ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಅದ್ಧೂರಿ ಗಣೇಶೋತ್ಸವಕ್ಕೆ ಹೆಚ್ಚಿದೆ ತಯಾರಿ

ಕೋವಿಡ್‌ನಿಂದ ಎರಡು ವರ್ಷ ಹಲವು ನಿರ್ಬಂಧ: ಆರ್ಥಿಕ ಚೇತರಿಕೆಗೆ ಮೂಲವಾಗುವ ನಿರೀಕ್ಷೆ
Last Updated 12 ಆಗಸ್ಟ್ 2022, 21:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎರಡು ವರ್ಷಗಳಿಂದ ಕೋವಿಡ್‌ನಿಂದಾಗಿ ಅದ್ಧೂರಿ ಗಣೇಶೋತ್ಸವಕ್ಕೆ ನಿರ್ಬಂಧ ಹಾಕಲಾಗಿತ್ತು. ಆದರೆ ಈ ಬಾರಿ ಯಾವುದೇ ನಿರ್ಬಂಧ ಇಲ್ಲ ಎಂದು ಸರ್ಕಾರ ತಿಳಿಸಿರುವುದರಿಂದ ಈ ವರ್ಷದ ಗಣೇಶೋತ್ಸವ ಕಳೆಗಟ್ಟಲಿದೆ.

ಇದೇ ತಿಂಗಳಾಂತ್ಯದಲ್ಲಿ ಗಣೇಶೋತ್ಸವ (ಆ.31) ಇರುವುದರಿಂದ 700ಕ್ಕೂ ಅಧಿಕ ಸಾರ್ವಜನಿಕ ಗಣಪತಿ ಪ್ರತಿಷ್ಠಾ
ಪನೆಯಾಗುವ ಹುಬ್ಬಳ್ಳಿಯ ಬೀದಿಗಳಲ್ಲಿ ತಯಾರಿ ಭರದಿಂದ ನಡೆದಿದೆ. ಮನೆ ಮನೆಗಳಲ್ಲಿಯೂ ಗಣೇಶನ ಮೂರ್ತಿ ಪ್ರತಿಷ್ಠಾಪಿಸುವುದರಿಂದ ಮೂರ್ತಿ ತಯಾರಕರು ಪುಟ್ಟ–ಪುಟ್ಟ ಗಣೇಶನನ್ನು ಮೂರ್ತಿ ತಯಾರಿಸಿ, ಬಣ್ಣಬಳಿದು ಗ್ರಾಹಕರ ನಿರೀಕ್ಷೆಯಲ್ಲಿದ್ದಾರೆ.

ಶಾಮಿಯಾನದವರು, ಸೌಂಡ್‌ ಸಿಸ್ಟಂನವರು, ಅಂಗಡಿಕಾರರು ಗಣಪನ ಹಬ್ಬ ಎದುರು ನೋಡುತ್ತಿದ್ದಾರೆ. ಹಿಂದಿನಂತೆ ಸಾಂಪ್ರದಾಯಿಕವಾಗಿ ಗಣೇಶೋತ್ಸವ ನಡೆಸಲು ಗಜಾನನ ಮಹಾ ಮಂಡಳ ಸಜ್ಜಾಗಿದೆ. ಒಟ್ಟಾರೆ ಉತ್ಸವದ ನೆಪದಿಂದ ಆರ್ಥಿಕವಾಗಿ ಒಂದಿಷ್ಟು ಚೇತರಿಕೆ ಕಾಣುವ ನಿರೀಕ್ಷೆ ಎಲ್ಲರದ್ದೂ.

‘ಕೋವಿಡ್‌ನಿಂದಾಗಿ ಎರಡು ವರ್ಷಗಳಿಂದ ವಿಜೃಂಭಣೆ ಇರಲಿಲ್ಲ, ಈ ಬಾರಿ ಬೇಡಿಕೆ ಹೆಚ್ಚುವ ನಿರೀಕ್ಷೆ ಇದೆ’ ಎನ್ನುತ್ತಾರೆ ಹೊಸೂರು ಬಳಿಯ ಗಣಪನ ಮೂರ್ತಿ ತಯಾರಕರಾದ ಪುಷ್ಪಾ ಗಜಾನನ ಪೋಣಾರ್ಕರ್ ಹಾಗೂ ವಿಶ್ವನಾಥ ಪೋಣಾರ್ಕರ್.

ಹಲವು ದಶಕಗಳಿಂದ ಗಣೇಶನ ಮೂರ್ತಿ ತಯಾರಕ ಚಿತ್ರಗಾರ ಸಮಾಜದ ಹಲವು ಕುಟುಂಬಗಳು ಹೊಸೂರು ಬಳಿ ವಾಸ ಮಾಡುತ್ತಿವೆ. ತಲೆಮಾರುಗಳಿಂದ ಇಲ್ಲಿ ಗಣೇಶನ ಮೂರ್ತಿಗಳನ್ನು ಮನೆಯಲ್ಲಿಯೇ ಸಾಂಪ್ರದಾಯಿಕವಾಗಿ ತಯಾರು ಮಾಡುತ್ತ, ಅವುಗಳ ಮಾರಾಟದಿಂದ ಬದುಕು ಕಂಡುಕೊಂಡಿದ್ದಾರೆ. ಪ್ರತಿ ಮನೆಯಲ್ಲಿಯೂ ಗಂಡ, ಹೆಂಡತಿ, ಮಕ್ಕಳು ಸೇರಿ 300–350 ಸಣ್ಣಪುಟ್ಟ ಮೂರ್ತಿ ತಯಾರಿಸಿ ಮಾರಾಟ ಮಾಡುತ್ತಾರೆ. ₹500ರಿಂದ ₹10 ಸಾವಿರದವರೆಗೂ ಗಣಪನ ಮೂರ್ತಿಗಳು ಇಲ್ಲಿ ಸಿಗುತ್ತವೆ. ಎರಡು ವರ್ಷ ಮೂರ್ತಿ ತಯಾರಕರಿಗೆ ಕೋವಿಡ್‌ ಆರ್ಥಿಕವಾಗಿ ಪೆಟ್ಟು ನೀಡಿತ್ತು.

‌‘ಈ ಬಾರಿಯ ಗಣೇಶ ಹಬ್ಬಕ್ಕೆ ಎಲ್ಲ ನಿರ್ಬಂಧ ತೆಗೆದುಹಾಕಿರುವುದಾಗಿ ಸರ್ಕಾರ ಈಚೆಗಷ್ಟೇ ಹೇಳಿದ್ದು ದೊಡ್ಡ ದೊಡ್ಡ ಗಣಪತಿ ತಯಾರು ಮಾಡುವುದು ಹೇಗೆ? ಸರ್ಕಾರ ಮೊದಲೇ ಆದೇಶ ಹೊರಡಿಸಬೇಕಿತ್ತು. ಆಗೊಂದಿಷ್ಟು ಬೇಡಿಕೆ ಹೆಚ್ಚುತ್ತಿತ್ತು’ ಎನ್ನುತ್ತಾರೆ ಹಿರಿಯ ಮೂರ್ತಿ ತಯಾರಕ ಗಣೇಶ ಪೋಣಾರ್ಕರ್.

‘ಕೋವಿಡ್‌ ಕಾಟದಿಂದ ಸಂಭ್ರಮವೇ ಇರಲಿಲ್ಲ; ನಷ್ಟದಲ್ಲಿದ್ದೆವು. ಈ ವರ್ಷ ಅದ್ಧೂರಿಯಾಗಲಿದೆ’ ಎಂದು ಯಾದವಾಡ ಶಾಮಿಯಾನದ ಶ್ರೀನಿವಾಸ ವಿಶ್ವಾಸ ವ್ಯಕ್ತಪಡಿಸಿದರು.

‘ಈ ವರ್ಷ ಪಾರಂಪರಿಕ ವೈಭವ, ವಿಜೃಂಭಣೆಯಿಂದ, ಸಾಂಸ್ಕೃತಿಕ ಕಲಾಉತ್ಸವಗಳ ಸಹಿತ ಗಣೇಶೋತ್ಸವ ನಡೆಯಲಿದೆ. ಆ ನಿಟ್ಟಿನಲ್ಲಿ ನಮ್ಮ ತಯಾರಿ ನಡೆದಿದೆ’ ಹುಬ್ಬಳ್ಳಿ ಗಜಾನನ ಮಹಾಮಂಡಳದ ಅಧ್ಯಕ್ಷ ಡಿ.ಗೋವಿಂದರಾವ್ ತಿಳಿಸಿದ್ದಾರೆ.

ಪಿಒಪಿ ಕಾಟಕ್ಕೆ ಕಡಿವಾಣ ಹಾಕಿ

‘ಮಣ್ಣಿನ ಗಣಪನ ಮೂರ್ತಿ ಸಾಂಪ್ರದಾಯಿಕವಾಗಿ ನಾವು ಮಾಡುತ್ತೇವೆ. ಸರ್ಕಾರ ‍ಪಿಒಪಿ ಗಣಪನ ತಯಾರಿ ನಿರ್ಬಂಧಿಸಿದೆ. ಆದರೆ ಈಗಲೂ ಹಲವೆಡೆ ಅಕ್ರಮವಾಗಿ ಇದನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಪರಿಸರ ಇಲಾಖೆಯವರು, ಮಹಾನಗರ ಪಾಲಿಕೆಯವರು ಕಟ್ಟುನಿಟ್ಟಾಗಿ ಇದನ್ನು ಪತ್ತೆಮಾಡಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಗಣೇಶ ಪೋಣಾರ್ಕರ್ ಒತ್ತಾಯಿಸಿದರು.

‘ಸಾಂಪ್ರದಾಯಿಕವಾಗಿ ಮೂರ್ತಿ ತಯಾರಿ ಮಾಡುವವರಿಗಿಂತ ಪಿಒಪಿ ಮೂರ್ತಿ ತಂದು ಮಾರಾಟ ಮಾಡುವವರೇ ನಮಗೆ ದೊಡ್ಡ ಹೊಡೆತ ಕೊಡುತ್ತಿದ್ದಾರೆ’ ಎನ್ನುತ್ತಾರೆ ಪುಷ್ಪಾ.

‘ತಿರಂಗಾ ಅವಾರ್ಡ್ -2022’

ಹುಬ್ಬಳ್ಳಿಯ ಗಜಾನನ ಮಹಾಮಂಡಳಿಯು 30 ವರ್ಷಗಳಿಂದನೀಡುತ್ತ ಬಂದಿರುವ ವಾರ್ಷಿಕ ಪ್ರಶಸ್ತಿಯನ್ನು ಈ ವರ್ಷವೂ ಮುಂದುವರಿಸಲಿದ್ದು, ಈ ಬಾರಿ ಸ್ವಾತಂತ್ರ್ಯದ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ 50 ಅತ್ಯುತ್ತಮ ಸಾರ್ವಜನಿಕ ಗಣಪನಿಗೆ ‘ತಿರಂಗಾ ಅವಾರ್ಡ್-2022’ ನೀಡಲಾಗುತ್ತಿದೆ. ಅತ್ಯುತ್ತಮ ವಿಗ್ರಹ, ಅಲಂಕಾರ ಹಾಗೂ ವೇದಿಕೆಗೆ ಈ ಪ್ರಶಸ್ತಿ ಸಲ್ಲಲಿದೆ. ಎರಡು ವರ್ಷ ಕೋವಿಡ್‌ನಿಂದಾಗಿ ತಡೆಯಾಗಿತ್ತು ಎಂದು ಮಹಾ ಮಂಡಳದ ಅಧ್ಯಕ್ಷ ಡಿ.ಗೋವಿಂದರಾವ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT