ಅಣ್ಣಿಗೇರಿ: ಬಾಂಗ್ಲಾ ದೇಶದಲ್ಲಿ ಇತ್ತೀಚೆಗೆ ಹಿಂದೂ ದೇವಾಲಯ ಧ್ವಂಸ ಮಾಡಿ, ಹಿಂದೂ ಯುವತಿಯರನ್ನು ಸಾಮೂಹಿಕ ಅತ್ಯಾಚಾರ ಮಾಡುವ ಮೂಲಕ ಮಾನವಕುಲಕ್ಕೆ ಅವಮಾನ ಮಾಡಿದ್ದಾರೆ ಎಂದು ಯುವಶಕ್ತಿ ಮುಖಂಡ ಭರತೇಶ ಜೈನ್ ಬುಧವಾರ ಆರೋಪಿಸಿದರು.
ಹಿಂದೂ ಯುವತಿಯರನ್ನು ಬಾಂಗ್ಲಾ ದೇಶದ ಮತಾಂಧರು ಮಾನವೀಯತೆ ಮರೆತು ಸಿಕ್ಕ ಸಿಕ್ಕಲ್ಲಿಯೇ ಬರ್ಬರವಾಗಿ ಹತ್ಯೆ ಮಾಡುತ್ತಿರುವುದು ಖೇದಕರ ಸಂಗತಿ. ಈ ಹಿನ್ನಲೆಯಲ್ಲಿ ಪಟ್ಟಣದ ಯುವಶಕ್ತಿ ಪಡೆ ಕೆಲಕಾಲ ಬಸ್ ನಿಲ್ದಾಣದ ಹತ್ತಿರ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಸರ್ಕಾರದ ಗಮನಕ್ಕೆ ತಂದರು.
ಮುಖಂಡ ಚಂಬಣ್ಣ ಸುರಕೋಡ ಮಾತನಾಡಿ, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅಮಾನವೀಯ ಘಟನೆಯನ್ನು ಕೂಡಲೇ ರಾಜ್ಯ ಸರ್ಕಾರ ಹಾಗೂ ವಿದೇಶಾಂಗ ಸಚಿವರು ವಿಶ್ವಸಂಸ್ಥೆಯ ಗಮನಕ್ಕೆ ತಂದು ಅವರ ವಿರುದ್ದ ಕಠಿಣ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿ ಆರ್.ಎಚ್.ಕುನ್ನಿಬಾಯಿ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಶಂಕ್ರಪ್ಪ ಇಂಗಳಹಳ್ಳಿ, ಸುರೇಶ ಮಂಗಳೂರ, ಜಗದೀಶ ಕೋಳಿವಾಡ, ಸಂಜು ನಾಗನಕೇರಿ ಮೊದಲಾದವರು ಪಾಲ್ಗೊಂಡಿದ್ದರು.