ಶನಿವಾರ, ಮೇ 15, 2021
24 °C

ಹುಬ್ಬಳ್ಳಿ-ಹೈದರಾಬಾದ್ ನಡುವಿನ ನೇರ ವಿಮಾನಯಾನಕ್ಕೆ ಜೋಶಿ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೇಂದ್ರ ಸರ್ಕಾರ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಸುಸಜ್ಜಿತವಾಗಿ ಮಾರ್ಪಡಿಸಿದೆ. ಹುಬ್ಬಳ್ಳಿಯಿಂದ ಹೈದರಾಬಾದ್ ನಗರಕ್ಕೆ ವಿಮಾನಯಾನ ಸೇವೆ ಅವಶ್ಯಕತೆ ಇತ್ತು. ಬಹುದಿನಗಳ ಬೇಡಿಕೆ ಈಗ ಈಡೇರಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಬುಧವಾರ ಅಲೈಯನ್ಸ್ ಏರ್‌ವೇಸ್‌ನಿಂದ ಹೈದರಾಬಾದ್‌ಗೆ ಆರಂಭವಾದ ವಿಮಾನಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಾರದಲ್ಲಿ ಮೂರು ದಿನ ಎರಡೂ ಮಾರ್ಗದಿಂದ ಹುಬ್ಬಳ್ಳಿ-ಹೈದರಾಬಾದ್‌ ನಡುವೆ ವಿಮಾನ ಸಂಚರಿಸಲಿದೆ. ಪ್ರಯಾಣಿಕರ ಸಂಖ್ಯೆ ಆಧರಿಸಿ ಮುಂದಿನ ದಿನಗಳಲ್ಲಿ ವಾರದ ಏಳು ದಿನವೂ ಸೇವೆ ವಿಸ್ತರಿಸಲಾಗುವುದು. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿಯವರ ವಿಶೇಷ ಪ್ರಯತ್ನದಿಂದ ಹೈದರಾಬಾದ್ ನಗರಕ್ಕೆ ವಿಮಾನ ಸೇವೆ ಆರಂಭವಾಗಿದೆ ಎಂದರು.

ಹುಬ್ಬಳ್ಳಿಯಿಂದ ಮಂಗಳೂರಿಗೆ‌ ವಿಮಾನ ಸಂಪರ್ಕ ಕಲ್ಪಿಸಬೇಕೆಂದು ಜನ ಬೇಡಿಕೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಸಹ ಶೀಘ್ರವಾಗಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಹುಬ್ಬಳ್ಳಿಯಲ್ಲಿ ರಾತ್ರಿ ಸಹ ವಿಮಾನ ಇಳಿಯಲು ಅವಕಾಶವಿದೆ. ಸ್ವಯಂ ಚಾಲಿತ ಲ್ಯಾಂಡಿಗ್  ವ್ಯವಸ್ಥೆಯಿದೆ. ಈಗಿನ ರನ್ ವೇ ಟ್ರಾಕ್ ವಿಸ್ತರಣೆ ಮಾಡಲಾಗುವುದು.

ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೆ ನೇರವಾಗಿ ವಿಮಾನ ಸೌಲಭ್ಯ ಕಲ್ಪಿಸುವ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಲು ವಿಮಾನ ನಿಲ್ದಾಣ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ. ರನ್ ವೇ ವಿಸ್ತರಿಸಿದ ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ನೇರವಾಗಿ ಅಂತರರಾಷ್ಟ್ರೀಯ ವಿಮಾನ ಸೇವೆಗಳು ಆರಂಭವಾಗಲಿವೆ. ಈಗಾಗಲೇ ಮುಂಬೈ, ಅಹಮದಾಬಾದ್, ಕೊಚ್ಚಿ, ಕೊಣ್ಣೂರ್, ಗೋವಾಗಳಿಗೆ ವಿಮಾನಯಾನ ಸೌಲಭ್ಯ ಕಲ್ಪಿಸಲಾಗಿದೆ. ಕೋವಿಡ್ ನಂತರದ ಸ್ಥಿತಿ ಗತಿಗಳನ್ನು ನೋಡಿಕೊಂಡು ಇತರೆ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸಲಾಗುವುದು ಎಂದರು.

ಅಲೈಯನ್ಸ್ ಏರವೇಸ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹರಪ್ರೀತ್ ಸಿಂಗ್ ಮಾತನಾಡಿ ಏರ್ ಇಂಡಿಯಾ ಭಾರತೀಯರ ಹೃದಯವನ್ನು ಬೆಸೆಯುವ ಕಾರ್ಯ ಮಾಡುತ್ತಿದೆ. ಹುಬ್ಬಳ್ಳಿ ಮಹತ್ವದ ನಗರವಾಗಿದ್ದು, ಇನ್ನಷ್ಟು ವಿಮಾನಯಾನ ಸಂಪರ್ಕದ ಅವಶ್ಯಕತೆ ಇದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಮನವಿ ಮೇರೆಗೆ ಹೈದರಾಬಾದ್ ನಗರಕ್ಕೆ ವಿಮಾನಯಾನ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಕರ್ನಾಟಕ ಹಾಗೂ ತೆಲಂಗಾಣದ ಮಧ್ಯದ ಬಾಂಧವ್ಯ ವೃದ್ಧಿಯಾಗಲಿದೆ ಎಂದರು.

 ಮೈಸೂರಿನಿಂದ ಮಂಗಳೂರು,  ಕಲಬುರ್ಗಿಯಿಂದ ಮುಂಬೈ ಹೀಗೆ ನಾನಾ ನಗರಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಎಚ್ ಎಎಲ್ ನೊಂದಿಗೆ ನಾಗರಿಕ ಪ್ರಯಾಣಿಕ ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಈಶಾನ್ಯ ರಾಜ್ಯಗಳಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಕುಮಾರ ಠಾಕರೆ, ವಿಮಾನ ನಿಲ್ದಾಣ ಭದ್ರತಾಧಿಕಾರಿ ಜಗದೀಶ್ ಹಂಚಿನಾಳ, ಏರ್ ಇಂಡಿಯಾ ಸಿಬ್ಬಂದಿ ನಾಗೇಂದ್ರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು