ಹುಬ್ಬಳ್ಳಿ: ‘ತಿರುಪತಿಯ ಹಾಗೂ ಹಿಂದೂಗಳ ಶಾಪದಿಂದ ವೈ.ಎಸ್. ರಾಜಶೇಖರ ರೆಡ್ಡಿ ಅವರು ಎಲುಬು ಕೂಡ ಸಿಗದಂತೆ ಸಾವಿಗೀಡಾದರು. ಜಗನ್‌ಮೋಹನ್ ರೆಡ್ಡಿಗೂ ಆ ಶಾಪ ತಟ್ಟುತ್ತದೆ’ ಎಂದು ಶ್ರೀರಾಮ ಸೇನೆ ಸಂಘಟನೆಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
‘ತಿರುಪತಿಯ ಏಳು ಗುಡ್ಡಗಳ ಪೈಕಿ ಐದನ್ನು ವೈ.ಎಸ್. ರಾಜಶೇಖರ ರೆಡ್ಡಿ ಅವರು ಕ್ರೈಸ್ತರಿಗೆ ನೀಡಿದ್ದರು. ಲಾಡು ತಯಾರಿಸಲು ಅವರಿಗೇ ಗುತ್ತಿಗೆ ಕೊಟ್ಟಿದ್ದರು’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
‘ಜಗನ್‌ಮೋಹನ್ ರೆಡ್ಡಿಗೆ ಅಧಿಕಾರ ಕೈತಪ್ಪಿದ್ದು ಇದೇ ಶಾಪದಿಂದ. ಪವಿತ್ರ ಪ್ರಸಾದವನ್ನು ಅಪವಿತ್ರಗೊಳಿಸಿದ್ದು ಅಕ್ಷಮ್ಯ. ಮುಂದೆ ಇಂತಹ ಪ್ರಮಾದ ಆಗದಂತೆ ಕೇಂದ್ರ ಹಾಗೂ ಆಂಧ್ರಪ್ರದೇಶ ಸರ್ಕಾರ ಕ್ರಮ ವಹಿಸಬೇಕು’ ಎಂದರು.