ಬುಧವಾರ, ಆಗಸ್ಟ್ 10, 2022
23 °C

ಧಾರವಾಡ: ಪ್ರೊ. ಎಚ್.ಎಂ. ಮಹೇಶ್ವರಯ್ಯ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ, ಭಾಷಾಶಾಸ್ತ್ರ ವಿದ್ವಾಂಸ, ಸಾಹಿತಿ ಪ್ರೊ.ಎಚ್‌.ಎಂ.ಮಹೇಶ್ವರಯ್ಯ (71)   ಭಾನುವಾರ ನಿಧನರಾದರು. 

ಅವರಿಗೆ ಪತ್ನಿ, ಕರ್ನಾಟಕ ಕಾಲೇಜಿನ ನಿವೃತ್ತ ಪ್ರಾಚಾರ್ಯೆ ಪ್ರೊ. ರಾಜೇಶ್ವರಿ ಮಹೇಶ್ವರಯ್ಯ ಸೇರಿದಂತೆ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ನಿವೃತ್ತಿ ಬಳಿಕ ಧಾರವಾಡ ಕಲ್ಯಾಣನಗರದಲ್ಲಿ ವಾಸವಾಗಿದ್ದರು.

ಅವರಿಗೆ ತಿಂಗಳ ಹಿಂದೆ ಕೋವಿಡ್‌ ತಗುಲಿತ್ತು. ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಮನೆ ಮರಳಿದ್ದರು. ಮತ್ತೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ.

ಮೂಲತಃ ಶಿವಮೊಗ್ಗ ಜಿಲ್ಲೆಯ ಹಿತ್ತಲ ಗ್ರಾಮದವರಾದ ಅವರು 1950ರ ನವೆಂಬರ್ 14 ರಂದು ಜನಿಸಿದ್ದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದಿದ್ದರು. ರಾಷ್ಟ್ರೀಯ ಪರೀಕ್ಷಾ ಸೇವಾ ಆಯೋಗ ಮತ್ತು ಸೆಂಟ್ರಲ್ ಇನ್‌ಸ್ಟಿಟ್ಯೂಟ್‌ ಮೈಸೂರಿನಲ್ಲಿ ರಾಷ್ಟ್ರೀಯ ಅನುವಾದ ಮಿಷನ್‌ನಿಂದ ತರಬೇತಿ ಪಡೆದಿದ್ದರು. ನಂತರ ಅವರು ಲಂಡನ್‌  ವಿವಿ ಮತ್ತು ಫಿಲಿಡೆಲ್ಫಿಯಾ ವಿವಿಗಳಿಂದ ಭಾಷಾ ಧ್ವನಿಶಾಸ್ತ್ರದ ತರಬೇತಿ ಪಡೆದಿದ್ದರು.

ಕವಿವಿ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ನಿರ್ದೇಶಕ, ಕೇಂದ್ರೀಯ ಭಾರತೀಯ ಭಾಷಾ ಸಂಸ್ಥೆ ಹಿರಿಯ ಪ್ರಾಧ್ಯಾಪಕ, ಮೈಸೂರು ಕನ್ನಡ ಶಾಸ್ತ್ರೀಯ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಭಾರತದ ಅನೇಕ ವಿವಿಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದರು. ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ ಸೆಂಟರ್ ಫಾರ್ ಅಡ್ವಾನ್ಸ್ಡ್ ಸ್ಟಡಿ ಇನ್ ವಿಸಿಟಿಂಗ್ ಫೆಲೋ ಆಗಿ ಸೇವೆ ಸಲ್ಲಿಸಿದ್ದರು. ಬ್ಯಾಂಕಾಕ್ ಹಾಗೂ ಜರ್ಮನಿಯಲ್ಲಿ ಭಾಷಾ ವಿಜ್ಞಾನ ಕುರಿತು ಉಪನ್ಯಾಸಗಳನ್ನು ನೀಡಿದ್ದರು.

‘ಪೂರ್ಣಚಂದ್ರ ತೇಜಸ್ವಿ’,‘ಮಹಾರಾಷ್ಟ್ರ ಜಾನಪದ’ ಇವರ ಪ್ರಮುಖ ಕೃತಿಗಳು. ‘ಕರ್ನಾಟಕದ ಭಾಷೆಗಳು’ ಸಂಪಾದಿತ ಕೃತಿ. ಕನ್ನಡ ಭಾಷೆ ಹಾಗೂ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ‘ಎಂ.ಎ.ಕಲಬುರ್ಗಿ ರಾಷ್ಟ್ರೀಯ ಸಾಹಿತ್ಯ ಸಂಶೋಧನಾ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. 

ಅವರ ಅಂತ್ಯಕ್ರಿಯೆ ಕರ್ನಾಟಕ ವಿವಿ ರುದ್ರಭೂಮಿಯಲ್ಲಿ ಸೋಮವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು