ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಹೆಸರು ಪತ್ರಿಕೆಯಲ್ಲಿ ಪ್ರಕಟ

₹50 ಸಾವಿರಕ್ಕಿಂತ ಹೆಚ್ಚಿನ ಮೊತ್ತ ಉಳಿಕೆಯಾಗಿದ್ದರೆ ಕ್ರಮ
Last Updated 31 ಆಗಸ್ಟ್ 2018, 15:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ, ₹50 ಸಾವಿರಕ್ಕಿಂತ ಹೆಚ್ಚಿನ ತೆರಿಗೆ ಉಳಿಸಿಕೊಂಡಿರುವವರ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟಿಸಲು ನಿರ್ಧರಿಸಿದೆ.

ಶುಕ್ರವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೆರಿಗೆ ವಸೂಲಿಯಲ್ಲಿ ಕಳಪೆ ಸಾಧನೆಯಾಗುತ್ತಿರುವ ಬಗ್ಗೆ ಆಡಳಿತ– ಮತ್ತು ವಿರೋಧ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಸಂಕೀರ್ಣಗಳು, ದೊಡ್ಡ ಸಂಸ್ಥೆಗಳು ಬಾಕಿ ಉಳಿಸಿಕೊಂಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ದೇಶಪಾಂಡೆ ಪ್ರತಿಷ್ಠಾನ, ಇನ್ಪೊಸಿಸ್, ಅಂಜುಮನ್ ಸಂಸ್ಥೆಗಳ ಹೆಸರನ್ನು ಸಹ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮೇಯರ್ ಸುಧೀರ್ ಸರಾಫ, ‘ತೆರಿಗೆ ಬಾಕಿ ಉಳಿಸಿಕೊಂಡಿರುವ ಸಂಸ್ಥೆಯ ಹಾಗೂ ವ್ಯಕ್ತಿಗಳ ಹೆಸರನ್ನು ಪ್ರತಿ ತಿಂಗಳು ಪತ್ರಿಕೆಗಳಲ್ಲಿ ಪ್ರಕಟಿಸಿ. ವಸೂಲಿ ಮಾಡಲು ಕಠಿಣ ಕ್ರಮ ಕೈಗೊಳ್ಳಿ’ ಎಂದು ಕಮಿಷನರ್ ಶಕೀಲ್ ಅಹ್ಮದ್ ಅವರಿಗೆ ಸೂಚನೆ ನೀಡಿದರು.

2018–19ನೇ ಸಾಲಿನಲ್ಲಿ ₹64 ಕೋಟಿ ತೆರಿಗೆ ವಸೂಲಿ ಗುರಿ ಇದ್ದು, ಈ ವರೆಗೆ ₹36 ಕೋಟಿ ಸಂಗ್ರಹವಾಗಿದೆ. ಪ್ರತಿಯೊಬ್ಬ ಕಂದಾಯ ಅಧಿಕಾರಿಗೆ 600 ಚಲನ್ ನೀಡುವ ಗುರಿ ನೀಡಲಾಗಿದೆ. ಅಲ್ಲದೆ ವಸೂಲಾತಿಗಾಗಿಯೇ ತಂಡಗಳನ್ನು ರಚಿಸಲಾಗಿದ್ದು, ದೊಡ್ಡ ಪ್ರಮಾಣದಲ್ಲಿ ಬಾಕಿ ಇರುವ ಕಡೆ ತೆರಳಿ ವಸೂಲಿ ಮಾಡುವರು ಎಂದು ಕಮಿಷನರ್ ಹೇಳಿದರು.

ಗುತ್ತಿಗೆ ಅವಧಿ ಮುಗಿದಿರುವ ಪಾಲಿಕೆ ಮಳಿಗೆಗಳನ್ನು ಪುನರ್ ಹರಾಜು ಹಾಕುವಂತೆಯೂ ಸದಸ್ಯರು ಒತ್ತಾಯಿಸಿದರು. ಈಗ ಬಾಡಿಗೆ ರೂಪದಲ್ಲಿ ಕೇವಲ ₹5.74 ಕೋಟಿ ಮಾತ್ರ ಬರುತ್ತಿದೆ. ಮರು ಹರಾಜು ಮಾಡಿದರೆ ₹40 ಕೋಟಿಗೆ ಏರಿಕೆಯಾಗಲಿದೆ ಎಂಬ ಅಭಿಪ್ರಾಯ ಕೇಳಿ ಬಂತು. ಹಣಕಾಸು ಸ್ಥಾಯಿ ಸಮಿತಿಯ ಎದುರು ಈ ವಿಷಯ ಇದೆ, ಅವರು ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಕಮಿಷನರ್ ಹೇಳಿದರು.

ಉದ್ಯಾನ ಅತಿಕ್ರಮಣದ ವಿರುದ್ಧ ಸಹ ಪಾಲಿಕೆ ಕೈಗೊಳ್ಳುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಗಣೇಶ ಟಗರಗುಂಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಅಧಿಕಾರಿಗಳು, ವಲಯ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದರು.

ಕೇವಲ ವಲಯ ಕಚೇರಿಗೆ ಕಳುಹಿಸಲಾಗಿದೆ ಎಂದರೆ ಸಾಲದು, ಅತಿಕ್ರಮಣ ತೆರವುಗೊಳಿಸದ ಸಂಬಂಧಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದು ಮೇಯರ್ ತಾಕೀತು ಮಾಡಿದರು.

ರಸ್ತೆ ಗುಂಡಿಗಳಿಂದಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿರುವ ಎಲ್ಲ ರಸ್ತೆ ಗುಂಡಿ ಮುಚ್ಚುವ ಪ್ರಕ್ರಿಯೆ ಆರಂಭವಾಗಿದೆ, ಬಿಟ್ಟು ಹೋಗಿರುವ ಕೆಲವು ಮುಖ್ಯ ರಸ್ತೆಗಳಲ್ಲಿ ಕ್ಯಾಮೆರಾ ಸಮೀಕ್ಷೆ ಮಾಡಲಾಗುವುದು ಎಂದು ಶಕೀಲ್ ಅಹ್ಮದ್ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT