಇಂಗ್ಲಿಷ್ ಶಿಕ್ಷಕರೊಬ್ಬರು ಸರಿಯಾಗಿ ಪಾಠ ಮಾಡುತ್ತಿಲ್ಲ. ಶಾಲೆಗೂ ಸರಿಯಾಗಿ ಬರುತ್ತಿಲ್ಲ. ಈ ಬಗ್ಗೆ ಬಿಇಒ ಮತ್ತು ಡಿಡಿಪಿಐಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ.

– ಈ ಶಿಕ್ಷಕರ ಬಗ್ಗೆ ನೀವು ಕೊಟ್ಟಿರುವ ದೂರಿನ ಮಾಹಿತಿ ಪಡೆಯುವೆ. ಅದರ ಸತ್ಯಾಸತ್ಯ ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವೆ.

* ಗಿರಿಜಾದೇವಿ ಬಣಕಾರ, ಜಗನ್ನಾಥ ಬಣಕಾರ, ರಾಣೆಬೆನ್ನೂರು: ಊರಿನ ಸರ್ಕಾರಿ ಶಾಲೆಗಾಗಿ ನಮ್ಮ ತಾತ 1 ಎಕರೆ 15 ಗುಂಟೆ ಭೂಮಿ ಕೊಟ್ಟಿದ್ದರು. ಆ ಜಾಗದ ಮೂಲಕವೇ ನಮ್ಮ ಹೊಲಕ್ಕೆ ಹೋಗಬೇಕಿದೆ. ಅಲ್ಲಿ ದಾರಿ ಬಿಡಲು ಸಂಬಂಧಪಟ್ಟವರಿಗೆ ಸೂಚನೆ ನೀಡಿ.

– ನಿಮ್ಮ ತಾತ ಜಮೀನು ಕೊಟ್ಟಾಗ ಯಾವ ರೀತಿಯ ಒಪ್ಪಂದವಾಗಿತ್ತು ಎಂಬುದರ ಬಗ್ಗೆ ಮಾಹಿತಿ ಪಡೆದು, ಅಗತ್ಯ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸುವೆ.

* ಭೀಮರಾಯ, ಮುಗಳಕೋಡ, ರಾಯಬಾಗ ತಾಲ್ಲೂಕು: ನಾನು ಬಿಪಿ.ಇಡಿ ಮುಗಿಸಿದ್ದೇನೆ. ಆದರೆ, ಕೆಲ ವರ್ಷಗಳಿಂದ ನೇಮಕಾತಿಯೇ ನಡೆದಿಲ್ಲ. ಯಾವಾಗ ನೇಮಕಾತಿ ಮಾಡುತ್ತೀರಿ?

– ಇದು ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕಾದ ವಿಷಯ. ಈ ಬಗ್ಗೆ ನೀವು ಸಂಬಂಧಪಟ್ಟವರನ್ನು ಸಂಪರ್ಕಿಸಬೇಕು.

* ಭಾರತಿ ಮಿರ್ಜಿ, ಉಪನ್ಯಾಸಕಿ, ಕೆಸಿಬಿ ವಿಜ್ಞಾನ ಕಾಲೇಜು, ವಿಜಯಪುರ:ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ರದ್ದುಗೊಳಿಸಿರುವುದರಿಂದ, ಉದ್ಯೋಗದ ನಿರೀಕ್ಷೆಯಲ್ಲಿದ್ದ ನನ್ನ ಪತಿ ಸೇರಿದಂತೆ ಹಲವರಿಗೆ ತೊಂದರೆಯಾಗಿದೆ. ಮತ್ತೆ  ನೇಮಕಾತಿ ಯಾವಾಗ ನಡೆಯಲಿದೆ?

– ಕೊರೊನಾ ಆತಂಕದಿಂದಾಗಿ ನೇಮಕಾತಿಯನ್ನು ಮುಂದಿನ ಶೈಕ್ಷಣಿಕ ವರ್ಷದವರೆಗೆ ತಡೆ ಹಿಡಿಯಲಾಗಿದೆ, ರದ್ದುಪಡಿಸಿಲ್ಲ.

* ಸುರೇಶ, ಮುಂಡರಗಿ: ಮಕ್ಕಳಿಗೆ ಸಮವಸ್ತ್ರ ಯಾವಾಗ ವಿತರಣೆ ಮಾಡುತ್ತೀರಿ. ಅಲ್ಲದೆ, ಸ್ಥಳೀಯ ಆರ್‌ಎಂಎಸ್‌ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರ ಕೊರತೆ ಇದ್ದು, ಕೂಡಲೇ ಒಬ್ಬರನ್ನು ನೇಮಿಸಿ.

– ಮೊದಲ ಹಂತದ ಸಮವಸ್ತ್ರವನ್ನು ಸದ್ಯದಲ್ಲೇ ವಿತರಿಸಲಾಗುವುದು. ಆರ್‌ಎಂಎಸ್ ಶಾಲೆಗೆ ಇಂಗ್ಲಿಷ್ ವಿಷಯದ ಶಿಕ್ಷಕರ ನಿಯೋಜನೆಗೂ ಕ್ರಮ ಕೈಗೊಳ್ಳಲಾಗುವುದು.

*ಸಿದ್ದರಾಮ ಮೂಳೆ, ಇಂಡಿ; ಖಾಸಗಿ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದ ನನ್ನ ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಲು ನಿರ್ಧರಿಸಿದ್ದೇನೆ. ಆದರೆ, ಶಾಲೆಯವರು ಟಿ.ಸಿ (ವರ್ಗಾವಣೆ ಪತ್ರ) ಕೊಡಲು ನಿರಾಕರಿಸುತ್ತಿದ್ದಾರೆ.

– ಮಕ್ಕಳು ಯಾವ ಶಾಲೆಯಲ್ಲಿ ಓದಬೇಕು ಎಂಬುದನ್ನು ನಿರ್ಧರಿಸುವುದು ಪಾಲಕರಿಗೆ ಬಿಟ್ಟಿದ್ದು. ಹಾಗಾಗಿ, ಶಾಲೆಯವರು ಟಿ.ಸಿ ಕೊಡಲು ನಿರಾಕರಿಸುವಂತಿಲ್ಲ. ನಿಮ್ಮ ಸಮಸ್ಯೆಯನ್ನು ಬಗೆಹರಿಸುವಂತೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸುವೆ.

 

ಪ್ರಾಥಮಿಕ ಶಿಕ್ಷಣವೇ ಭವಿಷ್ಯದ ತಳಹದಿ

ಮೂರನೇ ತರಗತಿಗೆ ಹೋಗುವ ವೇಳೆಗೆ ಮಗುವಿಗೆ ಚೆನ್ನಾಗಿ ಓದಲು ಬರಬೇಕು.

4–5ನೇ ತರಗತಿಯಲ್ಲಿ ಸಂಕಲನ, ವ್ಯವಕಲನ ಚೆನ್ನಾಗಿ ಬರಬೇಕು. 6–7ನೇ ತರಗತಿಯಲ್ಲಿ ಅದು ಗಟ್ಟಿಗೊಳ್ಳಬೇಕು.

ಪ್ರತಿ ಮಗುವಿನಲ್ಲಿಯೂ ಅಗಾಧವಾದ ಕಲಿಯುವ ಶಕ್ತಿ ಇದೆ.

ಶಾಲೆಯ ನಿರ್ಲಕ್ಷ್ಯ ಅಥವಾ ಪೋಷಕರ ನಿರ್ಲಕ್ಷ್ಯವೂ ಮಗುವಿನ ಕಲಿಕೆಯ ಹಿನ್ನಡೆಗೆ ಕಾರಣ

ಈ ಎರಡೂ ಕಡೆಯಿಂದಲೂ ನಿರ್ಲಕ್ಷ್ಯ ಉಂಟಾದಾಗ ಮಾತ್ರ ಮಕ್ಕಳು ಅನುತ್ತೀರ್ಣರಾಗುತ್ತಾರೆ

ಮಕ್ಕಳ ಕಲಿಕೆಯಲ್ಲಿ ಪಾಲಕರ ಪಾಲ್ಗೊಳ್ಳುವಿಕೆ ಮುಖ್ಯ

ಉತ್ತರ ಕರ್ನಾಟಕ ಭಾಗದಲ್ಲಿ ಈ ರೀತಿ ಪಾಲಕರ ತೊಡಗಿಸಿ ಕೊಳ್ಳುವಿಕೆ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ ಪ್ರಮಾಣದಲ್ಲಿದೆ.

ಆನ್‌ಲೈನ್ ಶಿಕ್ಷಣ ತಾತ್ಪೂರ್ತಿಕ

ಇಕ್ರಾ, 10ನೇ ತರಗತಿ ವಿದ್ಯಾರ್ಥಿನಿ: ಆನ್‌ಲೈನ್ ಶಿಕ್ಷಣದಲ್ಲಿ ಒಳ್ಳೆಯ ಅಂಶಗಳು ಇರುವಂತೆ ಸಮಸ್ಯೆಯೂ ಇದೆ. ಎಷ್ಟೋ ಮಕ್ಕಳಿಗೆ ಆನ್‌ಲೈನ್ ತರಗತಿಗೆ ಹಾಜರಾಗಲು ಮೊಬೈಲ್, ಅಂತರ್ಜಾಲ ಸಂಪರ್ಕ ಇಲ್ಲ. ಪಾಲಕರು ಕೆಲಸಕ್ಕೆ ಹೋಗಿರುತ್ತಾರೆ. ಆಗ ತರಗತಿಗೆ ಕೂರಲು ಸಾಧ್ಯವಿಲ್ಲ. ಬದಲಾಗಿ ಶಾಲೆ ಆರಂಭಿಸುವ ಕುರಿತು ಯಾಕೆ ಚಿಂತನೆ ಮಾಡಬಾರದು?

–ಕೋವಿಡ್ ಸಂಕಷ್ಟದಿಂದಾಗಿ ಆನ್‌ಲೈನ್ ತರಗತಿ ನಡೆಸುವುದು ಅನಿವಾರ್ಯವಾಗಿದೆ. ಇದು ತಾತ್ಪೂರ್ತಿಕ. ಕೋವಿಡ್ ನಿವಾರಣೆ ಆಗೇ ಆಗುತ್ತದೆ. ಮತ್ತೆ ನೀವು ಶಾಲೆಗಳಿಗೆ ಬರುವ ಸಮಯ ಬರುತ್ತದೆ. ಸದ್ಯ ಶಾಲೆಗೆ ಬರಲು ಸಾಧ್ಯವಾಗದ ಕಾರಣ ಆನ್‌ಲೈನ್ ತರಗತಿ ನಡೆಯುತ್ತಿದೆ. ಸರ್ಕಾರ ಸಾಕಷ್ಟು ಚಿಂತನೆ ನಡೆಸಿ ಈ ನಿರ್ಧಾರಕ್ಕೆ ಬಂದಿದೆ. ಸರ್ಕಾರಕ್ಕೆ ಪ್ರತಿ ಮಗುವಿನ ಸೌಖ್ಯವೂ ಮುಖ್ಯ. ಯಾವ ಮಗುವನ್ನೂ ಅಪಾಯಕ್ಕೆ ತಳ್ಳಲು ಸಾಧ್ಯವಿಲ್ಲ. ಇಲಾಖೆಯಿಂದ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಪೋಷಕರ ಸಹಕಾರವೂ ಮುಖ್ಯ.

ಜತೆಗೆ ಎಷ್ಟು ಸಾಧ್ಯವೋ ಅಷ್ಟು ಹಣ ಸಂಗ್ರಹಿಸಿ ಮಕ್ಕಳಿಗೆ ಕತೆ ಪುಸ್ತಕಗಳನ್ನು ಕೊಡಿಸಿ. ಓದುವ ಹವ್ಯಾಸವನ್ನು ರೂಢಿಸಿ. ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ, ಆಸಕ್ತಿ ಮೂಡಿಸುವ ಪುಸ್ತಕಗಳನ್ನು ಸಂಗ್ರಹಿಸಿ ಮಕ್ಕಳದ್ದೇ ಪ್ರತ್ಯೇಕ ಗ್ರಂಥಾಲಯ ಮಾಡಿಸಿ. ಇದರಿಂದ ಮಕ್ಕಳು ಶಿಕ್ಷಣದಿಂದ ದೂರ ಉಳಿಯದೆ, ಉತ್ತಮ ವಿದ್ಯಾರ್ಥಿಗಳಾಗಲೂ ಸಾಧ್ಯವಾಗುತ್ತದೆ.

1.87 ಲಕ್ಷ ಪಠ್ಯ ಪುಸ್ತಕಗಳ ಕೊರತೆ

ಬೆಳಗಾವಿ ವಿಭಾಗದ ಶಾಲೆಗಳಿಗೆ ಒಟ್ಟು 2 ಕೋಟಿ ಪಠ್ಯಪುಸ್ತಕಗಳ ಅಗತ್ಯವಿದೆ. ಈ ಪೈಕಿ, ಇನ್ನೂ 1.87 ಲಕ್ಷ ಪುಸ್ತಕಗಳ ಕೊರತೆ ಇದೆ. ಆದಷ್ಟು ಬೇಗ ಪುಸ್ತಕಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು.

ಯೂಟ್ಯೂಬ್‌ನಲ್ಲೂ ಪಾಠ

ವಿದ್ಯಾರ್ಥಿಗಳ ಆನ್‌ಲೈನ್ ತರಗತಿ ಜತೆಗೆ, ಈಗಾಗಲೇ ದೂರದರ್ಶನದ ಚಂದನ ವಾಹಿನಿಯಲ್ಲಿ ಪಾಠಗಳು ಪ್ರಸಾರವಾಗುತ್ತಿವೆ. ಇದಕ್ಕೆ ಪೂರಕವಾಗಿ, ವಿಷಯವಾರು ಪಾಠಗಳ ವಿಡಿಯೊ ಚಿತ್ರೀಕರಿಸಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು. ಮೊಬೈಲ್ ಫೋನ್ ಹೊಂದಿರುವ ಪಾಲಕರು ತಮ್ಮ ಮಕ್ಕಳಿಗೆ ಯೂಟ್ಯೂಬ್‌ನಲ್ಲಿ ಪಾಠಗಳನ್ನು ತೋರಿಸಬಹುದು.

ಮನಬಂದಂತೆ ಶುಲ್ಕ ವಸೂಲಿ ಮಾಡುವಂತಿಲ್ಲ

ಖಾಸಗಿ ಶಾಲೆಯವರು ಪಾಲಕರಿಂದ ಮನಬಂದಂತೆ ಶುಲ್ಕ ವಸೂಲಿ ಮಾಡುವಂತಿಲ್ಲ. ಮಕ್ಕಳ ಸಂಖ್ಯೆ ಹಾಗೂ ಶಾಲೆ ಅಭಿವೃದ್ಧಿಗೆ ಅನುಗುಣವಾಗಿ ಶುಲ್ಕ ನಿಗದಿಪಡಿಸಬೇಕು. ಪ್ರವೇಶದ ಸಂದರ್ಭದಲ್ಲಿ ಶುಲ್ಕದ ವಿವರವನ್ನು ಪಾಲಕರಿಗೆ ಕಾಣುವಂತೆ ಶಾಲೆಯಲ್ಲಿ ಪ್ರದರ್ಶಿಸಬೇಕು. ಇದೊಂದು ರೀತಿಯಲ್ಲಿ ಪಾಲಕರು ಮತ್ತು ಶಾಲೆ ನಡುವಿನ ಒಪ್ಪಂದವಿದ್ದಂತೆ. ಶಾಲೆಗಳಲ್ಲಿ ನಿಗದಿತ ಶುಲ್ಕಕ್ಕಿಂತ ಹೆಚ್ಚು ವಸೂಲಿ ಮಾಡಿದರೆ, ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರಕ್ಕೆ ದೂರು ನೀಡಬೇಕು. ದೂರು ಪರಿಶೀಲಿಸಿ, ಪ್ರಾಧಿಕಾರ ಕ್ರಮ ಕೈಗೊಳ್ಳಲಿದೆ. ಈ ವರ್ಷದ ಶೈಕ್ಷಣಿಕ ಅವಧಿ ಕಡಿಮೆ ಇರುವುದರಿಂದ, ಅರ್ಧದಷ್ಟು ಮಾತ್ರ ಶುಲ್ಕ ಪಡೆಯುವಂತೆ ಸರ್ಕಾರ ಸೂಚನೆ ನೀಡಿದೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕ್ರಾಂತಿಕಾರಕ

2020–21ರಿಂದ ದೇಶದಲ್ಲಿ ಜಾರಿಗೆ  ಬರಲಿರುವ ಹೊಸ ಶಿಕ್ಷಣ ನೀತಿ ಕ್ರಾಂತಿಕಾರವಾಗಿದೆ. ಮಗುವಿಗೆ ತನಗೆ ಬೇಕಾದ ವಿಷಯ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡುತ್ತದೆ.  ಭವಿಷ್ಯದಲ್ಲಿ ಇದು ನಮ್ಮ ದೇಶದ ಶಿಕ್ಷಣ ವ್ಯವಸ್ಥೆಗೆ ಹೊಸ ಆಯಾಮ ನೀಡಲಿದೆ. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣಕ್ಕೆ ಹೋದಾಗ ಅವರಿಗೆ ಭವಿಷ್ಯದ ಬಾಗಿಲು ತೆರೆದುಕೊಳ್ಳಲಿದೆ. ಪ್ರಸ್ತುತ ರಾಷ್ಟ್ರದಲ್ಲಿ ಶೇ 15 ರಷ್ಟು ಉನ್ನತ ಶಿಕ್ಷಣಕ್ಕೆ ಹೋದರೆ 2030ರಲ್ಲಿ ಶೇ 30ರಷ್ಟು ಮಂದಿ ಉನ್ನತ ಶಿಕ್ಷಣಕ್ಕೆ ಹೋಗಲಿದ್ದಾರೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು